PM Modi Chikkaballapur visit: ಫೆಬ್ರವರಿಯಲ್ಲಿ ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ – ಸಚಿವ ಡಾ. ಕೆ. ಸುಧಾಕರ್

| Updated By: ಸಾಧು ಶ್ರೀನಾಥ್​

Updated on: Jan 27, 2023 | 5:48 PM

Dr K Sudhakar: ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಕಾಲೇಜು ಉದ್ಘಾಟನೆಯಾಗಲಿದೆ. ಪ್ರಧಾನಿಯವರನ್ನು ಕಾಣಲು ಜಿಲ್ಲೆಯ ಲಕ್ಷಾಂತರ ಜನರು ಅಂದಿನ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಹಾಗಾಗಿ ಇದಕ್ಕೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ -ಸಚಿವ ಡಾ. ಕೆ. ಸುಧಾಕರ್

PM Modi Chikkaballapur visit: ಫೆಬ್ರವರಿಯಲ್ಲಿ ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ - ಸಚಿವ ಡಾ. ಕೆ. ಸುಧಾಕರ್
ಫೆಬ್ರವರಿಯಲ್ಲಿ ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ
Follow us on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಗ್ರಾಮದ ಬಳಿ ನಿರ್ಮಾಣವಾಗ್ತಿರುವ ಸರ್ಕಾರಿ ಮೆಡಿಕಲ್ ಕಾಲೇಜು (Medical College) ಉದ್ಘಾಟನೆಗೆ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಆಗಮಿಸಲಿದ್ದಾರೆ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರು ಹಾಗೂ ಆರೋಗ್ಯ ಖಾತೆ ಹಾಗೂ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ. ಕೆ. ಸುಧಾಕರ್ (Health Minister Dr K Sudhakar) ತಿಳಿಸಿದ್ದಾರೆ. ಅವರು ಇಂದು ಚಿಕ್ಕಬಳ್ಳಾಪುರ ತಾಲೂಕಿನ ಚಿತ್ರಾವತಿ ಸುಬ್ರಹ್ಮಣ್ಯಸ್ವಾಮಿ ಜಾತ್ರೆಗೆ ಚಾಲನೆ ನೀಡಿದ ನಂತರ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು.

ಮುಂದಿನ ತಿಂಗಳು ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಕಾಲೇಜು ಉದ್ಘಾಟನೆಯಾಗಲಿದೆ. ಪ್ರಧಾನಿಯವರನ್ನು ಕಾಣಲು ಜಿಲ್ಲೆಯ ಲಕ್ಷಾಂತರ ಜನರು ಅಂದಿನ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಹಾಗಾಗಿ ಇದಕ್ಕೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ವೈದ್ಯಕೀಯ ಕಾಲೇಜು ಉದ್ಘಾಟನೆಗಾಗಿ ಗುತ್ತಿಗೆದಾರರು ಸೇರಿದಂತೆ ಸಂಬಂಧಿಸಿದ ಎಲ್ಲರೂ ಹಗಲಿರುಳು ಶ್ರಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ನಾಯಕರಾಗಿ ಬೆಳೆದಿದ್ದಾರೆ. ಹಿಂದುಳಿದ ವರ್ಗಗಳಲ್ಲಿ ಅವರು ಅಗ್ರಗಣ್ಯ ನಾಯಕರಾಗಿದ್ದಾರೆ, ಬೇರೆಯವರ ರೀತಿಯಲ್ಲಿ ಅವರು ಎಂದೂ ಅಹಿಂದ ನಾಯಕ ಎಂದು ಹೇಳಿಲ್ಲ. ಪ್ರಧಾನಿಗಳು ದೇಶಕ್ಕೇ ಅತ್ಯಂತ ದೊಡ್ಡ ಅಹಿಂದ ನಾಯಕರಾಗಿದ್ದು, ಅಂತಹ ನಾಯಕರು ಕ್ಷೇತ್ರಕ್ಕೆ ಬರುವ ಬಗ್ಗೆ ಜನರಲ್ಲಿ ಕುತೂಹಲ ಇದೆ ಎಂದು ಹೇಳಿದರು.

ಮುಖ್ಯಮಂತ್ರಿ ಅಭ್ಯರ್ಥಿಯಲ್ಲ ಆದ್ರೆ ಮುಖ್ಯಮಂತ್ರಿಗಳ ತಂಡದಲ್ಲಿ ಇದ್ದೇನೆ- ಸಚಿವ ಡಾ. ಕೆ. ಸುಧಾಕರ್

ಚಿಕ್ಕಬಳ್ಳಾಪುರ: ಇತ್ತೀಚೆಗೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಚಿಕ್ಕಬಳ್ಳಾಪುರ ಉತ್ಸವಕ್ಕೆ ಆಗಮಿಸಿದ್ದ ಘಟಾನುಗಟಿ ಬಿಜೆಪಿ ಮುಖಂಡರುಗಳು ಹಾಗೂ ಪ್ರಭಾವಿ ಸಚಿವರುಗಳು, ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರು ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆಗಳ ಸಚಿವರಾದ ಡಾ. ಕೆ. ಸುಧಾಕರ್ ಗೆ ರಾಜಕೀಯದಲ್ಲಿ ಒಳ್ಳೆಯ ಉನ್ನತ ಭವಿಷ್ಯವಿದೆ, ರಾಜ್ಯದ ಭವಿಷ್ಯದ ಮುಖ್ಯಮಂತ್ರಿಯಾಗ್ತಾರೆ ಎಂದು ಭವಿಷ್ಯ ನುಡಿದಿದ್ದರು. ಇದರ ಬಗ್ಗೆ ಇಂದು ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಚಿವ ಡಾ. ಕೆ. ಸುಧಾಕರ್ ಅವರು ತಾವು ಮುಖ್ಯಮಂತ್ರಿ ಅಭ್ಯರ್ಥಿಯಲ್ಲ, ಆದ್ರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಂಡದಲ್ಲಿ ಇದ್ದೇನೆ. ನಾಡಿನ ಮುಖ್ಯಮಂತ್ರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾನು ಈಗತಾನೆ ಮೂರು ಬಾರಿ ಶಾಸಕನಾಗಿದ್ದೇನೆ. ಮತ್ತೆ ರಾಜ್ಯದಲ್ಲಿ ನಮ್ಮ ಬಿಜೆಪಿ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬ ಆಶಯ ಹೊಂದಿದ್ದೇನೆ. ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡುವ ಉದ್ಧೇಶವಿದೆ. ಈ ಕುರಿತು ರಾಜ್ಯದಲ್ಲಿ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಚಿಕ್ಕಬಳ್ಳಾಪುರದ ಚಿತ್ರಾವತಿಯ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವರಲ್ಲಿ ಪ್ರಾರ್ಥಿಸಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದರು.

ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ

Published On - 5:38 pm, Fri, 27 January 23