ಚಿಕ್ಕಬಳ್ಳಾಪುರ: ಜೀವನದ ಸಂಧ್ಯಾ ಕಾಲದಲ್ಲಿ ತಮ್ಮ ಪಾಡಿಗೆ ತಾವು ತಣ್ಣನೆಯ ಊರಿನಲ್ಲಿ ವಾಸವಿದ್ದ ವಾಸವಿ ಜನಾಂಗದ ವೃದ್ಧ ದಂಪತಿಯನ್ನು ಅಮಾನುಷವಾಗಿ (Sidlaghatta Double Murder) ಫೆಬ್ರುವರಿ 10 ರಂದು ಹತ್ಯೆ ಮಾಡಿ, ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಶಿಡ್ಲಘಟ್ಟದ ಪೊಲೀಸರು ಕೊನೆಗೂ ಹಿಡಿದು ತಂದಿದ್ದಾರೆ. ಇಷ್ಟಕ್ಕೂ ಈ ಹಂತಕರು ಯಾರು? ಅವರು ಯಾಕೆ, ಹೇಗೆ ನಡು ರಾತ್ರಿ ಹತ್ಯೆ ಮಾಡಿದರು ಎಂದು ಕೆದಕಿ ನೋಡಿದಾಗ… ಮೂರೂ ಆರೋಪಿಗಳ ಪೈಕಿ ಇಬ್ಬರು ಅಪ್ರಾಪ್ತರು ಮತ್ತೊಬ್ಬ ದುಷ್ಟ, ಯುವಕ ಎಂದು ತಿಳಿದುಬಂದಿದೆ. ದುಷ್ಕೃತ್ಯ ನಡೆದಿದ್ದು ಹೇಗೆ? ಆರೋಪಿಗಳ ಉದ್ದೇಶವೇನಾಗಿತ್ತು? ಅಂದರೆ ಐಷಾರಾಮಿ ಮೋಜಿಗೆ ಬಿದ್ದು ಆರೋಪಿಗಳು ಈ ಘನಘೋರ ಪಾತಕ ಎಸಗಿದ್ದಾರೆ (Murder For Gain) ಎಂದು ಶಿಡ್ಲಘಟ್ಟ ಪೊಲೀಸರು ಸ್ವಲ್ಪ ಮಾಹಿತಿ ನೀಡಿದ್ದಾರೆ. ಈ ಪಾತಕಿಗಳು ಮತ್ತೊಂದು ದರೋಡೆಗೆ ಸಂಚು ರೂಪಿಸುತ್ತಿದ್ದ ವೇಳೆ ಸಿಕ್ಕಿಬಿದ್ದರು ಎಂದು ಸದ್ಯಕ್ಕೆ ಶಿಡ್ಲಘಟ್ಟ ಪೊಲೀಸರು (Sidlaghatta Police) ಹೇಳುತ್ತಿದ್ದಾರೆ. ಮೂವರೂ ಕೋಲಾರ ಜಿಲ್ಲೆ ಶ್ರೀನಿವಾಸಪುರ ಮೂಲದವರು ಎಂಬುದು ಗಮನಾರ್ಹ.
ಪಾತಕಿಗಳ ಗಾಳಕ್ಕೆ ಸಿಕ್ಕಿ ವಿಲವಲ ಒದ್ದಾಡಿ ಪ್ರಾಣ ಕಳೆದುಕೊಂಡ ಅಮಾಯಕ ದಂಪತಿ:
ಅಸಲಿಗೆ ಪಾತಕಿಗಳು ಮೀನು ಹಿಡಿಯಲು ಶಿಡ್ಲಘಟ್ಟಕ್ಕೆ ಬಂದಿದ್ದವರು. ಆದರೆ ಅವರ ಗಾಳಕ್ಕೆ ಸಿಕ್ಕಿ ವಿಲವಲ ಒದ್ದಾಡಿ ಪ್ರಾಣ ಕಳೆದುಕೊಂಡಿದ್ದು ಮಾತ್ರ ಆ ವೃದ್ಧ ದಂಪತಿ ಎಂಬುದು ಶೋಚನೀಯ. ಆಗರ್ಭ ಶ್ರೀಮಂತ ವೃದ್ದ ದಂಪತಿಯ ಮನೆಯಲ್ಲಿದ್ದ ಚಿನ್ನಾಭರಣದ ಮೇಲೆ ಕಣ್ಣು ಹಾಕಿದ್ದ ದುಷ್ಕರ್ಮಿಗಳು ಫೆಬ್ರುವರಿ 10 ರಂದು ಆ ವೃದ್ದ ದಂಪತಿಯನ್ನ ಹತ್ಯೆ ಮಾಡಿ ಮನೆಯಲ್ಲಿದ್ದ ನಗ ನಾಣ್ಯ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ರು. ಆರೋಪಿಗಳು ಚಾಪೆ ಕೆಳಗೆ ತೂರಿದ್ರೆ ಪೊಲೀಸರು ರಂಗೋಲಿ ಕೆಳಗೆ ತೂರಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಹೇಗೆ ಅಂತೀರಾ, ಮುಂದೆ ಸ್ಟೋರಿ ಓದಿ.
ಆದರೆ ಕೊನೆಗೂ ಪೊಲೀಸರ ಬಲೆಗೆ ಸಿಕ್ಕಿಬಿದ್ದ ಪಾತಕಿಗಳು!:
ಅಂದು ಫೆಬ್ರುವರಿ 9 2022 ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರದ ವಾಸವಿ ಕಲ್ಯಾಣ ಮಂಟಪದ ಬಳಿ ಮನೆಯಲ್ಲಿದ್ದ ಶ್ರೀನಿವಾಸಲು-ಪದ್ಮಾವತಿ ದಂಪತಿಯನ್ನ ಹತ್ಯೆ ಮಾಡಿ ಮನೆಯಲ್ಲಿದ್ದ ನಗನಾಣ್ಯ, ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ರು.. ಅಂದು ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ರು.. ಆರೋಪಿಗಳು ಯಾವುದೇ ಸಾಕ್ಷ್ಯಾಧಾರಗಳನ್ನ ಬಿಟ್ಟಿರಲಿಲ್ಲ.. ಜೊತೆಗೆ ನೂರಾರು ಸಿಸಿಟಿವಿ ಮೇಲೆ ಕಣ್ಣಾಡಿಸಿದ್ದರೂ ಕುರುಹುಗಳು ಪತ್ತೆಯಾಗಿರಲಿಲ್ಲ.. ನಾಲ್ಕು ಇನ್ಸ್‌ಪೆಕ್ಟರ್ಸ್ ತಂಡ ಕಟ್ಟಿಕೊಂಡು ತನಿಖೆ ನಡೆಸಿದ್ರೂ ಪತ್ತೆಯಾಗಿರಲಿಲ್ಲ.. ಕೊನೆಗೆ ಆರೋಪಿಗಳು ಮೀನು ಹಿಡಿಯಲು ಬಂದು ಪೊಲೀಸರ ಗಾಳಕ್ಕೆ ಬಿದ್ದಿದ್ದಾರೆ!
ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ:
ಪಾತಕಿಗಳು ಶ್ರೀಮಂತ ದಂಪತಿಯನ್ನ ಹತ್ಯೆ ಮಾಡಿ ಮನೆಯಲ್ಲಿದ್ದ ನಗನಾಣ್ಯ, ಚಿನ್ನಾಭರಣಗಳನ್ನು ಲೂಟಿ ಮಾಡಿದ್ದರು. ಪಾತಕಿಗಳು ಈ ಊರು ಆ ಊರು ಅಂತ ಸುತ್ತುತ್ತಿದ್ದರು. ಕೋಲಾರ ಜಿಲ್ಲೆ ಶ್ರೀನಿವಾಸಪುರ ನಗರದ 20 ವರ್ಷದ ಫೈಜ್ ಸೇರಿದಂತೆ ಇಬ್ಬರು ಅಪ್ರಾಪ್ತ ಬಾಲಕರು ಕೃತ್ಯ ಎಸಗಿರುವುದು ಬಯಲಾಗಿದೆ. ಮೂವರೂ ಆರೋಪಿಗಳು ಸ್ನೇಹಿತರಾಗಿದ್ದು, ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.. ಕುರಿ, ಕೋಳಿ ಕಳ್ಳತನ ಸೇರಿದಂತೆ ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದಾರೆ.. ಬಂಧಿತರ ವಿಚಾರಣೆ ಮುಂದುವರೆಸಿದ್ದೇವೆ.
ಮೋಜು ಮಸ್ತಿಯ ಜೀವನಕ್ಕಾಗಿ ದೀನಕ್ಕೊಂದು ಊರಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಅಪ್ರಾಪ್ತರು ಸೇರಿ ಓರ್ವ ವಯಸ್ಕ ಈಗ ಪೊಲೀಸರ ಬಂಧಿಯಾಗಿದ್ದಾರೆ.. ಕೆರೆಯಲ್ಲಿನ ಮೀನುಗಳನ್ನ ಅಕ್ರಮವಾಗಿ ಹಿಡಿಯಲು ಹೋಗಿ ತಾವೇ ಪೊಲೀಸರ ಬಲೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ.
-ಭೀಮಪ್ಪ ಪಾಟೀಲ್, ಟಿವಿ 9, ಚಿಕ್ಕಬಳ್ಳಾಪುರ
ತಪ್ಪದೆ ಓದಿ: Sidlaghatta ಇತಿಹಾಸದಲ್ಲಿಯೇ ದಂಪತಿಯ ಭೀಕರ ಕೊಲೆ, ಗವಾಕ್ಷಿಯಿಂದ ಇಳಿದು ಕುಕೃತ್ಯ, ನಗನಾಣ್ಯ ದರೋಡೆ
Published On - 2:07 pm, Tue, 29 March 22