Sidlaghatta: ಮಹಾಮಳೆಯಿಂದ ರೈತ ಕುಟುಂಬದಲ್ಲಿ ಎದ್ದಿತು ಬಿರುಗಾಳಿ – ನೊಂದು ತವರುಮನೆ ಸೇರಿದ ಪತ್ನಿ! ಕಂಗಲಾದ ರೈತ

| Updated By: ಸಾಧು ಶ್ರೀನಾಥ್​

Updated on: Sep 13, 2022 | 7:31 PM

chikkaballapur rains: ನೀರಿಲ್ಲದೇ ಕಂಗೆಟ್ಟಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಈಗ ಮಳೆಯ ಹೆಸರು ಕೇಳಿದರೆ ಸಾಕು ನಿಂತನಿಲುವಿನಲ್ಲೇ ನಡುಗುವಂತಾಗಿದೆ. ಮಳೆ ಆಗದಿದ್ದರೂ ಕಷ್ಟ, ಬಂದರೂ ಕಷ್ಟ. ಬೇಕಾದಾಗ ಬರಲ್ಲಾ.. ಬೇಡವೆಂದಾಗ ಬಿಡಲ್ಲ.. ಇತ್ತೀಚಿಗೆ ಸುರಿದ ಧಾರಾಕಾರ ಮಳೆಯಿಂದ ರೈತರಿಗೆ ಬೆಳೆಹಾನಿಯ ಚಿಂತೆಯಾಗಿದೆ.

Sidlaghatta: ಮಹಾಮಳೆಯಿಂದ ರೈತ ಕುಟುಂಬದಲ್ಲಿ ಎದ್ದಿತು ಬಿರುಗಾಳಿ - ನೊಂದು ತವರುಮನೆ ಸೇರಿದ ಪತ್ನಿ! ಕಂಗಲಾದ ರೈತ
ಮಹಾಮಳೆಯಿಂದ ರೈತ ಕುಟುಂಬದಲ್ಲಿ ಎದ್ದಿತು ಬಿರುಗಾಳಿ - ನೊಂದು ತವರುಮನೆ ಸೇರಿದ ಪತ್ನಿ! ಕಂಗಲಾದ ರೈತ
Image Credit source: tv9
Follow us on

ಚಿಕ್ಕಬಳ್ಳಾಪುರ ಜಿಲ್ಲೆಯು ಹೂವು, ಹಣ್ಣು, ತರಕಾರಿ ಬೆಳೆಗಳಿಗೆ ಖ್ಯಾತಿ. ಇಲ್ಲಿಯ ಬಹುತೇಕ ರೈತರು ಹೂವು, ಹಣ್ಣು, ತರಕಾರಿ ಬೆಳೆಗಳನ್ನೇ (Horticulture) ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಇತ್ತೀಚಿಗೆ ಸುರಿದ ಧಾರಾಕಾರ ಮಳೆಯಿಂದ (chikkaballapur rains) 1,500ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿದ್ದ ತೋಟಗಾರಿಕೆ ಬೆಳೆಗಳು ಸಂಪೂರ್ಣ ಹಾಳಾಗಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭೀಕರ ಮಳೆ ಅವಾಂತರದ ಮತ್ತೊಂದು ಮಜಲು ನೋಡುವುದಾದರೆ… ಅದೊಂದು ರೈತ ಕುಟುಂಬದಲ್ಲಿ ಮಳೆ ಹಾಗೂ ಬೆಳೆ ಹಾನಿಯಿಂದ ನೊಂದು ರೈತನ ಪತ್ನಿ ತವರುಮನೆ ಸೇರಿದ್ದಾಳೆ. ಇದರಿಂದ ರೈತ ಕಂಗಲಾಗಿದ್ದಾನೆ. ಈ ಕುರಿತು ಒಂದು ವರದಿ

ಇತ್ತೀಚಿಗೆ ಸುರಿದ ಧಾರಾಕಾರ ಮಳೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಇರೋಬರೋ ಹೂವು, ಹಣ್ಣು, ತರಕಾರಿ ಬೆಳೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ (Sidlaghatta) ತಾಲ್ಲೂಕು, ಚಂದಗಾನಹಳ್ಳಿ ಗ್ರಾಮದ ರೈತ ಭೈರೇಗೌಡ, ಸಾಲಸೋಲ ಮಾಡಿ ಬೆಳೆದಿದ್ದ ಟೊಮಟೋ ಬೆಳೆಯನ್ನು ಕಳೆದುಕೊಂಡು ಕೌಟುಂಬಿಕ ಸಂಕಷ್ಟಕ್ಕೆ ಸಿಲುಕಿದ್ದಾನೆ!

ರೈತ ಭೈರೇಗೌಡನ ಪತ್ನಿ, ಬೆಳೆ ನಷ್ಟದಿಂದ ನೊಂದು ತವರು ಮನೆ ಸೇರಿದ್ದಾಳಂತೆ. ಭೈರೇಗೌಡ ತನ್ನ ಒಂದು ಎಕರೆ ಜಮೀನಿನಲ್ಲಿ ಒಂದು ಲಕ್ಷ ರೂಪಾಯಿ ಸಾಲ ಮಾಡಿ, ಟೊಮಟೋ ಬೆಳೆದಿದ್ದ. ಟೊಮಟೋ ಹುಲುಸಾಗಿ ಬಂದು ಹಣ್ಣು ಕೈಗೆ ಸಿಗುತ್ತಿದ್ದಂತೆ ವಿಪರೀತ ಮಳೆಯಾಗಿ ತೋಟದಲ್ಲೇ ಹಣ್ಣು ಹಾಳಾಗಿದೆ. ಅಳಿದುಳಿದ ಟೊಮಟೋವನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಬೆಳೆ ಸಿಕ್ಕಿಲ್ಲ. ಟೊಮಟೋ ತೋಟದಲ್ಲಿ… ಬೀನ್ಸ್ ಬಿತ್ತನೆ ಮಾಡಿದರೆ.. ಮಳೆಯಿಂದ ತೇವಾಂಶ ಹೆಚ್ಚಾಗಿ ಅದೂ ಸಹಾ ಕಮರಿ ಹೋಗಿದೆ.

ಇದು ರೈತ ಬೈರೇಗೌಡನ ಕಣ್ಣೀರ ಕಥೆಯಾದರೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ 1500 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಹೂವು, ಹಣ್ಣು, ತರಕಾರಿ ಬೆಳೆಗಳು ಸಂಪೂರ್ಣ ಹಾಳಾಗಿವೆ. ಅದರಲ್ಲೂ ತರಕಾರಿ ಬೆಳೆಗಳಾದ ಕ್ಯಾರೆಟ್, ಕೋಸು, ಮೆಣಿಸಿನಕಾಯಿ, ಹೀರೇಕಾಯಿ, ಬೆಂಡೇಕಾಯಿ, ಹಾಗಲಕಾಯಿ, ಕುಂಬಳಕಾಯಿ ಸೇರಿದಂತೆ ಬಹುತೇಕ ತರಕಾರಿ ಬೆಳೆಗಳು ಹಾಳಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆಯಷ್ಟು ತರಕಾರಿಗಳು ಲಭ್ಯವಾಗುತ್ತಿಲ್ಲ. ಮತ್ತೊಂದಡೆ ಈಗಾಗಲೇ ತರಕಾರಿಗಳ ಬೆಲೆ ಗಗನಕ್ಕೇರಿದೆ. ಚಿಕ್ಕಬಳ್ಳಾಪುರದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಆಗಲೇ… ತರಕಾರಿಗಳ ಬೆಲೆ ಏರಿಕೆಯಾಗಿದೆ.

ನೀರಿಲ್ಲದೇ ಕಂಗೆಟ್ಟಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಈಗ ಮಳೆಯ ಹೆಸರು ಕೇಳಿದರೆ ಸಾಕು ನಿಂತನಿಲುವಿನಲ್ಲೇ ನಡುಗುವಂತಾಗಿದೆ. ಮಳೆ ಆಗದಿದ್ದರೂ ಕಷ್ಟ, ಬಂದರೂ ಕಷ್ಟ. ಬೇಕಾದಾಗ ಬರಲ್ಲಾ.. ಬೇಡವೆಂದಾಗ ಬಿಡಲ್ಲ.. ಇತ್ತೀಚಿಗೆ ಸುರಿದ ಧಾರಾಕಾರ ಮಳೆಯಿಂದ ರೈತರಿಗೆ ಬೆಳೆಹಾನಿಯ ಚಿಂತೆಯಾದರೆ ಜನಸಾಮಾನ್ಯರಿಗೆ ತರಕಾರಿಗಳ ಬೆಲೆ ಏರಿಕೆಯ ಚಿಂತೆಯಾಗಿದೆ ಎಂದು ಚಿಕ್ಕಬಳ್ಳಾಪುರ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ದಲ್ಲಾಳಿಯಾಗಿರುವ ನಿರಂಜನ್ ಅಲವತ್ತುಕೊಂಡಿದ್ದಾರೆ. – ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ

Published On - 6:16 pm, Tue, 13 September 22