Sidlaghatta KRIDL Scam: ಪಂಚಾಯತ್‌ರಾಜ್ ಇಲಾಖೆಯಲ್ಲಿ ಬಗೆದಷ್ಟೂ ಬಯಲಾಗ್ತಿದೆ ಹಗರಣ, ಕಾಮಗಾರಿ ಮಾಡದೆಯೇ ಬಿಲ್ ಡ್ರಾ ಮಾಡಿ ಅವ್ಯವಹಾರ ಆರೋಪ
ಟಿವಿ 9 ಪ್ರಕಟಿಸಿದ ಈ ಹಿಂದಿನ ಸರಣಿಯಲ್ಲಿ ಮೂರು ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರವನ್ನು ಎಳೆಎಳೆಯಾಗಿ ಬಿಡಿಸಿಡಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಶಿಡ್ಲಘಟ್ಟದ ದೇವರಮಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೊಣ್ಣೇನಹಳ್ಳಿ, ದೇವರಮಳ್ಳೂರು ಗ್ರಾಮದ ರಸ್ತೆಗೆ ಸಿ.ಸಿ.ರಸ್ತೆ ನಿರ್ಮಾಣ ಮಾಡಿದ್ದಾಗಿ 50.00 ಲಕ್ಷ ರೂಪಾಯಿ ಬಿಲ್ ಡ್ರಾ ಮಾಡಲಾಗಿದೆಯಂತೆ. ಆದರೆ ಇದೇ ಕಾಮಗಾರಿಯನ್ನು ಈ ಹಿಂದೆ 2021-22, 5054 ಲೆಕ್ಕಶೀರ್ಷಿಕೆ, ದಿನಾಂಕ 21-04-2022 ರಲ್ಲಿ ಸುಮಾರು 1 ಕೋಟಿ ರೂಪಾಯಿ ಬಳಸಿಕೊಂಡು ಕೆಲಸ ಮಾಡಲಾಗಿದೆ!
ಚಿಕ್ಕಬಳ್ಳಾಪುರ : ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ (Karnataka Rural Infrastructure Development Limited -KRIDL) ಚಿಕ್ಕಬಳ್ಳಾಪುರ ವಿಭಾಗದಲ್ಲಿ ಬಗೆದಷ್ಟೂ ಹಗರಣಗಳ ಸರಮಾಲೆ (Sidlaghatta KRIDL Scam) ಬಿಚ್ಚಿಕೊಳ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2022-23ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದ ಲೆಕ್ಕಶೀರ್ಷಿಕೆ 5054ರ ಯೋಜನೆಯಡಿ ಮಂಜೂರಾದ ಸುಮಾರು 20 ಕೋಟಿ ರೂಪಾಯಿಗಳ ವಿಶೇಷ ಅನುದಾನ ದುರ್ಬಳಕೆ, ಕಾಮಗಾರಿಗಳು ಬಹುತೇಕ ಕಳಪೆ, ಕಾಮಗಾರಿ ಮಾಡದೇ ಬಿಲ್ ಡ್ರಾ, ನಿಗದಿತ ಸ್ಥಳದಲ್ಲಿ ಕಾಮಗಾರಿ ಮಾಡದೇ ಹಾಗೂ ಪುನರಾವರ್ತಿತ ಕಾಮಗಾರಿಗಳನ್ನು ತೋರಿಸಿ ಸರ್ಕಾರದ ಬೊಕ್ಕಸಕ್ಕೆ ಮೋಸ ಮಾಡಿರುವುದು (Corruption) ಮುಂದುವರೆದಿದೆ.
ಈ ಹಿಂದಿನ ಸರಣಿಯಲ್ಲಿ ಮೂರು ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರವನ್ನು ಎಳೆಎಳೆಯಾಗಿ ಬಿಡಿಸಿಡಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಶಿಡ್ಲಘಟ್ಟ ತಾಲ್ಲೂಕು, ದೇವರಮಳ್ಳೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಸೊಣ್ಣೇನಹಳ್ಳಿ, ದೇವರಮಳ್ಳೂರು ಗ್ರಾಮದ ರಸ್ತೆಗೆ ಸಿ.ಸಿ.ರಸ್ತೆ ನಿರ್ಮಾಣ ಮಾಡಿದ್ದಾಗಿ 50.00 ಲಕ್ಷ ರೂಪಾಯಿ ಬಿಲ್ ಡ್ರಾ ಮಾಡಲಾಗಿದೆಯಂತೆ. ಆದರೆ ಇದೇ ಕಾಮಗಾರಿಯನ್ನು ಈ ಹಿಂದೆ 2021-22, 5054 ಲೆಕ್ಕಶೀರ್ಷಿಕೆ, ದಿನಾಂಕ 21-04-2022 ರಲ್ಲಿ ಸುಮಾರು 1 ಕೋಟಿ ರೂಪಾಯಿ ಬಳಸಿಕೊಂಡು ಕೆಲಸ ಮಾಡಲಾಗಿದೆ. ಇದರ ಪೋಟೋಗಳನ್ನೇ ಬಳಸಿಕೊಂಡು ನೂತನ ಕಾಮಗಾರಿ ಮಾಡದೇ 50 ಲಕ್ಷ ರೂಪಾಯಿ ಹೊಸ ಬಿಲ್ ಮಾಡಲಾಗಿದೆ (Allegation).
2022-23ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದ ಲೆಕ್ಕಶೀರ್ಷಿಕೆ 5054ರ ಯೋಜನೆಯಡಿಯಲ್ಲಿ ದೇವರಮಳ್ಳೂರು ಗ್ರಾಮಪಂಚಾಯ್ತಿ ಮುಖ್ಯರಸ್ತೆಯಿಂದ ಭೂದಾಳು ಗ್ರಾಮಕ್ಕೆ ಸಿ.ಸಿ.ರಸ್ತೆ ನಿರ್ಮಾಣಕ್ಕೆಂದು 50 ಲಕ್ಷ ರೂಪಾಯಿ ಅನುದಾನ ಬಳಸಿಕೊಳ್ಳಲಾಗಿದೆ. ಇದರಲ್ಲಿ 690 ಮೀಟರ್ ಸಿ.ಸಿ.ರಸ್ತೆ ನಿರ್ಮಾಣವಾಗಬೇಕಿತ್ತು ಆದರೆ 450 ಮೀಟರ್ ಕಾಮಗಾರಿ ಮಾತ್ರ ಮಾಡಲಾಗಿದೆ. ಉಳಿಕೆ 240 ಮೀಟರ್ ಸಿ.ಸಿ.ರಸ್ತೆ ಕಾಮಗಾರಿ ಮಾಡದೇ ಸರ್ಕಾರದ ಅನ್ನ ತಿಂದು, ಸರ್ಕಾರಕ್ಕೆ ಉಂಡೆನಾಮ ಹಾಕಿದ ಆರೋಪ ಕೇಳಿಬಂದಿದೆ.
2022-23ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದ ಲೆಕ್ಕಶೀರ್ಷಿಕೆ 5054ರ ಯೋಜನೆಯಡಿಯಲ್ಲಿ ದೇವರಮಳ್ಳೂರು ಗ್ರಾಮಪಂಚಾಯ್ತಿ ಮುಖ್ಯರಸ್ತೆಯಿಂದ ವೀರಾಪುರ ಗ್ರಾಮಕ್ಕೆ 690 ಮೀಟರ್ ಸಿ.ಸಿ.ರಸ್ತೆ ನಿರ್ಮಾಣ ಮಾಡಲು 50 ಲಕ್ಷ ರೂಪಾಯಿ ಅನುದಾನ ಬಳಸಿಕೊಳ್ಳಲಾಗಿದೆ. ಆದರೆ ನಿಗಧಿಯಂತೆ ಕಾಮಗಾರಿ ಮಾಡದೇ ಕೇವಲ 330 ಮೀಟರ್ ಕಾಮಗಾರಿ ಮಾಡಲಾಗಿದೆ. ಇಲ್ಲಿಯೂ 360 ಮೀಟರ್ ಕಾಮಗಾರಿಯನ್ನು ಮಾಡದೇ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
2022-23ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದ ಲೆಕ್ಕಶೀರ್ಷಿಕೆ 5054ರ ಯೋಜನೆಯಡಿಯಲ್ಲಿ ಪಲ್ಲಿಚೆರ್ಲು ರಸ್ತೆಯಿಂದ ರಾಚೇನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯನ್ನು ಸಿ.ಸಿ.ರಸ್ತೆಯನ್ನಾಗಿ ಪರಿವರ್ತಿಸಲು 50 ಲಕ್ಷ ರೂಪಾಯಿ ಅನುದಾನ ಬಳಸಿಕೊಳ್ಳಲಾಗಿದೆ. ಇಲ್ಲಿ 690 ಮೀಟರ್ ಕಾಮಗಾರಿ ಮಾಡಬೇಕಿತ್ತು. ಆದರೆ ಇದೇ ಕಾಮಗಾರಿಯನ್ನು ಈ ಹಿಂದೆ 2021-22ನೇ ಸಾಲಿನ ಲೆಕ್ಕಶೀರ್ಷಿಕೆ 5054, ದಿನಾಂಕ 21-04-2022ರಂದು ಕಾಮಗಾರಿಯನ್ನು ಮಾಡಿ ಅದಕ್ಕೆ 40 ಲಕ್ಷ ರೂಪಾಯಿ ಅನುದಾನ ಬಳಸಿಕೊಳ್ಳಲಾಗಿದೆ. ಮುಂದುವರೆದ ಕಾಮಗಾರಿಯನ್ನು ಸೇರಿಸಿಕೊಂಡು 1140 ಮೀಟರ್ ಸಿ.ಸಿ.ರಸ್ತೆ ಇರಬೇಕಿತ್ತು ಆದರೆ 850 ಮೀಟರ್ ಕಾಮಗಾರಿಯನ್ನು ಮಾಡಿ, ಉಳಿಕೆ 290 ಮೀಟರ್ ಕಾಮಗಾರಿಯನ್ನು ಮಾಡದೇ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿ ಹಾಗೂ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ) ಚಿಕ್ಕಬಳ್ಳಾಪುರ ವಿಭಾಗದಲ್ಲಿ ಹೇಳೋರು, ಕೇಳೋರು ಇಲ್ಲದಂತಾಗಿದ್ದು, ಅಧಿಕಾರಿಗಳು, ಇಂಜನಿಯರ್‌ಗಳು ಆಡಿದ್ದೇ ಆಟವಾಗಿದೆ. ಇದರಿಂದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಬಿ.ಎನ್.ರವಿಕುಮಾರ್ ಕಾಮಗಾರಿಯ ಲೆಕ್ಕ ಹಾಗೂ ಭೌತಿಕ ಲೆಕ್ಕವನ್ನು ತೋರಿಸುವಂತೆ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಸೆಪ್ಟೆಂಬರ್-7 ರಂದು ಸ್ಥಳ ಪರಿಶೀಲನೆಗೆ ಬರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಚಿಕ್ಕಬಳ್ಳಾಪುರದ ಕೆ.ಆರ್.ಐ.ಡಿ.ಎಲ್.ನಲ್ಲಿ ಬಗೆದಷ್ಟು ಕಾಮಗಾರಿಗಳ ಅವ್ಯವಹಾರ, ಅಕ್ರಮ, ಹಗರಣಗಳು ಬಯಲಾಗುತ್ತಿವೆ. ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿದರೆ ಅಧಿಕಾರಿಗಳ ಹಗಲು ದರೋಡೆ ಬಯಲಾಗಲಿದೆ.
ಚಿಕ್ಕಬಳ್ಳಾಪುರ ಕುರಿತಾದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ