ಚಿಕ್ಕಬಳ್ಳಾಪುರ: ಮಳೆಗಾಗಿ ಪ್ರಾರ್ಥಿಸಿ ಗಂಡು ಮಕ್ಕಳಿಗೆ ಮದುವೆ; ಕೆಲ ಹೊತ್ತಲ್ಲೇ ವರುಣನ ಆಗಮನ
ಚಿಂತಾಮಣಿ ತಾಲ್ಲೂಕಿನ ಹಿರೇಕಟ್ಟಿಗೇನಹಳ್ಳಿ ಗ್ರಾಮದಲ್ಲಿ ಇಬ್ಬರು ಅಪ್ರಪಾಪ್ತ ಬಾಲಕರಿಗೆ ವಧು-ವರರ ವೇಷ ತೊಡಿಸಿ ಅದ್ಧೂರಿ ಮದುವೆ ಮಾಡುವುದರ ಮೂಲಕ ಮಳೆರಾಯನಿಗೆ ಪ್ರಾರ್ಥನೆ ಮಾಡಿದ ಘಟನೆ ನಡೆದಿದೆ. ಕಾಕತಾಳಿಯ ಎಂಬಂತೆ ಗ್ರಾಮಸ್ಥರು ಮದುವೆ ಮಾಡಿದ ಕೆಲ ಹೊತ್ತಿನಲ್ಲೇ ಮಳೆರಾಯ ಆಗಮಿಸಿ ಮದುವೆಗೆ ಆಶೀರ್ವಾದ ಮಾಡಿದಂತಿತ್ತು.
ಚಿಕ್ಕಬಳ್ಳಾಪುರ, ಸೆ.2: ಮಳೆಗಾಗಿ ರೈತರು ಮಾಡದ ಪ್ರಾರ್ಥನೆ ಇಲ್ಲ, ಬೇಡದ ದೇವರಿಲ್ಲ. ಅದರಂತೆ ಇದೀಗ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯಾದ್ಯಂತ ಈ ಬಾರಿ ಮುಂಗಾರು ಮಳೆ(Rain) ಕೈಕೊಟ್ಟ ಕಾರಣ, ಭಿತ್ತನೆ ಮಾಡಿದ್ದ ರಾಗಿ, ಜೋಳ, ತೊಗರಿ, ನೆಲಗಡಲೆ ಸೇರಿದಂತೆ ಮಳೆಯಾಧಾರಿತ ಬೆಳೆಗಳು ಭೂಮಿಯಲ್ಲೇ ಕಮರಿ ಹೋಗಿವೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಜಿಲ್ಲೆಯ ವಿವಿಧಡೆ ಪೂಜೆ, ಪುನಸ್ಕಾರ, ಪ್ರಾರ್ಥನೆ ಮಾಡುವುದರ ಮೂಲಕ ಹಳೇ ಕಾಲದ ಸಂಪ್ರದಾಯ ಹಾಗೂ ನಂಬಿಕೆಗೆ ಜೋತು ಬಿದ್ದಿದ್ದು, ಮಳೆಗಾಗಿ ಪ್ರಾರ್ಥಿಸಿ ಗಂಡು ಮಕ್ಕಳಿಗೆ ಮದುವೆ ಮಾಡಿದ್ದಾರೆ.
ಮಳೆಗಾಗಿ ಪ್ರಾರ್ಥಿಸಿ ಗಂಡು ಮಕ್ಕಳಿಗೆ ಮದುವೆ
ಹೌದು, ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಹಿರೇಕಟ್ಟಿಗೇನಹಳ್ಳಿ ಗ್ರಾಮದಲ್ಲಿ ಇಬ್ಬರು ಅಪ್ರಪಾಪ್ತ ಬಾಲಕರಿಗೆ ವಧು-ವರರ ವೇಷ ತೊಡಿಸಿ ಅದ್ಧೂರಿ ಮದುವೆ ಮಾಡುವುದರ ಮೂಲಕ ಮಳೆರಾಯನಿಗೆ ಪ್ರಾರ್ಥನೆ ಮಾಡಿದರು. ಗ್ರಾಮದ ಶಿವಾನಂದ ಎಂಬ ಬಾಲಕನಿಗೆ ಪಂಚೆ, ಶರ್ಟ್, ಪೇಟ ತೊಡಸಿ ವರನನ್ನಾಗಿ ಮಾಡಿದರೆ, ಮತ್ತೋರ್ವ ಬಾಲಕನಿಗೆ ಕುಪ್ಪಸ, ಸೀರೆ, ಜಡೆ ಧರಿಸಿ ಹೂ ಮುಡಿಸಿ ಮಂಗಳವಾಧ್ಯಗಳೊಂದಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿದರು.
ಇನ್ನು ಹೀಗೆ ಮಾಡುವುದರಿಂದ ಮಳೆ ಬರುತ್ತದೆನ್ನುವುದು ಗ್ರಾಮಸ್ಥರ ನಂಬಿಕೆಯಾಗಿದೆ. ಆದರೆ, ಕಾಕತಾಳಿಯ ಎಂಬಂತೆ ಗ್ರಾಮಸ್ಥರು ಮದುವೆ ಮಾಡಿದ ಕೆಲ ಹೊತ್ತಿನಲ್ಲೇ ಮಳೆರಾಯ ಆಗಮಿಸಿ ಮದುವೆಗೆ ಆಶೀರ್ವಾದ ಮಾಡಿದಂತಿತ್ತು. ಹೌದು, ಈ ಮೂಲಕ ದೇವರು ರೈತರ ಭೇಡಿಕೆಯನ್ನು ಈಡೇರಿಸಿದಂತಿದ್ದು. ಇನ್ನು ಅಷ್ಟೇ ಅಲ್ಲದೇ ಆಗಸ್ಟ್ 31 ರಂದು ದೊಡ್ಡಬಳ್ಳಾಪುರದ ಪಚ್ಚಾರಲಹಳ್ಳಿ ಗ್ರಾಮದಲ್ಲಿ ಹುಡುಗನಿಗೆ ಹುಡುಗಿ ವೇಷ ಹಾಕಿಸಿ ಮದುವೆ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಲಾಗಿದೆ. ಹುಡುಗನಿಗೆ ಪೇಟ, ಬಾಸಿಂಗ ಕಟ್ಟಿ ಹುಡುಗಿಗೆ ರೇಷ್ಮೆ ಸೀರೆ ಉಡಿಸಿ ಅಲಂಕಾರ ಮಾಡಿ ಶಾಸ್ತ್ರೋಕ್ತವಾಗಿ ಗ್ರಾಮಸ್ಥರೆ ಮುಂದೆ ನಿಂತು ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ. ಈ ರೀತಿ ಮದುವೆ ಮಾಡಿದ್ರೆ ಮಳೆಯಾಗುತ್ತೆ ಎಂಬುವುದು ಈ ಗ್ರಾಮದ ಜನರ ನಂಬಿಕೆ. ಹೀಗಾಗಿ ಗ್ರಾಮಸ್ಥರೆಲ್ಲಾ ಸೇರಿ ಮದುವೆ ಮಾಡಿಸಿದ್ದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:28 pm, Sat, 2 September 23