ಅವರೆಲ್ಲಾ ಡಿಗ್ರೀಗಳ ಮೇಲೆ ಡಿಗ್ರೀ ಓದಿಕೊಂಡು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆ ಹಾಗೂ ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಯ ಅರ್ಹತಾ ಪರೀಕ್ಷೆ (University Grants Commission-National Eligibility Test UGC-NET) ಬರೆಯಲು ಬೆಳ್ಳಬೆಳಗ್ಗೆ ಅದೊಂದು ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದಿದ್ರು. ಆದ್ರೆ UGC- NTA ಎಡವಟ್ಟಿನಿಂದ ಪರೀಕ್ಷೆ ಬರೆಯಲು ಆಗಲಿಲ್ಲ! ಇದ್ರಿಂದ ಆಕ್ರೋಶಗೊಂಡ ಕನ್ನಡ ವಿಷಯ ಪರೀಕ್ಷಾರ್ಥಿಗಳು, UGC ಕನ್ನಡಕ್ಕೆ ಅವಮಾನ ಮಾಡ್ತಿದೆ ಅಂತ ಪರೀಕ್ಷಾ ಕೇಂದ್ರದಲ್ಲಿ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ರು.
ಇದೆಲ್ಲಾ ಘಟಿಸಿದ್ದು ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸಂಸ್ಥೆಯಲ್ಲಿ. ಇದು ಚಿಕ್ಕಬಳ್ಳಾಪುರ ನಗರ (Chikkaballapur) ಹೊರಹೊಲಯದ ಬೀಡಗಾನಹಳ್ಳಿ ಗ್ರಾಮದ ಬಳಿ ಇದೆ. ಇದೆ ಕಾಲೇಜನ್ನು UGC ಹಾಗೂ NTA , ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆ ಹಾಗೂ ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಯ ಅರ್ಹತಾ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರವಾಗಿ ಗುರುತಿಸಿತ್ತು.
ನಿಗದಿಯಂತೆ ಇಂದು ನೂರಾರು ಜನ ಕನ್ನಡ ವಿಷಯದ ಪರೀಕ್ಷಾರ್ಥಿಗಳು ಆಗಮಿಸಿ ಕೈಯಲ್ಲಿ ಪ್ರವೇಶ ಪತ್ರ ಹಿಡಿದು ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಆದ್ರೆ UGC- NTA ಸಂಸ್ಥೆಗಳ ತಾಂತ್ರಿಕ ಸಮಸ್ಯೆಯಿಂದ ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಇದ್ರಿಂದ ಯಾವಾಗಲೂ UGC- NTA ಕನ್ನಡ ವಿಷಯವನ್ನು ಪದೇ ಪದೆ ಕಡೆಗಣಿಸುತ್ತಿದ್ದಾರೆ ಎಂದು ಪರೀಕ್ಷಾರ್ಥಿಗಳು UGC- NTA ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು.
ಇನ್ನು ಕಳೆದ ಬಾರಿ ನಡೆದ ಪರೀಕ್ಷೆಯಲ್ಲಿ ಕನ್ನಡದ ಬದಲು ಕನ್ನಡದಲ್ಲಿ ಹಿಂದಿ ಮಿಕ್ಸ್ ಮಾಡಿ, ಪ್ರಶ್ನೆಪತ್ರಿಕೆ ನೀಡಿದ್ದರು. ಆಗಲೂ ಗೊಂದಲ ಉಂಟಾಗಿತ್ತು. ರಾತ್ರೋ ರಾತ್ರಿ ಪರೀಕ್ಷಾ ಕೇಂದ್ರಗಳನ್ನು ಬದಲಾವಣೆ ಮಾಡಿದ್ದಾರೆ. ಈಗ ಅಲ್ಲಿಗೆ ಹೋಗಲು ಆಗಲ್ಲ, ಇಲ್ಲೆ ಅವಕಾಶ ಕೊಡಲು ತಾಂತ್ರಿಕ ಸಮಸ್ಯೆ ಇದೆ, ಆನ್ ಲೈನ್ ನಲ್ಲಿ ರಿಜಿಸ್ಟರ್ ನಂಬರ್ ಇದ್ರೆ ಫೋಟೊ ಇಲ್ಲ, ಆ ಎರಡೂ ಇದ್ರೆ ಇಲ್ಲಿಯೇ ಪರೀಕ್ಷೆ ಬರೆಯಲು ಆಗಲ್ಲ ಅಂತಾನೂ ಪರೀಕ್ಷಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ರು.
ಇದಕ್ಕೆ ಮಣಿದ UGC- NTA ಪರೀಕ್ಷೆ ಬರೆಯುವವರು ಬರೆಯಿರಿ ಎಂದು ಹೇಳಿದ್ರೂ ಪರೀಕ್ಷಾರ್ಥಿಗಳು ತಡವಾಗಿ ಬರೆಯಲ್ಲ ಬರೆದ್ರೂ ರಿಜಲ್ಟ್ ಘೋಷಣೆಗೆ ತಾಂತ್ರಿಕ ಅಡಚಣೆ ಆಗತ್ತೆ, ಪರೀಕ್ಷೆ ಮುಂದೂಡುವಂತೆ ಒತ್ತಾಯ ಮಾಡಿದರು. ಇದಕ್ಕೆ ಒಪ್ಪಿದ UGC- NTA, ಪರೀಕ್ಷಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಲಿಖಿತವಾಗಿ ತಿಳಿಸಿತು.
ಇನ್ನು ಬೆಳಿಗ್ಗೆ 8 ಗಂಟೆಗೆ ಪರೀಕ್ಷೆ ಬರೆಯಬೇಕಿದ್ದ ಪರೀಕ್ಷಾರ್ಥಿಗಳು, UGC- NTA ಹೊಣೆಗೇಡಿತನದಿಂದ ಕೆಲವು ಗಂಟೆಗಳ ಕಾಲ ಗೊಂದಲ ಉಂಟಾಗಿ, ಪ್ರತಿಭಟನೆ ಧರಣಿ ಆಕ್ರೋಶದ ಮೂಲಕ ಮರು ಪರೀಕ್ಷೆಗೆ ಅವಕಾಶ ಪಡೆದರು – ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಫುರ