ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಕಮೀಷನ್ ದಂಧೆಗೆ ಕಣ್ಣೀರಿಟ್ಟ ಮಹಿಳೆ

| Updated By: Rakesh Nayak Manchi

Updated on: Oct 10, 2023 | 4:51 PM

ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಕರ್ಮಕಾಂಡಗಳು, ಅವ್ಯವಹಾರಗಳು, ಅಕ್ರಮಗಳು, ಭ್ರಷ್ಟಾಚಾರ ಪ್ರಕರಣಗಳು ಒಂದೊಂದಾಗಿ ಬಯಲಾಗುತ್ತಿವೆ. ಟಿವಿ9 ಕನ್ನಡ ಡಿಜಿಟಲ್ ವರದಿ ಮಾಡಿದ ನಂತರ ಒಂದರ ಮೇಲೊಂದರಂತೆ ಹಗರಣಗಳ ಸುರಿಮಳೆ ಬಯಲಾಗುತ್ತಿವೆ. ಸ್ವತಃ ನೊಂದವರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಕಮಿಷನ್ ದಂಧೆ ಬಗ್ಗೆ ಹೇಳಿ ಕಣ್ಣೀರು ಹಾಕಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಕಮೀಷನ್ ದಂಧೆಗೆ ಕಣ್ಣೀರಿಟ್ಟ ಮಹಿಳೆ
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ
Follow us on

ಚಿಕ್ಕಬಳ್ಳಾಪುರ, ಅ.10: ಬಡಪಾಯಿ ಮಹಿಳೆಯರಿಗೆ ಹೆರಿಗೆ ಮಾಡಿಸಲು ಲಂಚಕ್ಕೆ ಕೈಚಾಚಿ ಸಿಕ್ಕಿಬಿದ್ದ ಪ್ರಕರಣ ತನಿಖೆ ನಡೆಯುತ್ತಿರುವಾಗಲೇ ಚಿಕ್ಕಬಳ್ಳಾಪುರ (Chikkaballapur) ಜಿಲ್ಲಾಸ್ಪತ್ರೆಯ ಕರ್ಮಕಾಂಡಗಳು, ಅವ್ಯವಹಾರಗಳು, ಅಕ್ರಮಗಳು, ಭ್ರಷ್ಟಾಚಾರ ಪ್ರಕರಣಗಳು ಒಂದೊಂದಾಗಿ ಬಯಲಾಗುತ್ತಿವೆ. ಟಿವಿ9 ಕನ್ನಡ ಡಿಜಿಟಲ್ ವರದಿಯ ಸರಣಿ ಆರಂಭಿಸಿದ ನಂತರ ಒಂದರ ಮೇಲೊಂದರಂತೆ ಹಗರಣಗಳ ಸುರಿಮಳೆ ಬಯಲಾಗುತ್ತಿವೆ. ಸ್ವತಃ ನೊಂದವರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ.

2 ಕೋಟಿ 67 ಲಕ್ಷ ರೂಪಾಯಿ ಮೌಲ್ಯದ ಔಷಧಿಗಳ ಖರೀದಿ ಸೇರಿದಂತೆ 1 ಕೋಟಿ ರೂಪಾಯಿ ಮೌಲ್ಯದ ಲ್ಯಾಬ್ ರೀಏಜೆಂಟ್‍ಗಳ ಖರೀದಿಯಲ್ಲಿ ಅವ್ಯವಹಾರ, ಭ್ರಷ್ಟಾಚಾರ ಆರೋಪದ ಬಗ್ಗೆ ನಿನ್ನೆ ಟಿವಿ9 ಕನ್ನಡ ಡಿಜಿಟಲ್ ವರದಿ ಪ್ರಕಟ ಮಾಡಿತ್ತು.

ಇದರಿಂದ ಸಂತಸಗೊಂಡ ಇದೇ ಆಸ್ಪತ್ರೆಗೆ ಔಷಧಿ ಸರಬರಾಜು ಮಾಡಿದ್ದ ಮಹಿಳೆಯೊಬ್ಬರು, ಟಿವಿ9 ಪ್ರತಿನಿಧಿ ಭೀಮಪ್ಪ ಪಾಟೀಲ್‍ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ತಮ್ಮ ಅಳಲನ್ನು ತೋಡಿಕೊಳ್ಳುತ್ತಾ ಕಣ್ಣೀರು ಸುರಿಸಿದರು.

ಇದನ್ನೂ ಓದಿ: ಪರ್ಸೆಂಟ್​ ಲೆಕ್ಕಾಚಾರ ಇಲ್ಲಿದೆ! ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಮಂಜೂರಾದ ಬಾಕಿ ಬಿಲ್ ಕಮೀಷನ್‍ಗಾಗಿ ಯುದ್ದವೇ ನಡೆಯುತ್ತಿದೆ

ದಿನಾಂಕ 5-12-2021 ರಿಂದ 4-6-2022 ರವರೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಅವಶ್ಯಕವಾಗಿದ್ದ ಕೆಲವು ಔಷಧಿಗಳನ್ನು ಸರಬರಾಜು ಮಾಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಆರ್​ಎಂಒ, ಡಿಎಸ್ ಹಾಗೂ ಫಾರ್ಮಾಸಿಸ್ಟ್ ಕಾರ್ಯಾದೇಶ ನೀಡಿದ್ದರು. ಅದರಂತೆ ಫಾರ್ಮಾಸಿಸ್ಟ್ ಮಹಿಳೆ 7,68,637 ರೂಪಾಯಿಗಳ ಅವಶ್ಯಕತೆಗೆ ತಕ್ಕಂತೆ ಔಷಧಿ ಸರಬರಾಜು ಮಾಡಿದ್ದಾರೆ.

ಅದರಲ್ಲಿ ಇನ್ನು 5,50,000 ರೂ/ ಬಿಲ್ ಬಾಕಿ ಇದೆ. ಆದರೆ ಮಹಿಳೆ ಔಷಧಿ ಸರಬರಾಜು ಮಾಡಲು ಬಿಲ್‍ಗೂ ಮುನ್ನ ಮುಂಗಡವಾಗಿ 25 ಪರ್ಸೆಂಟ್ ಕಮೀಷನ್ ಸಹಾ ನೀಡಿದ್ದಾಗಿ ಆರೋಪ ಮಾಡಿದ್ದಾರೆ. ಆದರೆ ಈಗ ಬಿಲ್ ಆಗದೇ ಕಣ್ಣೀರಿಟ್ಟಿದ್ದಾರೆ.

ಬಡ್ಡಿಗೆ ಹಣ ತಂದು ಔಷಧಿ ಸರಬರಾಜು ಮಾಡಿದ್ದ ಮಹಿಳೆ

ಆಸ್ಪತ್ರೆಯ ಕಾರ್ಯಾದೇಶದಂತೆ 7,68,637 ರೂಪಾಯಿ ಮೌಲ್ಯದ ಔಷಧಿ ಸರಬರಾಜು ಮಾಡಲು ಆರ್ಥಿಕವಾಗಿ ತೊಂದರೆಯಲ್ಲಿದ್ದುದರಿಂದ, ಚಿಕ್ಕಬಳ್ಳಾಪುರ ನಗರದ ಖಾಸಗಿ ಸಹಕಾರ ಸೌಹಾರ್ಧ ಬ್ಯಾಂಕ್‍ವೊಂದರಲ್ಲಿ 10 ಲಕ್ಷ ರೂಪಾಯಿಗಳನ್ನು ಬಡ್ಡಿ ರೂಪದಲ್ಲಿ ಸಾಲ ಪಡೆದುಕೊಂಡು, ಆ ಹಣದಲ್ಲಿ ಔಷಧಿಗಳ ಖರೀದಿ ಹಾಗೂ ಅಡ್ವಾನ್ಸ್ (ಮುಂಗಡ) ಲಂಚದ ಕಮೀಷನ್ ನೀಡಿ ಸರಬರಾಜು ಮಾಡಿದ್ದಾರೆ.

ಆದರೆ, 1 ವರ್ಷ 3 ತಿಂಗಳಾದರೂ ಬಾಕಿ ಬಿಲ್ ಬಿಡುಗಡೆ ಮಾಡಿಲ್ಲ. ಆಸ್ಪತ್ರೆಯ ಸಿಬ್ಬಂದಿಗಳು ಆರ್​ಎಂಒ ಕಡೆ ಬೊಟ್ಟು ಮಾಡಿದ್ದಾರೆ. ಆರ್​ಎಂಒ ಮೆಡಿಕಲ್ ಕಾಲೇಜು ಡೀನ್/‌ನಿರ್ದೇಶಕರತ್ತ ಬೊಟ್ಟು ಮಾಡಿದ್ದಾರೆ. ಆದರೆ ಮಹಿಳೆ ಸಾಲಕ್ಕೆ ಬಡ್ಡಿ ಕಟ್ಟಲಾಗದೇ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ತನ್ನ ಪರಿಸ್ಥಿತಿಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:22 pm, Tue, 10 October 23