ಸತ್ತಂತೆ ನಟಿಸಿ ದರೋಡೆಕೋರರಿಂದ ಬಚಾವ್ ಆದ ಮಹಿಳೆ ​​: ಶಿಡ್ಲಘಟ್ಟದಲ್ಲೊಂದು ವಿಚಿತ್ರ ಕೇಸ್​​

ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ನಡೆದ ವಿಚಿತ್ರ ದರೋಡೆ ಪ್ರಕರಣದಲ್ಲಿ ಮಹಿಳೆಯೊಬ್ಬರು ಸತ್ತಂತೆ ನಟಿಸಿ ದರೋಡೆಕೋರರಿಂದ ಪ್ರಾಣ ಉಳಿಸಿಕೊಂಡಿದ್ದಾರೆ. ಮನೆಯಲ್ಲಿದ್ದ ಕೆಜಿಗಟ್ಟಲೆ ಚಿನ್ನಾಭರಣ ಕಳ್ಳತನವಾಗಿದೆ. ಆದರೆ, ಮಹಿಳೆಯ ಕುಟುಂಬಸ್ಥರು ಚಿನ್ನದ ಪ್ರಮಾಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಪ್ರಕರಣಕ್ಕೆ ಕೌಟುಂಬಿಕ ಕಲಹದ ತಿರುವು ಸಿಕ್ಕಿದೆ. ಪೊಲೀಸರು ದರೋಡೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸತ್ತಂತೆ ನಟಿಸಿ ದರೋಡೆಕೋರರಿಂದ ಬಚಾವ್ ಆದ ಮಹಿಳೆ ​​: ಶಿಡ್ಲಘಟ್ಟದಲ್ಲೊಂದು ವಿಚಿತ್ರ ಕೇಸ್​​
ಮುಬಾರಕ್​​
Updated By: ಪ್ರಸನ್ನ ಹೆಗಡೆ

Updated on: Dec 11, 2025 | 6:27 PM

ಚಿಕ್ಕಬಳ್ಳಾಪುರ, ಡಿಸೆಂಬರ್​​ 11: ಮನೆಯಲ್ಲಿ ಒಂಟಿ ಮಹಿಳೆ ಇರುವ ಪಕ್ಕಾ ಮಾಹಿತಿ ಆಧರಿಸಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಬೆದರಿಕೆ ಹಾಕಿ, ಕೈ, ಕಾಲು, ಬಾಯಿ ಮತ್ತು ಕಣ್ಣು ಕಟ್ಟಿ ಮನೆಯಲ್ಲಿರುವ ಕೆಜಿಗಟ್ಟಲೆ ಚಿನ್ನವನ್ನು ದೋಚಿರುವ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಟೌನ್‍ನ ಇಲಾಹಿನಗರದಲ್ಲಿ ನಡೆದಿದೆ. ದರೋಡೆಗೂ ಮೊದಲು ಮಹಿಳೆ ಮೇಲೆ ಗಂಭೀರ ಹಲ್ಲೆ ನಡೆಸಲಾಗಿದ್ದು, ಸತ್ತಂತೆ ನಟಿಸಿ ದುರುಳರಿಂದ ಮಹಿಳೆ ಪ್ರಾಣ ಉಳಿಸಿಕೊಂಡಿದ್ದಾರೆ. ಗಾಯಾಳು ಮುಬಾರಕ್​​ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಇಲಾಹಿನಗರದ ನಿವಾಸಿಯಾಗಿರೋ ಮುಬಾರಕ್​​ರ ಮನೆಯಲ್ಲಿದ್ದ ಗಂಡ, ಮಕ್ಕಳು, ಸೊಸೆ ಸೇರಿ ಎಲ್ಲರೂ ಅಜ್ಮೀರ್ ದರ್ಶನಕ್ಕೆ ಹೋಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ದುಷ್ಕರ್ಮಿಗಳು ಮನೆಗೆ ನುಗ್ಗಿದ್ದು, ಮಚ್ಚನ್ನು ಮುಬಾರಕ್ ಕತ್ತಿಗಿಟ್ಟು ಪ್ರಾಣ ಬೆದರಿಕೆ ಹಾಕಿದ್ದಾರೆ. ರಾತ್ರಿಯಿಡೀ ಮನೆಶೋಧ ಮಾಡಿರುವ ದುಷ್ಕರ್ಮಿಗಳು, ಮುಬಾರಕ್‍ಗೆ ಸೇರಿರುವ ಅವರ ತಂದೆ-ತಾಯಿ ಗಿಫ್ಟ್​​ ನೀಡಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ತನ್ನ ಸೊಸೆಯ ಅಣ್ಣ ಮತ್ತು ಮತ್ತೋರ್ವ ಅಪರಿಚಿತನೇ ಮನೆಗೆ ನುಗ್ಗಿ ದರೋಡೆ ನಡೆಸಿರೋದಾಗಿ ಮುಬಾರಕ್​ ಆರೋಪಿಸಿದ್ದಾರೆ.

ಇದನ್ನೂ ಓದಿ: ಹಾಸ್ಟೆಲ್​​ನಲ್ಲಿ BAMS ವಿದ್ಯಾರ್ಥಿ ಅನುಮಾನಾಸ್ಪದ ಸಾವು; ಕಾಲೇಜ್ ವಿರುದ್ಧ ಕೊಲೆ, ಸಾಕ್ಷಿ ನಾಶ ಆರೋಪ

ಇನ್ನು ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಚಾಣಾಕ್ಷತೆ ಮೆರೆದಿದ್ದು, ಸಿಸಿ ಕ್ಯಾಮರಾ ವೈರ್​​ಗಳನ್ನು ಕತ್ತರಿಸಿದ್ದಾರೆ. ದರೋಡೆಕೋರರನ್ನು ತಾನು ನೋಡಿದ್ದೇನೆ ಎಂದು ಹಲ್ಲೆಗೊಳಗಾದ ಮಹಿಳೆ ಮುರಾಕ್​​ ಹೇಳುತ್ತಿದ್ದರೂ ಆಕೆಯ ಕುಟುಂಬಸ್ಥರ ಹೇಳಿಕೆ ಇದಕ್ಕೆ ಭಿನ್ನವಾಗಿದೆ. ಮುಬಾರಕ್ ಗಂಡ, ಮಕ್ಕಳು, ಮುಬಾರಕ್ ಹೇಳಿಕೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ನಮ್ಮ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣವೇ ಇರಲಿಲ್ಲ ಎಂಬ ಅಚ್ಚರಿಯ ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ದೂರು ದಾಖಲಿಸದಂತೆ ಪೊಲೀಸರ ಮೇಲೆ ಒತ್ತಡವನ್ನೂ ಹೇರಿದ್ದಾರೆ.

ದರೋಡೆ ಹಿಂದೆ ಗಂಡ, ಸೊಸೆ ಕೈವಾಡ?

ಮತ್ತೊಂದಡೆ ಮುಬಾರಕ್‍ಗೆ ಸೇರಿದ ಚಿನ್ನಾಭರಣಗಳ ಮೇಲೆ ಸ್ವತಃ ಆಕೆಯ ಗಂಡ ಸಿರಾಜ್ ಹಾಗೂ ಸೊಸೆಯ ಕಣ್ಣಿತ್ತಂತೆ. ಗಂಡ ಸಿರಾಜ್ ಚಿನ್ನಾಭರಣ ಇಟ್ಟುಕೊಂಡು ಏನು ಮಾಡ್ತೀಯಾ, ನಿವೇಶನ ಖರೀದಿ ಮಾಡೋಣ ಗೋಲ್ಡ್ ಕೊಡು ಎಂದು ಗಲಾಟೆ ಮಾಡಿದ್ದನಂತೆ. ಇದರಿಂದ ದರೋಡೆ ಪ್ರಕರಣದ ಹಿಂದೆ ತನ್ನ ಸೊಸೆ, ಗಂಡನ ಶಾಮೀಲು ಇರುವುದಾಗಿ ಮುಬಾರಕ್ ಆರೋಪಿಸಿದ್ದಾರೆ. ಈ ನಡುವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:26 pm, Thu, 11 December 25