AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ಆತ್ಮಹತ್ಯೆ ಮಾಡಿಕೊಂಡ 18 ವರ್ಷದ ಯುವತಿ, ಸಾವಿನ ಹಿಂದಿದ್ಯಾ ದೆವ್ವದ ಕಾಟ?

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬುರಡುಗುಂಟೆ ಗ್ರಾಮದಲ್ಲಿ 18 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಆದರೆ ಪೋಷಕರು ದೆವ್ವದ ಕಾಟ ಅಥವಾ ಮಾಟ-ಮಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಚಿಕ್ಕಬಳ್ಳಾಪುರ: ಆತ್ಮಹತ್ಯೆ ಮಾಡಿಕೊಂಡ 18 ವರ್ಷದ ಯುವತಿ, ಸಾವಿನ ಹಿಂದಿದ್ಯಾ ದೆವ್ವದ ಕಾಟ?
ಮೃತ ಯುವತಿ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Nov 29, 2025 | 9:41 PM

Share

ಚಿಕ್ಕಬಳ್ಳಾಪುರ, ನವೆಂಬರ್​ 29: ಆಕೆಗೆ ಇನ್ನೂ ಬಾಳಿ ಬದುಕಬೇಕಾದ ವಯಸ್ಸು. 18 ವರ್ಷಕ್ಕೆ ಆ ಯುವತಿ (girl) ಆತ್ಮಹತ್ಯೆ ಮಾಡಿಕೊಂಡು ಸಾವಿನ ಮನೆ ಸೇರಿದ್ದಾಳೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮೇಲ್ನೋಟಕ್ಕೆ ಹೊಟ್ಟೆನೋವು ಕಾರಣ ಎನ್ನಲಾಗುತ್ತಿದ್ದು, ಆಕೆಯ ವರ್ತನೆ ಮಾತ್ರ ದೆವ್ವದ ಕಾಟವೆನೋ (Evil Spirit) ಎಂಬ ಅನುಮಾನ ಪೋಷಕರಲ್ಲಿ ಮೂಡುವಂತೆ ಮಾಡಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬುರಡುಗುಂಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಂಜನಪ್ಪ ಹಾಗೂ ಮಧುಶ್ರಿ ದಂಪತಿಯ ಮಗಳು ಶಾರದಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಗಂಡು ಮಗನಿದ್ದಾನೆ. ಆದರೆ ಕೆಲ ವರ್ಷಗಳ ಹಿಂದೆ ಶಾರದಾ ತಂದೆ ಅಂಜನಪ್ಪ ಮೃತಪಟ್ಟ ಹಿನ್ನಲೆ, ತಾಯಿ ಮಧುಶ್ರೀ ತನ್ನ ಕಿರಿಯ ಮಗಳು ಶಾರದಾ ಹಾಗೂ ಮಗನೊಂದಿಗೆ ತನ್ನ ಹಿರಿಯ ಮಗಳು ನಾಗಮಣಿಯನ್ನ ಮದುವೆ ಮಾಡಿಕೊಟ್ಟಿದ್ದ ಚಿಕ್ಕಬಳ್ಳಾಪುರದ ಕಣಿವೆನಾರಾಯಣಪುರದ ಗ್ರಾಮಕ್ಕೆ ಬಂದು ಬಾಡಿಗೆ ಮನೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಕುಳಿತು ಅಮೆರಿಕ ಪ್ರಜೆಗಳಿಗೆ ವಂಚನೆ: ಅತೀ ದೊಡ್ಡ ವಂಚನೆ ಕೇಸ್​ ಸಿಐಡಿಗೆ

ಕಿರಿ ಮಗಳು ಶಾರದಾಗೆ ಪದೇ ಪದೇ ಹೊಟ್ಟೆ ನೋವು. ಎಷ್ಟೇ ಆಸ್ಪತ್ರೆಗಳಿಗೆ ತೋರಿಸಿದರೂ ಯಾವುದೇ ಪ್ರಯೋಜವಾಗಿಲ್ಲ. ಹೊಟ್ಟೆ ನೋವಿನೊಂದಿಗೆ ಆಗಾಗ ರಕ್ತ ವಾಂತಿ ಆಗುತ್ತಿತ್ತಂತೆ. ಇದಕ್ಕೆಲ್ಲಾ ಶಾರದಾ ಕಳೆದ 4 ವರ್ಷಗಳ ಹಿಂದೆ ಬಿದ್ದಿದ್ದ ಬುರುಡುಗುಂಟೆ ಗ್ರಾಮದ ಬಳಿಯ ಸ್ಮಶಾನದ ಸಮೀಪ ಇರುವ ಮೂರು ದಾರಿಗಳು ಕೂಡುವ ಜಾಗವಂತೆ. ಅದೊಂದು ದಿನ ಶಾರದಾ ಮೂರು ದಾರಿ ಕೂಡುವ ಜಾಗದಲ್ಲಿ ಬಿದ್ದು ಮನೆಗೆ ಬಂದಿದ್ದಳಂತೆ. ಅಂದಿನಿಂದಲೇ ಇದೆಲ್ಲವೂ ಶುರುವಾಗಿದ್ದು, ಯಾವುದೋ ಗಾಳಿ ಸೋಕಿದೆ. ಮಗಳು ಚಿತ್ರ ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದಳು. ಅದರಿಂದಲೇ ಮಗಳ ಸಾವಾಗಿದೆ ಅಂತ ತಾಯಿ ಮಧುಶ್ರೀ ನೊಂದುಕೊಂಡಿದ್ದಾರೆ.

ಚಿತ್ರ ವಿಚಿತ್ರವಾಗಿ ವರ್ತಿಸುತ್ತಿದ್ದ ಶಾರದಾ

ಇನ್ನು ಕಳೆದ 3-4 ವರ್ಷಗಳಿಂದ ಶಾರದಾಗೆ ಹೊಟ್ಟೆ ನೋವಿನ ಸಮಸ್ಯೆ ಇತ್ತು. ಯಾವ ಆಸ್ಪತ್ರೆಗೆ ತೋರಿಸಿದರೂ ರಿಪೋರ್ಟ್‍ಗಳೆಲ್ಲವೂ ನಾರ್ಮಲ್ ಅಂತ ವೈದ್ಯರು ಹೇಳ್ತಿದ್ದರಂತೆ. ಹೀಗಾಗಿ ಶಾರದಾ ತಾಯಿ ಮಗಳು ಗುಣಮುಖಳಾಗಲಿ ಅಂತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳನ್ನ ಮಾಡಿಸಿ ಹರಕೆ ಸಹ ಕಟ್ಟಕೊಂಡಿದ್ದರು. ಮಾಟ-ಮಂತ್ರ ಅಂತ ನಾಟಿ ಔಷಧಿಗಳನ್ನ ಸಹ ಕೊಡಿಸಿದ್ದರಂತೆ. ದೇವರಿಗೆ ಪೂಜೆ ಮಾಡಿಸಿದಾಗ ಕೆಲ ದಿನಗಳು ಹೊಟ್ಟೆ ನೋವು ಇರ್ತಿರಲಿಲ್ಲವಂತೆ. ಆದರೆ ಮತ್ತೆ ಕೆಲ ದಿನಗಳ ನಂತರ ತಡೆಯಲಾರದಷ್ಟು ಹೊಟ್ಟೆ ನೋವು, ಚಿತ್ರ ವಿಚಿತ್ರವಾಗಿ ವರ್ತಿಸುವುದು, ಕೂಗಾಡುವುದು, ರೇಗಾಡುವುದು, ಅರಚೋದು, ಕಿರುಚಾಡುವುದು, ಕೋಪ ಮಾಡಿಕೊಂಡು ಎಲ್ಲರನ್ನ ಗುರಾಯಿಸುವುದು ಮಾಡುತ್ತಿದ್ದಳಂತೆ. ಹೀಗಾಗಿ ಮಗಳನ್ನ ಕಾಲೇಜಿಗೆ ಹೋಗುವುದನ್ನು ಬಿಡಿಸಿ ಮನೆಯಲ್ಲಿ ಇಟ್ಟುಕೊಂಡಿದ್ದರು. ಹುಷಾರಿಲ್ಲ ಅಂತ ತಾಯಿ ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿ ಒಬ್ಬಳೇ ಇದ್ದ ಶಾರದಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದರ್ಶನ್ ಸಾವು: ಪೊಲೀಸರಿಂದಲೇ ಕೊಲೆ ಆರೋಪ, ಪ್ರಕರಣ ಸಿಐಡಿ ಹೆಗಲಿಗೆ

ಶಾರದಾ ಆತ್ಮಹತ್ಯೆ ಪ್ರಕರಣ ಸಂಬಂಧ ನಂದಿಗಿರಿಧಾಮ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರು ಅನುಮಾನಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.