AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಕುಳಿತು ಅಮೆರಿಕ ಪ್ರಜೆಗಳಿಗೆ ವಂಚನೆ: ಅತೀ ದೊಡ್ಡ ವಂಚನೆ ಕೇಸ್​ ಸಿಐಡಿಗೆ

ಬೆಳಗಾವಿಯಲ್ಲಿ ಕುಳಿಕೊಂಡು ಅಮೆರಿಕ ಪ್ರಜೆಗಳನ್ನು ವಂಚಿಸುತ್ತಿದ್ದ ಅತಿ ದೊಡ್ಡ ಸೈಬರ್​ ವಂಚನೆ ಗ್ಯಾಂಗ್​​​ ಅನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಆದರೆ ಅಂತಾರಾಷ್ಟ್ರೀಯ ಮಟ್ಟದ ಪ್ರಕರಣ ಹಿನ್ನೆಲೆ ಸಿಐಡಿಗೆ ಕೇಸ್​​​ ಹಸ್ತಾಂತರಿಸಲಾಗಿದೆ. ನಾಲ್ಕೈದು ದಿನದಲ್ಲಿ ಸಿಐಡಿ ಅಧಿಕಾರಿಗಳ ತಂಡ ಬೆಳಗಾವಿಗೆ ಭೇಟಿ ನೀಡಲಿದೆ.

ಬೆಳಗಾವಿಯಲ್ಲಿ ಕುಳಿತು ಅಮೆರಿಕ ಪ್ರಜೆಗಳಿಗೆ ವಂಚನೆ: ಅತೀ ದೊಡ್ಡ ವಂಚನೆ ಕೇಸ್​ ಸಿಐಡಿಗೆ
ಬಂಧಿತ ಗ್ಯಾಂಗ್​​
Sahadev Mane
| Edited By: |

Updated on: Nov 28, 2025 | 10:23 PM

Share

ಬೆಳಗಾವಿ, ನವೆಂಬರ್​ 28: ಬೆಳಗಾವಿಯಲ್ಲಿ (Belagavi) ಕುಳಿತುಕೊಂಡು ಅಮೆರಿಕ ಪ್ರಜೆಗಳನ್ನು ವಂಚಿಸುತ್ತಿದ್ದ (Cyber Fraud) ಕತರ್ನಾಕ ಜಾಲ ಪತ್ತೆಯಾಗಿತ್ತು. ಬಾಡಿಗೆ ಕಟ್ಟಡದಲ್ಲಿ ಕಾಲ್ ಸೆಂಟರ್ ಓಪನ್​ ಮಾಡುತ್ತೇವೆ ಎಂದು ಸುಳ್ಳು ಹೇಳಿ ದಂಧೆಗಿಳಿದಿದ್ದ ಖದೀಮರು ಮಾಡಿದ್ದ ಮಾತ್ರ ಅತೀ ದೊಡ್ಡ ವಂಚನೆ. ಇದೇ ಪ್ರಕರಣದಲ್ಲಿ 35 ಜನ ಅರೆಸ್ಟ್ ಆಗಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಮಟ್ಟದ ಕೇಸ್ ಹಿನ್ನೆಲೆ ಸಿಐಡಿಗೆ ಹಸ್ತಾಂತರಿಸಲಾಗಿದೆ.

ಬೆಳಗಾವಿ ನಗರದ ಸೈಬರ್ ಪೊಲೀಸರು ರಾಷ್ಟ್ರೀಯ ಮಟ್ಟದಲ್ಲಿ ಸದ್ದಾಗುತ್ತಿದ್ದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೃಹ ಸಚಿವ ಡಾ. ಜಿ ಪರಮೇಶ್ವರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮ ಸಿಬ್ಬಂದಿಗಳ ಕೆಲಸದ ಬಗ್ಗೆ ಹೆಮ್ಮೆ ಪಟ್ಟಿದ್ದರು. ಇಂತಹ ಕೇಸ್ ಇದೀಗ ಸಿಐಡಿಗೆ ಹಸ್ತಾಂತರವಾಗಿದ್ದು, ನಾಲ್ಕೈದು ದಿನದಲ್ಲಿ ಸಿಐಡಿ ತಂಡ ಬೆಳಗಾವಿಗೆ ಬರಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲೊಂದು ನಕಲಿ ಸಾಫ್ಟ್‌ವೇರ್ ಕಂಪನಿ: ಅಮೆರಿಕ ಪ್ರಜೆಗಳೇ ಟಾರ್ಗೆಟ್, ಸೈಬರ್‌ ಪೊಲೀಸ್​​ ದಾಳಿ

ಈಗಾಗಲೇ ಪ್ರಕರಣ ದಾಖಲಿಸಿಕೊಂಡಿರುವ ನಗರ ಸೈಬರ್ ಠಾಣೆ ಪೊಲೀಸರು, ಈವರೆಗೂ 35 ಜನ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿಯಲ್ಲಿ ಇದ್ದುಕೊಂಡು ಅಮೆರಿಕಾದ ಪ್ರಜೆಗಳಿಗೆ ಸೈಬರ್ ವಂಚನೆ ಮಾಡುತ್ತಿದ್ದ ಖದೀಮರು ಲಾಕ್ ಆಗಿದ್ದೆ ರಣರೋಚಕ. ಕರ್ನಾಟಕದ ಯಾವೊಬ್ಬ ವ್ಯಕ್ತಿಯನ್ನ ಬಳಸಿಕೊಳ್ಳದೇ ಅಂತರ್ ರಾಜ್ಯದಿಂದ ಯುವಕರನ್ನ ಕರೆದುಕೊಂಡು ಬಂದು ದಂಧೆ ಮಾಡುತ್ತಿದ್ದವರು ಕೊನೆಗೂ ಕಂಬಿ ಎನಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಕೇಸ್ ಇದಾಗಿರುವ ಕಾರಣಕ್ಕೆ ಪ್ರಕರಣವನ್ನ ಸಿಐಡಿಗೆ ವರ್ಗಾಯಿಸಲಾಗಿದ್ದು, ನಾಲ್ಕೈದು ದಿನಗಳಲ್ಲಿ ಅಧಿಕಾರಿಗಳು ಪ್ರಕರಣವನ್ನ ಬೆನ್ನತ್ತಿ ಮತ್ತಷ್ಟು ವಿಚಾರ ಹೊರಗೆಳೆಯಲ್ಲಿದ್ದಾರೆ. ಅದಕ್ಕೆ ಬೇಕಾದ ತಯಾರಿ ಕೂಡ ಈಗಾಗಲೇ ಸ್ಥಳೀಯ ಪೊಲೀಸರು ನಡೆಸಿದ್ದಾರೆ.

ಪ್ರಕರಣದ ಹಿನ್ನೆಲೆ 

ಗುಜರಾತ್​​ನಲ್ಲಿರುವ ಕಿಂಗ್​​ಪಿನ್ ಬೆಳಗಾವಿಗೆ ಹೇಗೆ ಬಂದ ಎಂದರೆ, ಗುಜರಾತ್​​ನಲ್ಲಿರುವ ಸಾಗರ್ ಎಂಬಾತ ಕಿಂಗ್​​​ಪಿನ್, ನಿನ್ನೆ ಅರೆಸ್ಟ್ ಆಗಿರುವ ತೌಸೀಪ್​ಗೆ ಪರಿಚಯ. ಈ ಪರಿಚಯವಾಗಿದ್ದು ದಾಂಡೇಲಿಯಲ್ಲಿರುವ ರೆಸಾರ್ಟ್​ನಲ್ಲಿ. ತೌಸೀಫ್​ಗೆ ಸೇರಿದ ರೇಸಾರ್ಟ್​ಗಳು ದಾಂಡೇಲಿಯಲ್ಲಿವೆ. ಜನರನ್ನು ವಂಚಿಸಿ ಮೋಜು, ಮಸ್ತಿಗೆ ದಾಂಡೇಲಿಗೆ ಬರುತ್ತಿದ್ದ ಕಿಂಗ್​ಪಿನ್ ತೌಸೀಫ್ ಬಳಿ ಬಂದು ದಂಧೆ ಬಗ್ಗೆ ಮಾತನಾಡಿದ್ದಾನೆ. ತಮ್ಮ ದಂಧೆಗೆ ತೊಂದರೆ ಆಗದಂತೆ ಒಂದು ಕಚೇರಿಯನ್ನ ಕೊಡಿಸುವಂತೆ ಹೇಳಿದ್ದಾನೆ. ಈ ವೇಳೆ ಬೆಳಗಾವಿಯಲ್ಲಿರುವ ಅಪ್ತಾಪ್ ಎಂಬಾತನಿಗೆ ಸಂಪರ್ಕ ಮಾಡಿದ್ದಾನೆ. ಆತ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಕಚೇರಿಯನ್ನ ಬಾಡಿಗೆಗೆ ಕೊಡಿಸಿದ್ದಾನೆ. ಇದಾದ ಬಳಿಕ ಅಂತರ್ ರಾಜ್ಯದಿಂದ 33 ಜನ ಯುವಕರನ್ನ ಕರೆದುಕೊಂಡು ಬಂದು ಇಲ್ಲಿ ಕಾಲ್ ಸೆಂಟರ್ ಹೆಸರಿನಲ್ಲಿ ದಂಧೆ ಶುರು ಮಾಡಿದ್ದರು.

ಅಮೆರಿಕ ಪ್ರಜೆಗಳೇ ಟಾರ್ಗೆಟ್​

ಕಾಲ್ ಸೆಂಟರ್​​ನಲ್ಲಿ ಕೆಲಸ ಮಾಡ್ತಿದ್ದವರಿಗೆ ತೌಸೀಫ್​ನ ಹೋಟೆಲ್​ನಿಂದಲೇ ನಿತ್ಯ ಆಹಾರ ಕೂಡ ಹೋಗುತ್ತಿತ್ತು. ಬೆಳಗಾವಿಯಲ್ಲಿ ಕುಳಿತುಕೊಂಡು ಡಾರ್ಕ್ ವೆಬ್​ನಲ್ಲಿ ಅಮೆರಿಕಾ ಹಿರಿಯ ಪ್ರಜೆಗಳ ನಂಬರ್ ಪಡೆದು ಅವರಿಗೆ ನಿಮ್ಮದು ಪಾರ್ಸೆಲ್ ಇದೆ ಅಂತಾ ಕರೆ ಮಾಡುತ್ತಿದ್ದರು. ತಾವು ಏನು ಆರ್ಡರ್ ಮಾಡಿಲ್ಲ ಅಂದಾಗ ನಿಮ್ಮ ಹೆಸರಿನಲ್ಲಿ ಮುಂಚೆ ಆರ್ಡರ್ ಆಗಿದೆ ಅದನ್ನ ಕ್ಯಾನ್ಸಲ್ ಮಾಡಬೇಕು ಅಂದರೆ ಒಂದು ಮೆಸೇಜ್ ಬರುತ್ತೆ ಅದರಲ್ಲಿರುವ ನಂಬರ್​ಗೆ ಕರೆ ಮಾಡಿ ಮಾತನಾಡುವಂತೆ ಹೇಳುತ್ತಾರೆ. ಇದನ್ನ ನಂಬಿ ಮೆಸೇಜ್​​ನಲ್ಲಿ ಬಂದ ನಂಬರ್​ಗೆ ಕರೆ ಮಾಡಿದಾಗ ಅದನ್ನ ಪಕ್ಕದಲ್ಲಿದ್ದ ಯುವಕ ಅಟ್ಟೆಂಡ್ ಮಾಡುತ್ತಿದ್ದ.

ಮೊದಲು ಸೈಬರ್ ವಂಚನೆ ಆಗುತ್ತವೆ ಹುಷಾರಾಗಿರಿ. ನೀವು ಆರ್ಡರ್ ಮಾಡದಿದ್ದರೂ ನಿಮ್ಮ ಹೆಸರಿಗೆ ಪಾರ್ಸೆಲ್​ ಬಂದಿದೆ ಎಂದರೆ ಯಾರೋ ನಿಮ್ಮ ಅಕೌಂಟ್ ಹ್ಯಾಕ್ ಮಾಡಲಿದ್ದಾರೆ. ನಿಮ್ಮ ಖಾತೆಯಲ್ಲಿರುವ ಹಣವನ್ನ ಕೂಡಲೇ ಗಿಫ್ಟ್ ಓಚರ್ ಪಡೆದುಕೊಳ್ಳಿ ಅಂತಾ ಹೇಳುತ್ತಾರೆ. ಇವರ ಮಾತು ನಂಬಿ ಗಿಫ್ಟ್ ಓಚರ್ ತಂದು ಮತ್ತೆ ಇವರಿಗೆ ಕರೆ ಮಾಡಿದಾಗ ಅದನ್ನ ಸ್ಕ್ರ್ಯಾಚ್ ಮಾಡಿಸಿ ಅದರಲ್ಲಿದ್ದ ನಂಬರ್ ಪಡೆದು ಅಮೆರಿಕಾದಲ್ಲಿರುವ ಇವರ ತಂಡಕ್ಕೆ ಆ ನಂಬರ್ ಕೊಟ್ಟು ಅಲ್ಲಿಂದ ಹಣ ಎಗರಿಸುವ ಕೆಲಸ ಮಾಡುತ್ತಿದ್ದರು. ಈ ರೀತಿ ನಿತ್ಯ ನೂರು ಕಾಲ್ ಮಾಡಿ ಕೋಟ್ಯಂತರ ಡಾಲರ್ ವಂಚನೆ ಮಾಡಿದ್ದು, ಇದೀಗ ಎಲ್ಲರೂ ಅರೆಸ್ಟ್ ಆಗಿದ್ದಾರೆ. ಮಿಡಿಯೇಟರ್ ಆಗಿದ್ದ ಕಿಂಗ್​​ಪಿನ್​ನನ್ನು ಬೆಳಗಾವಿಗೆ ಕರೆದುಕೊಂಡು ಬಂದಿದ್ದ ರೆಸಾರ್ಟ್ ಮಾಲೀಕ ತೌಸೀಫ್ ಕೂಡ ಅರೆಸ್ಟ್ ಆಗಿದ್ದಾನೆ.

ಇದನ್ನೂ ಓದಿ: ಬೆಳಗಾವಿಯ ಅತಿ ದೊಡ್ಡ ಸೈಬರ್ ವಂಚನೆ ಗ್ಯಾಂಗ್ ಬಲೆಗೆ ಬಿದ್ದಿದ್ಹೇಗೆ? ಪೊಲೀಸರು ಹೇಳಿದ್ದೇನು? ಇಲ್ಲಿದೆ ವಿವರ

ಸದ್ಯ ಪ್ರಕರಣದ ಬೆನ್ನುಬಿದ್ದಿರುವ ಸೈಬರ್ ಪೊಲೀಸರು ಇದರಲ್ಲಿ ಮತ್ತೆ ಯಾರೆಲ್ಲ ಭಾಗಿಯಾಗಿದ್ದಾರೆಂದು ಶೋಧ ಮುಂದುವರೆಸಿದ್ದಾರೆ. ಇನ್ನೊಂದು ಕಡೆ ಸಿಐಡಿ ತಂಡಕ್ಕೆ ಕೇಸ್ ಹಸ್ತಾಂತರವಾಗಿದ್ದು, ಇನ್ನು ಮುಂದೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಯಾರದೋ ದುಡ್ಡು ತಂದು ಮೋಜು ಮಸ್ತಿ ಮಾಡಲು ರೆಸಾರ್ಟ್​ಗೆ ಬರುತ್ತಿದ್ದ ಖದೀಮರು ಸದ್ಯ ಲಾಕ್​ ಆಗಿದ್ದಾರೆ. ಕಿಂಗ್​ಪಿನ್​​ನನ್ನು ಹಿಡಿಯುವ ವಿಶ್ವಾಸದಲ್ಲಿ ಪೊಲೀಸರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.