ಬೆಂಗಳೂರಿನಲ್ಲೊಂದು ನಕಲಿ ಸಾಫ್ಟ್‌ವೇರ್ ಕಂಪನಿ: ಅಮೆರಿಕ ಪ್ರಜೆಗಳೇ ಟಾರ್ಗೆಟ್, ಸೈಬರ್ ಪೊಲೀಸ್ ದಾಳಿ
ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಮಸ್ಕ್ ಕಮ್ಯುನಿಕೇಷನ್ಸ್ ಹೆಸರಿನ ನಕಲಿ ಸಾಫ್ಟ್‌ವೇರ್ ಕಂಪನಿ ಮೇಲೆ ಸೈಬರ್ ಕ್ರೈಮ್ ಪೊಲೀಸರು ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಮೈಕ್ರೋಸಾಫ್ಟ್ ಟೆಕ್ನಿಕಲ್ ಸಪೋರ್ಟ್ ಹೆಸರಿನಲ್ಲಿ ಅಮೆರಿಕನ್ ಪ್ರಜೆಗಳಿಗೆ ವಂಚಿಸುತ್ತಿದ್ದ ಈ ಕಂಪನಿಯ 21 ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು, ನವೆಂಬರ್ 15: ನಕಲಿ ಸಾಫ್ಟ್‌ವೇರ್ ಕಂಪನಿಯೊಂದು (Fake IT Company) ಮೈಕ್ರೋಸಾಫ್ಟ್ ಟೆಕ್ನಿಕಲ್ ಸಪೋರ್ಟ್ ಹೆಸರಲ್ಲಿ ಅಮೆರಿಕ ಪ್ರಜೆಗಳನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಸೈಬರ್ ಕ್ರೈಮ್ ಪೊಲೀಸರು ಹಾಗೂ ಸೈಬರ್ ಕಮಾಂಡ್ ಯೂನಿಟ್ ಅಧಿಕಾರಿಗಳು ವೈಟ್ಫೀಲ್ಡ್ (Whitefield) ಬಳಿಯ ವರ್ತೂರು ರಸ್ತೆಯಲ್ಲಿರುವ ಕಂಪನಿ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ವಂಚನೆ ಸಂಬಂಧ ಸದ್ಯ ವೈಟ್ಫೀಲ್ಡ್ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದೇಶಿ ಪ್ರಜೆಗಳಿಗೆ ವಂಚನೆ
ನಗರದ ವೈಟ್ಫೀಲ್ಡ್ ಬಳಿಯ ವರ್ತೂರು ರಸ್ತೆಯಲ್ಲಿ ಆಗಸ್ಟ್ನಲ್ಲಿ ಮಸ್ಕ್ ಕಮ್ಯುನಿಕೇಷನ್ಸ್ ಹೆಸರಿನಲ್ಲಿ ನಕಲಿ ಐಟಿ ಕಂಪನಿ ತೆರೆಲಾಗಿತ್ತು. ಟೆಕ್ನಿಕಲ್ ಸಪೋರ್ಟ್ ಹೆಸರಲ್ಲಿ ವಿದೇಶಿ ಪ್ರಜೆಗಳಿಗೆ ವಂಚನೆ ಆರೋಪ ಕೇಳಿಬಂದಿದೆ. ಈ ಬಗ್ಗೆ ಸೈಬರ್ ಕಮಾಂಡ್ ಯೂನಿಟ್ಗೆ ಮಾಹಿತಿ ಹಿನ್ನೆಲೆ ಸೈಬರ್ ಕಮಾಂಡ್ ಯೂನಿಟ್ ಡಿಜಿಪಿ ಪ್ರಣಬ್ ಮೊಹಾಂತಿ ನೇತೃತ್ವದಲ್ಲಿ ಪೊಲೀಸರು ಸೇರಿ ವಿಶೇಷ ತಂಡ ರಚಿಸಿ ದಾಳಿ ಮಾಡಲಾಗಿದೆ. ನಿನ್ನೆ ಹಾಗೂ ಇಂದು ಎರಡು ದಿನ ದಾಳಿ ಮಾಡಿ ಪರಿಶೀಲನೆ ಮಾಡಲಾಗಿದೆ.
ಇದನ್ನೂ ಓದಿ: ನಂದಿನಿ ಹೆಸರಲ್ಲಿ ನಕಲಿ ತುಪ್ಪ: ತಮಿಳುನಾಡಿನಲ್ಲಿ ಕಲಬೆರಕೆ ಮಾಡಿ ಕರ್ನಾಟಕದಲ್ಲಿ ಮಾರಾಟ
ಇನ್ನು ಕಂಪನಿಯಲ್ಲಿ 21 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಎಲ್ಲರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಇನ್ನು ಕೆಲವರು ನಾಪತ್ತೆ ಆಗಿದ್ದು, ಪೊಲೀಸರು ಶೋಧ ನಡೆಸಿದ್ದಾರೆ. ಮಹಜರು ನಡೆಸಿ ಕಂಪ್ಯೂಟರ್ ಸಿಸ್ಟಮ್, ಡಿಜಿಟಲ್ ಡಿವೈಸ್, ಮೊಬೈಲ್ ಫೋನ್ ಜಪ್ತಿ ಮಾಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಕೃಷಿ ಮೇಳಕ್ಕೆ ಬಂದವರನ್ನು ಅಡ್ಡಗಟ್ಟಿ ದರೋಡೆಗೆ ಯತ್ನಿಸಿದ ಗ್ಯಾಂಗ್
ಕೃಷಿ ಮೇಳಕ್ಕೆ ಬಂದವರನ್ನು ಅಡ್ಡಗಟ್ಟಿ ದರೋಡೆಕೋರ ಗ್ಯಾಂಗ್ ದರೋಡೆಗೆ ಯತ್ನಿಸಿರುವಂತಹ ಘಟನೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣ ಮುಂಭಾಗದಲ್ಲಿ ನಡೆದಿದೆ. ದರೋಡೆ ಯತ್ನ ಸಂಬಂಧ FIR ದಾಖಲಿಸಿಕೊಂಡು ಪೊಲೀಸರು ಶೋಧ ನಡೆಸಿದ್ದಾರೆ. ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಚಿಕ್ಕಮಗಳೂರಿನಿಂದ ನವೀನ್ ಮತ್ತು ಸ್ನೇಹಿತರು ಬಂದಿದ್ದರು. ಕೈಯಲ್ಲಿ ಕತ್ತಿ ಹಿಡಿದು 100 ರೂ. ಕೊಡಿ ಎಂದು ಬೆದರಿಕೆ ಹಾಕಿದ್ದಾರೆ. 1000 ರೂ. ಕೊಟ್ರೆ ಬೇಗ ಹೋಗ್ತೇವೆ, ಇಲ್ಲ ಅಂದ್ರೆ ನಿಮ್ಮನ್ನ ಬಿಡಲ್ಲ ಎಂದು ಧಮ್ಕಿ ಹಾಕಿದ್ದಾರೆ.
ಇದನ್ನೂ ಓದಿ: ಬೆಳಗಾವಿಯ ಅತಿ ದೊಡ್ಡ ಸೈಬರ್ ವಂಚನೆ ಗ್ಯಾಂಗ್ ಬಲೆಗೆ ಬಿದ್ದಿದ್ಹೇಗೆ? ಪೊಲೀಸರು ಹೇಳಿದ್ದೇನು? ಇಲ್ಲಿದೆ ವಿವರ
ದರೋಡೆಕೋರರು ಬೆದರಿಕೆ ಹಾಕುವುದನ್ನು ವಿಡಿಯೋ ರೆಕಾರ್ಡ್ ಮಾಡಲಾಗಿದ್ದು, ವಿಡಿಯೋ ಮಾಡ್ತಿರುವುದು ಗೊತ್ತಾಗಿ ಮೊಬೈಲ್ ಕಸಿಯಲು ಯತ್ನಿಸಿದ್ದಾರೆ. ಪೊಲೀಸ್ ಪೊಲೀಸ್ ಎಂದು ಕೂಗಿಕೊಳ್ತಿದ್ದಂತೆ ಮೂವರು ದುಷ್ಕರ್ಮಿಗಳು ಕ್ಷಣಾರ್ಧದಲ್ಲಿ ಪರಾರಿ ಆಗಿದ್ದಾರೆ.
ವರದಿ: ವಿಕಾಸ್ ಕ್ರೈಂ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




