ಕೊಚ್ಚಿ ಹೋದ ಬಾಲಕಿ: ‘ನಿನ್ನೆಯೂ ವಿದ್ಯಾರ್ಥಿನಿಗೆ ಹುಷಾರಿಲ್ಲದಿದ್ದರೆ ಚೆನ್ನಾಗಿರುತ್ತಿತ್ತು, ಆಕೆಯ ಜೀವ ಉಳಿಯುತ್ತಿತ್ತು: ಕಣ್ಣೀರಿಟ್ಟ ಶಿಕ್ಷಕರು

| Updated By: Rakesh Nayak Manchi

Updated on: Jul 05, 2022 | 12:31 PM

ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿಯ ಪತ್ತೆಗಾಗಿ ಇಂದು ಕೂಡ ಶೋಧಕಾರ್ಯ ಮುಂದುವರೆದಿದೆ. ತನ್ನ ಸಹೋದರಿ ತನ್ನ ಕಣ್ಣೆದುರೇ ನೀರಿನಲ್ಲಿ ಕೊಚ್ಚಿ ಹೋದ ಬಗ್ಗೆ ಸಹೋದರ ತೊದಲು ನುಡಿಗಳಿಂದ ಮಾತನಾಡಿದ್ದು, ತಾಯಿಯೂ ಕಣ್ಣೀರಿಟ್ಟು ಘಟನೆಯನ್ನು ವಿವರಿಸಿದ್ದಾರೆ.

ಕೊಚ್ಚಿ ಹೋದ ಬಾಲಕಿ: ನಿನ್ನೆಯೂ ವಿದ್ಯಾರ್ಥಿನಿಗೆ ಹುಷಾರಿಲ್ಲದಿದ್ದರೆ ಚೆನ್ನಾಗಿರುತ್ತಿತ್ತು, ಆಕೆಯ ಜೀವ ಉಳಿಯುತ್ತಿತ್ತು: ಕಣ್ಣೀರಿಟ್ಟ ಶಿಕ್ಷಕರು
ಬಾಲಕಿ ಸುಪ್ರೀತಾ ಮತ್ತು ಸಾಂದರ್ಭಿಕ ಚಿತ್ರ
Follow us on

ಚಿಕ್ಕಮಗಳೂರು: ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿಯ ಪತ್ತೆಗಾಗಿ ಇಂದು ಕೂಡ ಶೋಧಕಾರ್ಯ ಮುಂದುವರೆದಿದೆ. ನಿನ್ನೆ ಶಾಲೆ ಮುಗಿಸಿ ಮನೆಗೆ ಹೋಗುವಾಗ ಬಾಲಕಿ ಕೊಚ್ಚಿಹೋಗಿದ್ದಾಳೆ. ಬಾಲಕಿ ನೀರಿನಲ್ಲಿ ಕೊಚ್ಚಿ ಹೋಗಿರುವ ಬಗ್ಗೆ ಶಿಕ್ಷಕ ವೃಂದ ದುಃಖತಪ್ತವಾಗಿದೆ. ಆ ಮಗು ಅನಾರೋಗ್ಯದಿಂದ ಒಂದು ವಾರ ಶಾಲೆಗೆ ಬಂದಿರಲಿಲ್ಲ. ಒಂದು ವಾರದ ನಂತರ ಆಕೆ ಶಾಲೆಗೆ ಬಂದಿದ್ದಾಳೆ. ನಿನ್ನೆಯು ಕೂಡ ಬಾಲಕಿಗೆ ಹುಷಾರಿಲ್ಲದಿದ್ದರೆ ಚೆನ್ನಾಗಿರುತ್ತಿತ್ತು. ಆಗ ಸುಪ್ರೀತಾ ಶಾಲೆಗೆ ಬರುತ್ತಿರಲಿಲ್ಲ, ಜೀವ ಉಳಿಯುತ್ತಿತ್ತು ಎಂದು ಟಿವಿ9 ಜೊತೆ ಮಾತನಾಡುತ್ತಾ ಶಿಕ್ಷಕರು ಕಣ್ಣೀರು ಹಾಕಿದ್ದಾರೆ.

ನಿನ್ನೆ ನಡೆದಿದ್ದ ಹೃದಯ ವಿದ್ರಾವಕ ಘಟನೆಯನ್ನು ಕಣ್ಣಾರೆ ಕಂಡ ಬಗ್ಗೆ 1ನೇ ತರಗತಿಯಲ್ಲಿ ಓದುತ್ತಿದ್ದ ಸುಪ್ರೀತಾಳ ಸಹೋದರ ಸೈಮಂಡ್ಸ್ ತೊದಲು ನುಡಿಗಳಿಂದ ಮಾತನಾಡಿದ್ದು, ಕೈ ಕಾಲು ತೊಳೆಯಲು ಹಳ್ಳಕ್ಕೆ ತಂಗಿ ಹೋಗಿದ್ದಳು. ಈ ವೇಳೆ ನೀರು ಜೋರಾಗಿ ಬಂತು, ಸುಪ್ರೀತಾಳನ್ನ ಕೊಚ್ಚಿಕೊಂಡು ಹೋಯ್ತು ಎಂದಿದ್ದಾನೆ. ನಿನ್ನೆ ಶಾಲೆಯಿಂದ ಇಬ್ಬರು ಮನೆಗೆ ವಾಪಸ್ಸಾಗುತ್ತಿದ್ದಾಗ ಈ ಘೋರ ದುರಂತ ನಡೆದಿದೆ.

ಇದನ್ನೂ ಓದಿ: ಕರ್ನಾಟಕದ ಹಲವೆಡೆ ಭಾರಿ ಮಳೆ, ಇಲ್ಲಿದೆ ಕೆಲವು ಅವಾಂತರಗಳ ಫೋಟೋಗಳು

ಶಾಲೆಗೆ ಹೋಗುವಾಗ ಮಗಳ ಮುಖವನ್ನೂ ಸರಿಯಾಗಿ ನೋಡಲಾಗಿರಲಿಲ್ಲ

ಮಗಳನ್ನು ಕಳೆದುಕೊಂಡ ದುಃಖದಲ್ಲಿರುವ ಸುಪ್ರೀತಾಳ ತಾಯಿ ಗೌರಿ, ನಿನ್ನೆ ಶಾಲೆಗೆ ಕಳುಹಿಸುವಾಗ ಆಕೆಯ ಮುಖವನ್ನೂ ಸರಿಯಾಗಿ ನೋಡಲು ಆಗಿರಿಲ್ಲ ಎಂದು ಹೇಳುತ್ತಾ ಕಣ್ಣೀರಿಟಿದ್ದಾರೆ. ಮಗಳಿಗೆ ಜ್ವರವಿದ್ದ ಕಾರಣ ಒಂದು ವಾರ ಶಾಲೆಗೆ ಕಳುಹಿಸಿರಲಿಲ್ಲ. ನಾಳೆ ಶಾಲೆಗೆ ಹೋಗುತ್ತೇನೆ ಎಂದು ಭಾನುವಾರವೇ ಸಿದ್ಧತೆ ಮಾಡಿಕೊಂಡಿದ್ದಳು. ಮಗಳಿಗೆ ಮತ್ತು ನನಗೂ ಹುಷಾರಿರಲಿಲ್ಲ, ನಿನ್ನೆ ಮಗಳು ಶಾಲೆಗೆ ಹೊರಡುವಾಗ ಆಕೆಯ ತಲೆ ಬಾಚಿದ್ದೇನೆ. ಶಾಲೆಗೆ ಹೋಗುವಾಗ ಆಕೆಯ ಮುಖವನ್ನೂ ಸರಿಯಾಗಿ ನೋಡಲಿಲ್ಲ. ಶಾಲೆಯಿಂದ ಬರುವಾಗ ಛತ್ರಿಯನ್ನ ಇಟ್ಟು ಹಳ್ಳಕ್ಕೆ ಕಾಲು ತೊಳೆಯಲು ಹೋಗಿದ್ದಾಳೆ. ಆ ವೇಳೆ ಛತ್ರಿ ಹಾರಿ ಹೋಗಿದ್ದನ್ನು ಹಿಡಿಯಲು ಹೋಗಿ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದಾಳೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Dakshina Kannada Rain: ಕರಾವಳಿಯಲ್ಲಿ ಭಾರೀ ಮಳೆ; ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಇಂದು ರಜೆ