ಚಿಕ್ಕಮಗಳೂರು, (ಡಿಸೆಂಬರ್ 05): ಅಜ್ಜಂಪುರ ಸಮುದಾಯ ಆರೋಗ್ಯ ಕೇಂದ್ರ ವೈದ್ಯ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕಟ್ಟೆಹೊಳೆ ಗ್ರಾಮದ ಬಳಿ ರೈಲಿಗೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಕಟ್ಟೆ ಹೊಳೆ ಗ್ರಾಮದ ಡಾ. ಉತ್ತಮ್ (27) ಮೃತ ದುರ್ದೈವಿ. ವಾಕ್ ಗೆ ಹೋಗುವುದಾಗಿ ಹೇಳಿ ಬಂದಿದ್ದ ವೈದ್ಯ ಉತ್ತಮ್ ಸಾವನ್ನಪ್ಪಿದ್ದು, ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕಿಸಲಾಗಿದೆ. ಆದ್ರೆ, ವೈದ್ಯ ಉತ್ತಮ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಭದ್ರಾವತಿ ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಕಲಬುರಗಿ: ಇನ್ನೊಂದೆಡೆ ಕಲಬುರಗಿಯಲ್ಲಿ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸೋಮನಾಥ್ ಚಿದ್ರಿ (23) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಬೀದರ್ ಜಿಲ್ಲೆಯ ಬಾಲ್ಕಿ ತಾಲ್ಲೂಕಿನ ಡೋಣಗಾಪುರ ಗ್ರಾಮದ ನಿವಾಸಿ ಸೋಮನಾಥ್, ಕಲಬುರಗಿಯ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ. ಆದ್ರೆ, ಇಂದು(ಡಿಸೆಂಬರ್ 05) ವೀರಶೈವ ಕಲ್ಯಾಣ ಹಾಸ್ಟೆಲ್ ಹಿಂಭಾಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನ್ ಲೈನ್ ಜೂಜಾಟದಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದು, ಸಾಲಗಾರರ ಕಾಟದಿಂದ ಬೇಸತ್ತು ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.