ಚಿಕ್ಕಮಗಳೂರು, ಮಾರ್ಚ್.26: ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಗಿರಿ ಸ್ವಾಮಿ (Baba Budan Giri) ದರ್ಗಾದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಉರೂಸ್ (Urus) ಆಚರಣೆ ನಡೆಯಲಿದ್ದು ಚಿಕ್ಕಮಗಳೂರು ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಉರೂಸ್ ಹಿನ್ನೆಲೆ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 17 ವರ್ಷಗಳ ಬಳಿಕ ಶಾಖಾದ್ರಿ ನೇತೃತ್ವದಲ್ಲಿ ಉರೂಸ್ ಆಚರಣೆಗೆ ಮುಸ್ಲಿಂ ಸಮುದಾಯ ಸಿದ್ದತೆ ನಡೆಸಿದೆ.
ಬಾಬಾ ಬುಡನ್ ಗಿರಿ ಸ್ವಾಮಿ ದರ್ಗಾದ ಉರೂಸ್ಗೆ ರಾಜ್ಯ, ಹೊರ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಆಡಳಿತ ಮಂಡಳಿ ಶಾಖಾದ್ರಿ ನೇತೃತ್ವದಲ್ಲಿ ಉರೂಸ್ ನಡೆಸಲು ತಯಾರಿ ನಡೆಸಿದೆ. ಇನ್ನು ಗೋರಿಗಳ ಮೇಲೆ ಹಸಿರು ಬಟ್ಟೆ ಹಾಕಿ (ಚಾದರ್), ಗಂಧದ ಲೇಪನಕ್ಕೆ ಅವಕಾಶ ನೀಡುವಂತೆ ಶಾಖಾದ್ರಿ ಕುಟುಂಬ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಅವಕಾಶ ಕೇಳಿದೆ. 17 ವರ್ಷಗಳ ಬಳಿಕ ಇಂದು ಶಾಖಾದ್ರಿ ನೇತೃತ್ವದಲ್ಲಿ ಉರೂಸ್ ಆಚರಣೆ ನಡೆಸಲು ತಯಾರಿ ನಡೆದಿದೆ. ಆದರೆ ಚಿಲ್ಲಾಡಳಿತ ಇದುವರೆಗೂ ಗೋರಿಗಳ ಮೇಲೆ ಹಸಿರು ಬಟ್ಟೆ ಹೊದಿಸಲು ಹಾಗೂ ಗಂಧ ಲೇಪನಕ್ಕೆ ಅವಕಾಶ ಕೊಟ್ಟಿಲ್ಲ. ಹೀಗಾಗಿ ಜಿಲ್ಲಾಡಳಿತದ ವಿರುದ್ಧ ಶಾಖಾದ್ರಿ ಸೇರಿದಂತೆ ಮುಸ್ಲಿಂ ಸಮುದಾಯ ಆಕ್ರೋಶ ಹೊರ ಹಾಕಿದೆ.
ಎರಡು ವರ್ಷಗಳ ಹಿಂದೆ ಯಾವ ರೀತಿ ಸರಳವಾಗಿ ಉರೂಸ್ ನಡೆಸಲಾಗಿತ್ತೋ ಅದೇ ಮಾದರಿಯಲ್ಲೇ ನಡೆಸಲು ಜಿಲ್ಲಾಡಳಿತ ತಯಾರಿ ನಡೆಸಿದೆ. ಇಂದಿನಿಂದ ಮೂರು ದಿನಗಳ ಕಾಲ ಇನಾಂ ದತ್ತಾತ್ರೇಯ ಬಾಬಾ ಬುಡನ್ ಗಿರಿ ಸ್ವಾಮಿಯ ಉರೂಸ್ ನಡೆಯಲಿದೆ. ಆದರೆ ಈ ಬಾರಿಯಾದರೂ ಸಂಪ್ರದಾಯದಂತೆ ಗೋರಿಗಳಿಗೆ ಹಸಿರು ಚಾದರ್ ಹೊದಿಸಿ ಗಂಧ ಹಚ್ಚಲು ಹಾಗೂ ಗುಹೆ ಒಳಗೆ ಹೋಗಿ ಪೂಜೆ ಸಲ್ಲಿಸಲು ಅವಕಾಶ ನೀಡಿ ಎಂದು ಮುಸ್ಲಿಂ ಹಿರಿಯರು ಪಟ್ಟು ಹಿಡಿದಿದ್ದಾರೆ. ಹಾಗೂ ಅವಕಾಶ ನೀಡದಿದ್ದರೆ ಉರೂಸ್ ಬಹಿಷ್ಕಾರಿಸುವ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಉರುಸ್ ಆಚರಣೆ ವೇಳೆ ಬಾಬಾ ಬುಡನ್ಸ್ವಾಮಿ ದರ್ಗಾದಲ್ಲಿ ಬೆಂಕಿ: ಕ್ರಮಕ್ಕೆ ಆಗ್ರಹಿಸಿದ ಹಿಂದೂ ಮುಖಂಡರು
ಇನ್ನು ಈ ಹಿಂದೆ ಶಾಖಾದ್ರಿ ಕುಟುಂಬದ ನೇತೃತ್ವದಲ್ಲಿ ಉರೂಸ್ ಆಚರಣೆಗೆ ಅವಕಾಶ ಕೋರಿ ಶಾಖಾದ್ರಿ ಗೌಸ್ ಮೋಹಿದ್ದಿನ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸದ್ಯ ಪೂಜಾ ಕಾರ್ಯದಲ್ಲಿ ಭಾಗಿಯಾಗಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಆದರೆ ಕೋರ್ಟ್ನ ಆದೇಶದಲ್ಲಿ ಶಾಖಾದ್ರಿಗೆ ಗುಹೆಯೊಳಗೆ ತೆರಳಿ ಪೂಜಾ ಕಾರ್ಯಕ್ಕೆ ಅವಕಾಶ ನೀಡಿರುವ ಬಗ್ಗೆ ಸ್ಪಷ್ಟನೆ ಇಲ್ಲ. ಹೀಗಾಗಿ ಜಿಲ್ಲಾಡಳಿತ ಗುಹೆ ಒಳಗೆ ಹೋಗಿ ಪೂಜೆ ಸಲ್ಲಿಸಲು ಅವಕಾಶ ನೀಡಿಲ್ಲ. ಎರಡು ವರ್ಷಗಳ ಹಿಂದೆ ನಡೆದ ಉರೂಸ್ ಮಾದರಿಯಲ್ಲೇ ಇಂದು ಕೂಡ ಉರೂಸ್ ನಡೆಸಲು ಜಿಲ್ಲಾಡಳಿತ ತಯಾರಿ ನಡೆಸಿದೆ.
ಹಿಂದೂ ಮುಸ್ಲಿಂ ವಿವಾದಿತ ಕೇಂದ್ರವಾಗಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಉರೂಸ್ ಆಚರಣೆ ವೇಳೆ ಮಾಂಸಹಾರ ಸೇವನೆ, ಮಾಂಸ ಹಾರ ಅಡುಗೆ ತಯಾರಿಸಲು ಅವಕಾಶ ನೀಡದಂತೆ ಹಿಂದೂ ಸಂಘಟನೆಗಳ ಪಟ್ಟು ಹಿಡಿದಿವೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:48 am, Tue, 26 March 24