ಚಿಕ್ಕಮಗಳೂರು, (ಜುಲೈ 17): ಮಾಜಿ ಸಚಿವೆ ಮೋಟಮ್ಮ ನಿವಾಸದ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್ ಧಗ-ಧಗ ಹೊತ್ತಿ ಉರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿರುವ ಮಾಜಿ ಸಚಿವೆ ಮೋಟಮ್ಮ ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್ನಲ್ಲಿ ಇಂದು(ಜುಲೈ 17) ಬೆಂಕಿ ಕಾಣಿಸಿಕೊಂಡಿದ್ದು, ಬೈಕ್ನ ಕೆಲ ಭಾಗಗಳು ಸುಟ್ಟು ಭಸ್ಮವಾಗಿವೆ. ಮೋಟಮ್ಮ ಕಾರು ಚಾಲಕ ರಾಜೇಶ್ಗೆ ಸೇರಿದ ಬುಲೆಟ್ ಬೈಕ್ನ ಬ್ಯಾಟರಿ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿರುವವ ಸಾಧ್ಯತೆಗಳಿವೆ ಎನ್ನಲಾಗಿದೆ. ಇನ್ನು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿಯನ್ನು ನಂದಿಸಿ ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗ, (ಜುಲೈ 17): ಇನ್ನು ಖಾಸಗಿ ಬಸ್ ಧಗಧಗನೇ ಹೊತ್ತಿ ಉರಿದು ಬೆಂಕಿಗೆ ಆಹುತಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅನಂದಪುರ ಬಳಿ ನಡೆದಿದೆ. ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ 3 ದಿನಗಳಿಂದ ಬಸ್ ನಿಂತಲ್ಲೇ ನಿಂತುಕೊಂಡಿತ್ತು. ಆದ್ರೆ, ಇಂದು (ಜುಲೈ 17) ಬೆಳಗ್ಗೆ ಏಕಾಏಕಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಿಗೆಗೆ ಗಜಾನನ ಕಂಪನಿಗೆ ಸೇರಿದ ಬಸ್ ಸುಟ್ಟು ಭಸ್ಮವಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಬಗ್ಗೆ ಆನಂದಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 2:36 pm, Mon, 17 July 23