ಮುಳ್ಳಯ್ಯನಗಿರಿಯಲ್ಲಿ ಟ್ರಾಫಿಕ್ ಜಾಮ್, ಪ್ರವಾಸಿಗರ ವಾಹನಕ್ಕೆ ನಿರ್ಬಂಧ: ಖಾಸಗಿ ವಾಹನ ಚಾಲಕರಿಗೆ ವರದಾನ

| Updated By: Rakesh Nayak Manchi

Updated on: Jul 16, 2023 | 4:32 PM

ವೀಕೆಂಡ್ ಹಿನ್ನೆಲೆ ಮಳೆಗಾಲದ ಪ್ರಕೃತಿ ಸೌಂದರ್ಯವನ್ನ ಸವಿಯಲು ಪ್ರವಾಸಿಗರ ದಂಡೆ ಕಾಫಿನಾಡು ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಗೆ ಹರಿದು ಬಂದಿದೆ. ಹಸಿರು ರಾಶಿಯ ಮಧ್ಯೆ ಕೊರೆಯುವ ಚಳಿಯಲ್ಲಿ ಎತ್ತರದ ಶಿಖರದಲ್ಲಿ ನಿಂತು ಸಾವಿರಾರು ಪ್ರವಾಸಿಗರು ಎಂಜಾಯ್ ಮಾಡಿದರು.

ಮುಳ್ಳಯ್ಯನಗಿರಿಯಲ್ಲಿ ಟ್ರಾಫಿಕ್ ಜಾಮ್, ಪ್ರವಾಸಿಗರ ವಾಹನಕ್ಕೆ ನಿರ್ಬಂಧ: ಖಾಸಗಿ ವಾಹನ ಚಾಲಕರಿಗೆ ವರದಾನ
ವೀಕೆಂಡ್​ನಲ್ಲಿ ಮುಳ್ಳಯನಗಿರಿ ಶಿಖರಕ್ಕೆ ಆಗಮಿಸಿದ ಪ್ರವಾಸಿಗರ ದಂಡು
Follow us on

ಚಿಕ್ಕಮಗಳೂರು, ಜುಲೈ 16: ಮಳೆಗಾಲದಲ್ಲಿ ಪ್ರಕೃತಿ ಸೌಂದರ್ಯ ನೋಡುವುದೇ ಖುಷಿ, ಮಳೆಗಾಲದಲ್ಲಿ ಗಿರಿ ಶಿಖರಗಳಲ್ಲಿ ಸೃಷ್ಟಿಯಾಗುವ ಸೊಬಗನ್ನ ಕಣ್ತುಂಬಿಕೊಳ್ಳುವುದೇ ಅಂದ. ರಾಜ್ಯದ ಅತಿ ಎತ್ತರದ ಗಿರಿ ಶಿಖರವಾದ ಮುಳ್ಳಯ್ಯನಗಿರಿಗೆ (Mullayanagiri Peak) ವೀಕೆಂಡ್​ನಲ್ಲಿ ಪ್ರವಾಸಿಗರ ದಂಡೇ ಹರಿದು ಬಂದಿದೆ. ವೀಕೆಂಡ್ ಹಿನ್ನೆಲೆ ರಾಜ್ಯ, ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರವಾಸಿಗರು ಎತ್ತರದ ಶಿಖರದ ಮೇಲೆ ನಿಂತು ಮಳೆಗಾಲದಲ್ಲಿ ಸೃಷ್ಟಿಯಾಗಿರುವ ದೃಶ್ಯ ಕಾವ್ಯವನ್ನು ಸವಿದು ಎಂಜಾಯ್ ಮಾಡಿದರು.

ಕೊರೆಯುವ ಚಳಿಯಲ್ಲಿ ದಟ್ಟ ಮಂಜಿನ ನಡುವೆ ಪ್ರವಾಸಿಗರು ಕುಣಿದು ಕುಪ್ಪಲಿಸಿದರು. ಪ್ರತಿ ವೀಕೆಂಡ್​ಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಸುತ್ತಮುತ್ತಲಿನ ಗಿರಿ ಶಿಖರಕ್ಕೆ ಇಂದು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಪ್ರಕೃತಿ ಮಡಿಲಿನಲ್ಲಿ ಸಿಗುವ ಖುಷಿಯನ್ನ ಅನುಭವಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಕಿರಿದಾದ ರಸ್ತೆಯ ಮೂಲಕ ಚಿಕ್ಕಮಗಳೂರಿನಿಂದ ಮುಳ್ಳಯ್ಯನಗಿರಿಗೆ ತೆರಳುವ ಮಾರ್ಗ ಮಧ್ಯೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್​ನಲ್ಲಿ ಸಿಲುಕಿ ಗಂಟೆಗಟ್ಟಲೆ ಪ್ರವಾಸಿಗರ ವಾಹನಗಳು ನಿಂತಲ್ಲೇ ನಿಲ್ಲಬೇಕಾಯಿತು. ಇನ್ನೂ ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಯಾವುದೇ ಸೂಚನೆ ಇಲ್ಲದಿದ್ದರೂ ಮುಳ್ಳಯ್ಯನಗಿರಿಗೆ ಪ್ರವಾಸಿಗರ ವಾಹನಗಳಿಗೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ನಿರ್ಬಂಧಿಸಿದರು.

ಇದನ್ನು ಓದಿ: Holiday Destination: ಮಳೆಗಾಲದಲ್ಲಿ ಗೋವಾದ ಈ 7 ಸುಂದರ ಕಡಲತೀರಗಳಿಗೆ ಭೇಟಿ ನೀಡಿ

ಮುಳ್ಳಯ್ಯನಗಿರಿ ತೆರಳುವ ಮಾರ್ಗ ಮಧ್ಯೆ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಸೀತಾಳಯ್ಯನ ಗಿರಿ ಬಳಿ ಪ್ರವಾಸಿಗರ ವಾಹನಗಳಿಗೆ ಪಾರ್ಕಿಂಗ್ ಮಾಡಿಸಿ ಖಾಸಗಿ ವಾಹನಗಳ ಮೂಲಕ ಮುಳ್ಳಯ್ಯನಗಿರಿಗೆ ತೆರಳುವಂತೆ ಸೂಚನೆ ನೀಡಿದರು. ಇದರಿಂದ ಖಾಸಗಿ ವಾಹನ ಚಾಲಕರು ಕೇಳಿದಷ್ಟು ಕೊಡುವ ಸ್ಥಿತಿ ನಿರ್ಮಾಣವಾಯಿತು. ಒಬ್ಬ ಪ್ರವಾಸಿಗೆ 100 ರೂ.ನಂತರ ಚಾರ್ಜ್ ಮಾಡಿದ್ದಾರೆ. ರಾಜ್ಯ ಹೊರ ರಾಜ್ಯದಿಂದ ಹರಿದು ಬಂದಿದ್ದ ಸಾವಿರಾರು ಪ್ರವಾಸಿಗರು ಮುಳ್ಳಯ್ಯನಗಿರಿ ಪ್ರಕೃತಿ ಸೌಂದರ್ಯ ನೋಡಿ ಸಖತ್ ಎಂಜಾಯ್ ಮಾಡಿದರು.

ಮಲೆನಾಡಲ್ಲಿ ಮಳೆಗಾಲ‌ದಲ್ಲಿ ಸೃಷ್ಟಿಯಾಗುವ ಅದ್ಭುತ ಪ್ರಕೃತಿ ದೃಶ್ಯಕಾವ್ಯವನ್ನ ಪ್ರವಾಸಿಗರು ಎಂಜಾಯ್ ಮಾಡಿದರು. ರಾಜ್ಯದ ಎತ್ತರದ ಶಿಖರ ಮುಳ್ಳಯ್ಯನಗಿರಿಯಲ್ಲಿ ಟ್ರಾಫಿಕ್ ಜಾಮ್, ಪ್ರವಾಸಿಗರ ವಾಹನಗಳಿಗೆ ಪೊಲೀಸರ ನಿರ್ಬಂಧಗಳ ನಡುವೆ ಪ್ರಕೃತಿ ಸೌಂದರ್ಯವನ್ನ ಪ್ರವಾಸಿಗರು ಎಂಜಾಯ್ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ