Monsoon Health Tips: ಮಳೆಗಾಲದಲ್ಲಿ ಮೂತ್ರಪಿಂಡದ ಸೋಂಕು ಬಾಧಿಸಬಹುದು? ಇಲ್ಲಿವೆ ಎಚ್ಚರಿಕೆಯ ಸಲಹೆಗಳು
ಮಳೆಗಾಲವು ಹಲವಾರು ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರಗಳ ಕಾಯಿಲೆಯನ್ನು ಉಂಟುಮಾಡುತ್ತವೆ. ಅಲ್ಲದೆ ಈ ಸಮಯದಲ್ಲಿ ಮೂತ್ರಪಿಂಡದ ಕಾಯಿಲೆಯ ಸಮಸ್ಯೆಯಿರುವ ಜನರು ಹೆಚ್ಚು ದುರ್ಬಲರಾಗಿರುತ್ತಾರೆ. ಹಾಗಾಗಿ ಈ ಮಳೆಗಾಲದಲ್ಲಿ ಮೂತ್ರಪಿಂಡದ ಸೋಂಕಿಗೆ ತುತ್ತಾಗದೆ, ಆರೋಗ್ಯವನ್ನು ಸರಿಯಾದ ರೀತಿಯಲ್ಲಿ ಹೇಗೆ ಕಾಪಾಡಿಕೊಳ್ಳುವುದು ಎಂಬ ಸಲಹೆ ಇಲ್ಲಿದೆ.
ಮಳೆಗಾಲವು ಸಂತಸ ಮತ್ತು ಉಲ್ಲಾಸದಾಯಕ ವಾತವರಣವನ್ನು ನೀಡುತ್ತದೆ ನಿಜ. ಅಲ್ಲದೆ ಈ ಋತುವು ಸೋಂಕುಗಳು ಹಾಗೂ ಕಾಯಿಲೆಗಳನ್ನು ಕೂಡಾ ಹೊತ್ತು ತರುತ್ತದೆ. ಮಾನ್ಸೂನ್ ಸಮಯದಲ್ಲಿ ಚರ್ಮ, ಕಣ್ಣು ಮತ್ತು ಮೂತ್ರಪಿಂಡದ ಸಮಸ್ಯೆಗಳು ಸಾಮಾನ್ಯವಾಗಿದೆ. ವಾತಾವರಣದಲ್ಲಿನ ಅತಿಯಾದ ತೇವಾಂಶದ ಕಾರಣದಿಂದಾಗಿ, ಈ ಸಮಯದಲ್ಲಿ ಹೆಚ್ಚಾಗಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕುಗಳು ಹರಡುತ್ತವೆ. ಅಲ್ಲದೆ ಕಲುಷಿತ ನೀರು ಹಾಗೂ ಕಳಪೆ ಗುಣಮಟ್ಟದ ಆಹಾರ ಸೇವನೆಯು ಹಲವಾರು ಕಾಯಿಲೆಗಳಿಗೆ ಕಾರಣವಾಗುತ್ತದೆ.. ಡೆಂಗ್ಯೂ, ಟೈಫಾಯಿಡ್ ಮುಂತಾದ ಕೆಲವು ಕಾಯಿಲೆಗಳು ಮೂತ್ರಪಿಂದ ವೈಫಲ್ಯಕ್ಕೆ ಕೂಡಾ ಕಾರಣವಾಗುತ್ತದೆ. ಮೂತ್ರಪಿಂಡವು ದೇಹದ ಪ್ರಮುಖ ಅಂಗವಾಗಿದ್ದು, ಇದು ದೇಹದಿಂದ ತ್ಯಾಜ್ಯವನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಕೆಂಪು ರಕ್ತಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಆದ್ದರಿಂದ ನಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಮಳೆಗಾಲದಲ್ಲಿ ಮೂತ್ರಪಿಂಡದ ಸೋಂಕುಗಳು ಬಾರದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ.
ಮಳೆಗಾಲದ ಸಮಯದಲ್ಲಿ ಮೂತ್ರಪಿಂಡದ ಸೋಂಕನ್ನು ತಡೆಗಟ್ಟುವುದು ಹೇಗೆ:
• ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಆಗಾಗ್ಗೆ ಪರೀಕ್ಷಿಸುತ್ತಿರಿ.
• ರಕ್ತದೊತ್ತಡವನ್ನು ಪರೀಕ್ಷಿಸುವುದು.
• ಈ ಋತವಿನಲ್ಲಿ ದೇಹದಲ್ಲಿನ ನಿರ್ಜಲೀಕರಣದ ಅಪಾಯವನ್ನು ತಪ್ಪಿಸಲು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ.
• ಸೋಂಕುಗಳು ಬಾರದಂತೆ ತಡೆಗಟ್ಟಲು ಕೈಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.
• ದಿನನಿತ್ಯ ಕಾಲೋಚಿತ ಹಣ್ಣುಗಳ ಸೇವನೆ ಮಾಡಿ.
• ಪೋಷಕಾಂಶಗಳು ಮತ್ತು ವಿಟಮಿನ್ ಸಿ ಅಂಶದಿಂದ ಹೆಚ್ಚಿರುವ ಆಹಾರವನ್ನು ಸೇವಿಸಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.
• ಯಾವುದೇ ಹಾನಿಕಾರಕ ಬ್ಯಾಕ್ಟೀರಿಯಾಗಳು ದೇಹ ಸೇರದಂತೆ ನೋಡಿಕೊಳ್ಳಲು ಯಾವಾಗಲೂ ಬೇಯಿಸಿದ ಆಹಾರಗಳನ್ನು ಸೇವನೆ ಮಾಡಿ.
ಇದನ್ನೂ ಓದಿ: Monsoon Health Tips: ಮಳೆಗಾಲದಲ್ಲಿ ಮಕ್ಕಳು ಜೋಪಾನ, ಈ ಕಾಯಿಲೆಗಳು ಬರಬಹುದು, ಇಲ್ಲಿದೆ ತಜ್ಞರ ಸಲಹೆ
ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಸೇವನೆ ಮಾಡಬೇಕಾದ ಅತ್ಯುತ್ತಮ ಆಹಾರಗಳು:
ಮೀನು:
ಮೀನುಗಳು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿದ್ದು, ಅದು ರಕ್ತದಲ್ಲಿನ ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕ್ಯಾಪ್ಸಿಕಂ(ದೊಡ್ಡ ಮೆಣಸಿನಕಾಯಿ):
ಕ್ಯಾಪ್ಸಿಕಂ ಅಥವಾ ಬೆಲ್ ಪೆಪ್ಪರ್ಗಳು ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಮತ್ತು ಅದು ಕಡಿಮೆ ಪೊಟ್ಯಾಸಿಯಂ ಅಂಶವನ್ನು ಹೊಂದಿದ್ದು, ಅದು ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಹಸಿರು ಎಲೆತರಕಾರಿಗಳು:
ಪಾಲಕ್, ಎಲೆಕೋಸು, ಹೂಕೋಸು ಮತ್ತು ಇತರ ಹಸಿರು ಎಲೆ ತರಕಾರಿಗಳು ನಮ್ಮ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇವುಗಳು ಜೀವಸತ್ವಗಳು, ಖನಿಜಗಳು ಮತ್ತು ಅಗತ್ಯವಾದ ಪೋಷಕಾಂಶಗಳಿಂದ ಕೂಡಿದೆ. ಅಲ್ಲದೆ ಇವುಗಳಲ್ಲಿ ಪೊಟ್ಯಾಸಿಯಂ ಅಂಶ ಕಡಿಮೆಯಿದ್ದು, ಇದು ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.
ಬೆರ್ರಿ ಹಣ್ಣುಗಳು:
ಬೆರ್ರಿ ಹಣ್ಣುಗಳು ಪ್ರಮುಖ ಪೋಷಕಾಂಶಗಳು ಮತ್ತು ಆಂಥೋಸನಿಯಾನಿನ್ ಎಂದು ಕರೆಯಲ್ಪಡುವ ಉತ್ಕರ್ಷಣ ನಿರೋಧಕ ಅಂಶಗಳಿಂದ ಸಮೃದ್ಧವಾಗಿದೆ. ಇದು ಹೃದ್ರೋಗ, ಮಧುಮೇಹ ಮತ್ತು ಇತರ ದೀರ್ಘಕಾಲದ ಕಾಯಿಲೆಗಳಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ. ಅಲ್ಲದೆ ಈ ಹಣ್ಣುಗಳಲ್ಲಿ ಪೊಟ್ಯಾಸಿಯಂ ಅಂಶ ಕಡಿಮೆಯಿದ್ದು, ಇದು ಮೂತ್ರಪಿಂಡದ ಸಮಸ್ಯೆಯಿರುವ ಜನರಿಗೆ ಅತ್ಯುತ್ತಮ ಆಹಾರವಾಗಿದೆ.
ಇವುಗಳ ಹೊರತಾಗಿ ಬೆಳ್ಳುಳ್ಳಿ, ಮೊಟ್ಟೆಯ ಬಿಳಿ ಭಾಗ ಹಾಗೂ ಇನ್ನಿತರ ಪ್ರೋಟೀನ್ ಭರಿತ ಆಹಾರಗಳು ಮೂತ್ರಪಿಂಡದ ಆರೋಗ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ