ಚಿಕ್ಕಮಗಳೂರು: ಸ್ಥಗಿತಗೊಂಡಿದ್ದ ಚಿಕ್ಕಮಗಳೂರು-ಬೆಂಗಳೂರು ರೈಲು ಪುನರ್ ಆರಂಭಿಸಲು ಕೇಂದ್ರದಿಂದ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ನಷ್ಟದ ನೆಪವೊಡ್ಡಿ ಕಳೆದ ನವೆಂಬರ್ 24ರಂದು ರೈಲು ಸಂಚಾರವನ್ನ ಸ್ಥಗಿತಗೊಳಿಸಲಾಗಿತ್ತು. ಹಲವು ದಶಕಗಳ ಹೋರಾಟದ ಫಲವಾಗಿ ಬಂದಿದ್ದ ರೈಲು ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದ್ದು ಜನಸಾಮಾನ್ಯರಿಗೆ ಬೇಸರ ತರಿಸಿತ್ತು. ಸ್ಥಗಿತಗೊಂಡಿದ್ದ ರೈಲನ್ನ ಮರಳಿ ಪ್ರಾರಂಭ ಮಾಡುವಂತೆ ಜನಪ್ರತಿನಿಧಿಗಳ ಮೇಲೆ ಜನಸಾಮಾನ್ಯರು ಒತ್ತಡ ಹೇರಿದ್ದರು. ಸದ್ಯ ಕಾಫಿನಾಡಿಗರಿಗೆ ಹೊಸ ವರ್ಷಕ್ಕೆ ಗುಡ್ ನ್ಯೂಸ್ ಸಿಕ್ಕಿದ್ದು, ಚಿಕ್ಕಮಗಳೂರು-ಬೆಂಗಳೂರು ರೈಲು ಪುನರಾರಂಭಕ್ಕೆ ಸೂಚನೆ ಸಿಕ್ಕಿದೆ.
ಜನರ ಬೇಡಿಕೆಯನ್ನ ಗಂಭೀರವಾಗಿ ಪರಿಗಣಿಸಿದ ಚಿಕ್ಕಮಗಳೂರು-ಉಡುಪಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರೈಲು ಸಂಚಾರವನ್ನ ಪುನಾರಂಭಿಸುವಂತೆ ರೈಲ್ವೇ ಸಚಿವರಿಗೆ ಮನವಿ ಸಲ್ಲಿಸಿದ್ದರು. ಕೊನೆಗೂ ಅವರ ಪ್ರಯತ್ನ ಯಶಸ್ವಿಯಾಗಿದ್ದು, ಜನವರಿ 3 ಮತ್ತು 4ರಿಂದ ರೈಲುಗಳು ಮರು ಓಡಾಟ ನಡೆಸಲಿವೆ.
ಪ್ರವಾಸಿ ತಾಣವೂ, ರಾಜ್ಯದ ಮಲೆನಾಡಿನ ಪ್ರಮುಖ ಜಿಲ್ಲೆಯೂ ಆದ ಚಿಕ್ಕಮಗಳೂರು ಕಾಫಿ ಮತ್ತು ಇತರ ಹಲವು ಕೃಷಿಗೆ ಖ್ಯಾತವಾಗಿದ್ದು. ನಿತ್ಯ ಸಾವಿರಾರು ಜನರಿಗೆ ಪ್ರಯಾಣಕ್ಕೂ, ಕೃಷಿ ಸಂಬಂಧಿತ ಗೂಡ್ಸ್ ರೈಲುಗಳ ಓಡಾಟಕ್ಕೂ ಅನುಕೂಲಕರವಾಗುವಂತಹ ಮಾರ್ಗವಾಗಿದೆ ಎಂದು ರೈಲ್ವೆ ಸಚಿವರಿಗೆ ಹಾಗು ರೈಲ್ವೇ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರು.
ಸದ್ಯ ಸಚಿವರ ಮಧ್ಯಪ್ರವೇಶದಿಂದ ಈ ಹಿಂದೆ ಇಲಾಖೆ ತೆಗೆದುಕೊಂಡ ನಿರ್ಣಯವನ್ನು ವಾಪಾಸು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಚಿಕ್ಕಮಗಳೂರು ಕಡೂರು ರೈಲು ಮಾರ್ಗವನ್ನು ಹಾಗು ರೈಲುಗಳನ್ನು ಲಾಭದಾಯಕವಾಗಿ ಜನಸ್ನೇಹಿಯಾಗಿ ಮಾಡಲು ಶೋಭಾ ಕರಂದ್ಲಾಜೆಯವರು ಹಲವಾರು ಸಲಹೆಗಳನ್ನು ರೈಲ್ವೆ ಸಚಿವರ ಜತೆ ಹಂಚಿಕೊಂಡಿದ್ದು, ಅದರಲ್ಲಿ ಚಿಕ್ಕಮಗಳೂರು-ಬೆಂಗಳೂರು ನಡುವೆ ಹೊಸ ರಾತ್ರಿ ಸ್ಲೀಪರ್ ರೈಲು, ಹಗಲು ಹೊತ್ತಲ್ಲಿ ಬೆಂಗಳೂರು ಕಡೆ ಪ್ರಯಾಣಿಸುವವರಿಗೆ ಕಡೂರು, ಬೀರೂರಲ್ಲಿ ಸಂಪರ್ಕ ನೀಡುವ ಚಿಕ್ಕಮಗಳೂರು ಬಿರೂರು/ಕಡೂರು ಡೆಮು ಸೇವೆ ಹಾಗೂ ಕೃಷಿ ಸಂಬಂಧಿತ ಕಿಸಾನ್ ರೈಲುಗಳ ಓಡಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ.
ವರದಿ: ಪ್ರಶಾಂತ್
ಇದನ್ನೂ ಓದಿ
New Year 2022: ಕಲರ್ಫುಲ್ ಡೂಡಲ್ ಮೂಲಕ ಹೊಸ ವರ್ಷ ಸ್ವಾಗತಿಸಿದ ಗೂಗಲ್
Published On - 12:20 pm, Sat, 1 January 22