ಚಿಕ್ಕಮಗಳೂರು: ರಾಜ್ಯದಲ್ಲಿ ಕಂದಾಯ ಭೂಮಿ ಒತ್ತುವರಿಯಲ್ಲಿ (Revenue Land Encroachment) ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಹೆಸರು ಮುಂಚೂಣಿಯಲ್ಲಿದೆ. ಕಂದಾಯ ಭೂಮಿ (Revenue Land) ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡೂರು ಠಾಣೆಯ ಪೊಲೀಸರು ಕಾರವಾರ ಸೀಬರ್ಡ್ ನೌಕಾನೆಲೆಯ ಭೂ ಸ್ವಾಧೀನ ಅಧಿಕಾರಿ ಉಮೇಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಬಂಧಿತ ಉಮೇಶ್ ತಹಶಿಲ್ದಾರ್ ಆಗಿದ್ದ ಸಮಯದಲ್ಲಿ ಹುಲಿ ಸಂರಕ್ಷಿತ ಪ್ರದೇಶವನ್ನೂ ಕೂಡ ಅಕ್ರಮವಾಗಿ ಪ್ರಭಾವಿಗಳ ಹೆಸರಿಗೆ ಮಾಡಿಕೊಟ್ಟಿದ್ದಾನೆ ಎಂಬ ಅಂಶ ಬಯಲಾಗಿದೆ.
ಕೆ.ಎ.ಎಸ್ ಅಧಿಕಾರಿ ಉಮೇಶ್ ಈ ಹಿಂದೆ ಕಡೂರು ತಾಲೂಕು ತಹಶಿಲ್ದಾರ್ ಆಗಿ ಕಾರ್ಯ ನಿರ್ವಹಿಸಿದ್ದರು. ಉಮೇಶ್ ತಮ್ಮ ಅಧಿಕಾರದ ಅವಧಿಯಲ್ಲಿ ಎಮ್ಮೆದೊಡ್ಡಿ ಗ್ರಾಮ, ಅಯ್ಯನಕೆರೆ, ಮದಗದಕೆರೆ ಸಮೀಪವಿರುವ ಮೀಸಲು ಪ್ರದೇಶವನ್ನು ಹಿರಿಯ ಪೊಲೀಸ್ ಅಧಿಕಾರಿ, ಕಂದಾಯ ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ಸೇರಿದಂತೆ 220 ಪ್ರಭಾವಿಗಳ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದನು.
ಇದೀಗ ಜಿಲ್ಲಾಡಳಿತ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಖಾತೆಯೊಂದಿರುವವರಿಗೆ ನೋಟಿಸ್ ನೀಡುತ್ತಿದ್ದು, ಇವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿದೆ. ಪ್ರಕರಣ ಸಂಬಂಧ ಕೆ.ಎ.ಎಸ್ ಅಧಿಕಾರಿ ಉಮೇಶ್ ವಿರುದ್ಧ ಡಿಎಫ್ಓ ರಮೇಶ್ ಬಾಬು ಅವರು ದೂರು ನೀಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂದಾಯ ಭೂಮಿ ಹಗರಣ -60 ರೆವೆನ್ಯೂ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿರುವುದು ಪತ್ತೆ
ಉಮೇಶ್ ಈ ಹಿಂದೆ ಕಡೂರು ತಾಲೂಕಿನ ತಹಶಿಲ್ದಾರ್ ಆಗಿದ್ದರು. ಕಂದಾಯ ಭೂಮಿ ಪರಭಾರೆ ಹಗರಣದಲ್ಲಿ ಭಾಗಿಯಾದ ಹಿನ್ನೆಲೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಉಮೇಶ್ ವಿರುದ್ಧ ದೂರು ದಾಖಲಾಗಿತ್ತು. ಜಿಲ್ಲಾಡಳಿತ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು. ಸರ್ಕಾರ ಇತ್ತೀಚೆಗೆ 15 ತಹಶಿಲ್ದಾರುಗಳ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಿತ್ತು. ಕಡೂರು ತಾಲೂಕಿನಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖಾ ತಂಡ ವರದಿ ಸಲ್ಲಿಸಿತ್ತು.
ಕಡೂರು ತಾಲೂಕಿನಲ್ಲೇ ಮೂರು ಸಾವಿರ ಎಕರೆ ಕಂದಾಯ ಭೂಮಿ ಗುಳುಂ ಆಗಿದೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿಯನ್ನ ಪ್ರಭಾವಿಗಳಿಗೆ ಪರಭಾರೆ ಮಾಡಿರುವುದು ಮೆಲ್ನೋಟಕ್ಕೆ ದೃಢಪಟ್ಟಿದೆ. ಉಮೇಶ್ ಈ ಹಿಂದೆ ಕಡೂರು ತಹಶಿಲ್ದಾರ್ ಆಗಿದ್ದ ವೇಳೆ ಕೋಟ್ಯಾಂತರ ರೂಪಾಯಿ ಮೌಲ್ಯದ ಕಂದಾಯ ಭೂಮಿ ಪರಭಾರೆ ಮಾಡಿದ್ದಾರೆ ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ