ಸೆಕ್ಯೂರಿಟಿ ಸರ್ಕಸ್: ಕೋಮು ಸೌಹಾರ್ದ ಮಂಡಳಿ ಸದಸ್ಯಗೆ ಗನ್ ಮ್ಯಾನ್ ಭದ್ರತೆ ಕೊಟ್ಟ ಜಿಲ್ಲಾಡಳಿತ, ಜನಕ್ಕೆ ಅಚ್ಚರಿ!

| Updated By: ಸಾಧು ಶ್ರೀನಾಥ್​

Updated on: Dec 11, 2022 | 10:49 AM

ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕವಾಯ್ತು ಅಂತ ಹಿಂದೂಗಳು ಖುಷಿ ಪಡುತ್ತಿದ್ದಂತೆ ಎರಡೇ ದಿನಕ್ಕೆ ಕೋಮು ಸೌಹಾರ್ದ ವೇದಿಕೆಯು ಮೌಲ್ವಿಗಳಿಗೆ ದತ್ತಪೀಠದಲ್ಲಿ ಫತೇಹಿ ಮಾಡೋದಕ್ಕೆ ಬಿಡ್ತಿಲ್ಲ ಅಂತಿದೆ. ಈ ನಡುವೆ ಆಡಳಿತ ಮಂಡಳಿಯ ಮುಸ್ಲಿಂ ಸದಸ್ಯಗೆ ಭಾರೀ ಪೊಲೀಸ್ ಭದ್ರತೆ ನೀಡಿರೋದು ಅಚ್ಚರಿ ಮೂಡಿಸಿದೆ.

ಸೆಕ್ಯೂರಿಟಿ ಸರ್ಕಸ್: ಕೋಮು ಸೌಹಾರ್ದ ಮಂಡಳಿ ಸದಸ್ಯಗೆ ಗನ್ ಮ್ಯಾನ್ ಭದ್ರತೆ ಕೊಟ್ಟ ಜಿಲ್ಲಾಡಳಿತ, ಜನಕ್ಕೆ ಅಚ್ಚರಿ!
ಕೋಮು ಸೌಹಾರ್ದ ಮಂಡಳಿ ಸದಸ್ಯಗೆ ಗನ್ ಮ್ಯಾನ್ ಭದ್ರತೆ ಕೊಟ್ಟ ಜಿಲ್ಲಾಡಳಿತ
Follow us on

ಚಿಕ್ಕಮಗಳೂರಿನ ವಿವಾದಿತ ದತ್ತಪೀಠದ (Dattapita dispute) ಆಡಳಿತಕ್ಕೆ ಸಮಿತಿ ರಚಿಸಿ ವಾರವೂ ಕಳೆದಿಲ್ಲ. ಗುಹೆಯಲ್ಲಾಗ್ಲೇ ಅರ್ಚಕರು-ಮೌಲ್ವಿಗಳ (Hindu -Muslim) ಮಧ್ಯೆ ವಾರ್ ಶುರುವಾಗಿದೆ. ಮೈಲಿಗೆ ಆಗುತ್ತೆ ಎಂದು ಅರ್ಚಕರು ಮೌಲ್ವಿಗಳಿಗೆ ಪೂಜೆ ಮಾಡೋದಕ್ಕೆ ಬಿಡ್ತಿಲ್ವಂತೆ. ಸರ್ಕಾರ ಅರ್ಚಕರನ್ನ ನೇಮಿಸಿದ್ದು 3 ದಿನಕ್ಕೆ ಅಷ್ಟೇ, ಕೂಡಲೇ ಅರ್ಚಕರ ನೇಮಕವನ್ನ ರದ್ದು ಮಾಡ್ಬೇಕು ಅಂತ ಕೋಮು ಸೌಹಾರ್ದ ವೇದಿಕೆ (Karnataka Komu Souharda Vedike-KKSV) ಆಗ್ರಹಿಸಿದ್ರೆ, ಆಡಳಿತ ಮಂಡಳಿಯ ಮುಸ್ಲಿಂ ಸದಸ್ಯ ಅಲ್ಲಿ ಏನೂ ಆಗಿಲ್ಲ, ಪ್ರಚಾರಕ್ಕೆ ಹೀಗೆಲ್ಲಾ ಮಾಡ್ತಿದ್ದಾರೆ ಅಂತಿದ್ದಾರೆ. ಈ ಮಧ್ಯೆ ಸರ್ಕಾರ (Chikkamagalur DC) ಇಬ್ಬರು ಅರ್ಚಕರು, ಆಡಳಿತ ಮಂಡಳಿಯ ಸದಸ್ಯಗೆ ಗನ್ ಮ್ಯಾನ್ ಭದ್ರತೆ ಕೊಟ್ಟಿದೆ. ಅಲ್ಲದೇ ಮನೆಗೆ ಪೊಲೀಸ್ ಸೆಕ್ಯೂರಿಟಿ ಕೂಡ ನೀಡಿರೋದು ಜನರಿಗೆ ಅಚ್ಚರಿ ಮೂಡಿಸಿದೆ.

ಭಾರೀ ಕುತೂಹಲ ಕೆರಳಿಸಿದ ದತ್ತಜಯಂತಿ ಶಾಂತಿಯುತವಾಗಿ ಮುಗಿದಿದೆ. ಚಿಕ್ಕಮಗಳೂರಿನ ವಿವಾದಿತ ಭಾವೈಕ್ಯತೆ ಕೇಂದ್ರವಾಗಿರುವ ಇನಾಂ ಬಾಬಬುಡನ್ ಸ್ವಾಮಿ ದರ್ಗಾವನ್ನ ಹಿಂದೂಗಳು ದತ್ತಪೀಠ ಅಂತಾ ನಂಬಿಕೊಂಡಿದ್ರೆ, ಮುಸ್ಲಿಂ ಧರ್ಮದವರು ಬಾಬಬುಡನ್ ಗಿರಿ ಅಂತಾ ಹೋರಾಟ ಮಾಡಿಕೊಂಡು ಬರ್ತಿದ್ದಾರೆ. ಈ ಮಧ್ಯೆ 47 ವರ್ಷಗಳ ಹೋರಾಟದ ಫಲವಾಗಿ ಚಿಕ್ಕಮಗಳೂರಿನ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕವಾಯ್ತು ಅಂತ ಹಿಂದೂ ಸಮುದಾಯ ಖುಷಿಯಾಗಿತ್ತು.

ಆದ್ರೆ, ಮುಸ್ಲಿಂ ಸಮುದಾಯ ಇದು ಕಾನೂನು ಉಲ್ಲಂಘನೆ, ಏಕಸ್ವಾಮ್ಯ ನಿರ್ಧಾರ ಅಂತೆಲ್ಲಾ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದೆ. ಈ ಮಧ್ಯೆ ಹೊಸದೊಂದು ವಿವಾದ ತಲೆದೋರಿದ್ದು, ದತ್ತಪೀಠದಲ್ಲಿ ಅರ್ಚಕರು ಮೈಲಿಗೆ ಆಗುತ್ತೆ ಎಂದು ಮೌಲ್ವಿಗಳಿಗೆ ಪೂಜೆ ಮಾಡೋದಕ್ಕೆ ಬಿಡುತ್ತಿಲ್ಲ ಎಂದು ಕೋಮು ಸೌಹಾರ್ದ ವೇದಿಕೆ ಆರೋಪಿಸಿದೆ. ಆಡಳಿತ ಮಂಡಳಿಯ ಎಂಟು ಜನ ಸದಸ್ಯರಲ್ಲಿ ನಾಮಕಾವಸ್ಥೆಗೆ ಕೇವಲ ಒಬ್ಬ ಮುಸ್ಲಿಂ ಸದಸ್ಯನಿದ್ದಾನೆ ಅಷ್ಟೆ.

ಆತ ಕೂಡ 25-30 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿದ್ದು, ಆತನನ್ನ ಸೇರಿಸಿಕೊಂಡಿದ್ದಾರೆ. ಕೋರ್ಟ್ ಹೇಳಿದ್ದು ದತ್ತಪೀಠದ ಹೊರಾಂಗಣದಲ್ಲಿ ಪೂಜೆ ಮಾಡ್ಬೇಕು ಎಂದು. ಆದ್ರೆ, ಗುಹೆಯೊಳಗೆ ಪೂಜೆ ಮಾಡಿದ್ದಾರೆ. ಜೊತೆಗೆ, ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣ ಮುಖ್ಯ ಆರೋಪಿ ಖಾಂಡ್ಯ ಪ್ರವೀಣ್ ಕೂಡ ಪೂಜೆ ಮಾಡಿದ್ದಾನೆ. ಡಿಸಿಗೆ ದೂರು ನೀಡಿದರೆ, ಈ ಸಮಿತಿಗೂ ನನಗೂ ಯಾವುದೇ ಸಂಬಂಧವೇ ಇಲ್ಲ ಅಂತಿದ್ದಾರೆ. ಯಾರದ್ದೋ ಕುಮ್ಮಕ್ಕಿನಿಂದ ಹೀಗೆ ಹೇಳ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಲ್ಲಿರುವ ಅರ್ಚಕರನ್ನ ವಾಪಸ್ ಕಳುಹಿಸಬೇಕು ಎಂದು ಸರ್ಕಾರಕ್ಕೆ ಕೋಮು ಸೌಹಾರ್ದಾ ವೇದಿಕೆ ಆಗ್ರಹಿಸಿದೆ.

ದತ್ತಪೀಠದ ಪೂಜೆ ವಿಚಾರದಲ್ಲಿ ಕೋರ್ಟ್ ಹೇಳಿದ್ದೇ ಒಂದು. ಜಿಲ್ಲಾಡಳಿತ ಮಾಡ್ತಿರೋದೆ ಒಂದು. ಕೋರ್ಟ್ ಹೇಳಿದ್ದು ಕೇವಲ ಮೂರು ದಿನಕ್ಕೆ ಮಾತ್ರ ಅರ್ಚಕರು ಪೂಜೆ ಮಾಡ್ಬೇಕು ಎಂದು. ಆದರೆ, ದತ್ತಜಯಂತಿ ಮುಗಿದರೂ ಜಿಲ್ಲಾಧಿಕಾರಿ ಅರ್ಚಕರನ್ನ ಮುಂದುವರೆಸುತ್ತಿದ್ದಾರೆ ಎಂದು ಮುಸ್ಲಿಂ ಮುಖಂಡರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಈ ಮಧ್ಯೆ ಜಿಲ್ಲಾಡಳಿತ ಮುಂಜಾಗೃತ ಕ್ರಮವಾಗಿ ಇಬ್ಬರು ಹಿಂದೂ ಅರ್ಚಕರಿಗೆ ಗನ್ ಮ್ಯಾನ್ ನೀಡಿದ್ದು, ಆಡಳಿತ ಮಂಡಳಿಯ ಓರ್ವ ಮುಸ್ಲಿಂ ಸದಸ್ಯಗೆ ಗನ್ ಮ್ಯಾನ್ ಜೊತೆ ಮನೆಗೇ ಒಂದು ಡಿ.ಎ.ಆರ್. ತುಕಡಿಯನ್ನು ನಿಯೋಜನೆ ಮಾಡಿದೆ.

ಆದರೆ, ಕೋಮು ಸೌಹಾರ್ದ ವೇದಿಕೆ ಆರೋಪವನ್ನ ಆಡಳಿತ ಮಂಡಳಿಯ ಮುಸ್ಲಿಂ ಸದಸ್ಯ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಗುಹೆಯೊಳಗೆ ಸಣ್ಣ ಜಾಗ. ಇಬ್ಬರಿಗೂ ಪ್ರತ್ಯೇಕ ಜಾಗವಿದೆ. ಅಲ್ಲಿ ಯಾವುದೇ ತೊಂದರೆ ಆಗಿಲ್ಲ. ಯಾರಿಗೂ ಪೂಜೆ ಮಾಡೋದಕ್ಕೆ ಯಾವ ಅಭ್ಯಂತರವಿಲ್ಲ. ಕೆಲವರು ಬೇಕೆಂದೇ ಪ್ರಚಾರಕ್ಕೋಸ್ಕರ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ದತ್ತಪೀಠದ ಒಳಗೂ-ಹೊರಗೂ ಎಲ್ಲಾ ಸರಿ ಇದೆ. ಶಾಶ್ವತ ಅರ್ಚಕರ ನೇಮಕವಾಗೋವರೆಗೂ ಇದೇ ಅರ್ಚಕರ ಪೂಜೆಗೆ ಸಮಿತಿ ತೀರ್ಮಾನಿಸಿದೆ, ಕೆಲವರು ಗೊಂದಲ ಸೃಷ್ಟಿಸ್ತಿದ್ದಾರೆ ಅಂತಿದ್ದಾರೆ.

ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕವಾಯ್ತು ಅಂತ ಹಿಂದೂಗಳು ಖುಷಿ ಪಡುತ್ತಿದ್ದಂತೆ ಎರಡೇ ದಿನಕ್ಕೆ ಕೋಮು ಸೌಹಾರ್ದ ವೇದಿಕೆಯು ಮೌಲ್ವಿಗಳಿಗೆ ದತ್ತಪೀಠದಲ್ಲಿ ಫತೇಹಿ ಮಾಡೋದಕ್ಕೆ ಬಿಡ್ತಿಲ್ಲ ಅಂತಿದೆ. ಒಳಗೆ ಏನಾಯ್ತು ಅಂತ ಯಾರಿಗೂ ಗೊತ್ತಿಲ್ಲ. ಆದ್ರೆ, ಪೂಜಾ-ಕೈಂಕರ್ಯದಲ್ಲಿ ಜಿಲ್ಲಾಧಿಕಾರಿಯೂ ಇದ್ದಿದ್ರಿಂದ ಎಲ್ಲವೂ ಕೋರ್ಟ್ ನಿರ್ದೇಶನದಂತೆಯೇ ನಡೆದಿದೆ ಅಂತಾರೆ ಜಿಲ್ಲಾಧಿಕಾರಿ. ಆದ್ರೆ, ಕೋಮುಸೌಹಾರ್ದ ವೇದಿಕೆ ಹಾಗೂ ಮುಸ್ಲಿಂ ಮುಖಂಡರು ಕಾನೂನು ಉಲ್ಲಂಘನೆ ಅಂತಿದ್ದಾರೆ. ಈ ನಡುವೆ ಇಬ್ಬರು ಅರ್ಚಕರು ಸೇರಿದಂತೆ ಆಡಳಿತ ಮಂಡಳಿಯ ಮುಸ್ಲಿಂ ಸದಸ್ಯಗೆ ಭಾರೀ ಪೊಲೀಸ್ ಭದ್ರತೆ ನೀಡಿರೋದು ಜನರಲ್ಲಿ ಅಚ್ಚರಿ ಮೂಡುವಂತಾಗಿದೆ. (ವರದಿ: ಪ್ರಶಾಂತ್, ಟಿವಿ 9, ಚಿಕ್ಕಮಗಳೂರು)

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:46 am, Sun, 11 December 22