ಚಿಕ್ಕಮಗಳೂರು: ಕಾಫಿ ಕ್ಯೂರಿಂಗ್ ಗೋಡೌನ್ ನಲ್ಲಿದೆ ವಿದ್ಯಾರ್ಥಿನಿಯರ ಡಾ. ಅಂಬೇಡ್ಕರ್ ವಸತಿ ಶಾಲೆ!

| Updated By: ಸಾಧು ಶ್ರೀನಾಥ್​

Updated on: Mar 06, 2024 | 1:21 PM

ಬಡ ವಿದ್ಯಾರ್ಥಿಗಳಿಗಾಗಿ ಸರ್ಕಾರ ವಸತಿ ಶಾಲೆ ನಡೆಸಿ, ಸುಸಜ್ಜಿತ ಸೌಲಭ್ಯವುಳ್ಳ ಕಟ್ಟಡದಲ್ಲಿ ವಸತಿ ಶಾಲೆ ನಡೆಸಲು ಲಕ್ಷಾಂತರ ರೂಪಾಯಿ ಬಾಡಿಗೆ ಹಣ ನೀಡುತ್ತಿದ್ದರೂ ಅಧಿಕಾರಿಗಳು ಮಾತ್ರ ಬೇಜವಾಬ್ದಾರಿ ತೋರಿಸ್ತಿದ್ದಾರೆ. ಇನ್ನು ಶಿಕ್ಷಕಿ ಮತ್ತು ಸಹಾಯಕ ವಾರ್ಡನ್ ನಡುವಿನ ವೈಯಕ್ತಿಕ ಗಲಾಟೆಗೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಶಿಕ್ಷಕಿ ವಿರುದ್ಧ ಕಾನೂನು ಕ್ರಮಕ್ಕೆ ಪೋಷಕರು ಆಗ್ರಹಿಸಿದ್ದಾರೆ.

ಅದು ಹೆಸರಿಗೆ ಮಾತ್ರ 130 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವ ಅಂಬೇಡ್ಕರ್ ವಸತಿ ಶಾಲೆ. ಅದ್ರೆ ವಸತಿ ಶಾಲೆ ಇರೋದು ಮಾತ್ರ ಕಾಫಿ ಕ್ಯೂರಿಂಗ್ ಗೋಡೋನ್ (Coffee Curing Godown) ನಲ್ಲಿ.. ಸಾಲದು ಅಂತಾ ಈ ವಸತಿ ಶಾಲೆಯಲ್ಲಿ ಸಹಾಯಕ ವಾರ್ಡನ್ ಅಂಡ್ ಹಿಂದಿ ಶಿಕ್ಷಕಿಯರಿಬ್ಬರ ನಡುವಿನ ಮನಸ್ತಾಪ, ಗಲಾಟೆಯಿಂದ ವಿದ್ಯಾರ್ಥಿಗಳಿಗೆ ಚಿತ್ರಹಿಂಸೆ. ಒಂದು ಕಡೆ ಮೂಲಭೂತ ಸೌಕರ್ಯವಿಲ್ಲದ ಗೋಡೋನಿನಲ್ಲಿ ಶಾಲೆ, ಮತ್ತೊಂದು ಕಡೆ ವಿದ್ಯಾರ್ಥಿಗಳಿಗೆ ಚಿತ್ರ ಹಿಂಸೆ.. ಅಯ್ಯೋ, ಏನಿದು ದುರವಸ್ಥೆ ಅಂತೀರಾ? ಹಾಗಿದ್ರೆ ಈ ಸ್ಟೋರಿ ನೋಡಿ. ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯಲ್ಲಿರುವ ಅಂಬೇಡ್ಕರ್ ವಸತಿ ಶಾಲೆಯ ಮುಂದೆ (Dr. BR Ambedkar Residential School for Girls, Chikkamagaluru) ವಿದ್ಯಾರ್ಥಿಗಳ ಪೋಷಕರು ಗರಂ ಆಗಿದ್ರು. ವಾರ್ಡನ್ ಸೇರಿದಂತೆ ಸಮಾಜ ಕಲ್ಯಾ ಇಲಾಖೆ ಡಿ.ಡಿ. ಗೆ ಕ್ಲಾಸ್ ತೆಗೆದುಕೊಂಡ್ರು, ಪೋಷಕರ ಮುಂದೆ ವಿದ್ಯಾರ್ಥಿಗಳು ಕಣ್ಣೀರು ಹಾಕಿ ನೋಡಿ ನಮ್ಮ ಕೈಗೆ ಹೇಗೆ ಮಾಡಿದ್ದಾರೆ ಅಂತ ಹೇಳಿಕೊಂಡ್ರು.

ನಮ್ಮ ಮೇಲೆ ಹಿಂದಿ ಶಿಕ್ಷಕಿ ಹಲ್ಲೆ ಮಾಡಿದ್ದಾರೆ ಎಂದು ಅಂಬೇಡ್ಕರ್ ಶಾಲೆಯ ಹತ್ತನೇ ತರಗತಿಯ 40 ಮಕ್ಕಳು ತಮ್ಮ ಪೋಷಕರು, ವಾರ್ಡನ್ ಮತ್ತು ಹಿರಿಯ ಅಧಿಕಾರಿಗಳ ಮುಂದೆ ಗಂಭೀರ ಆರೋಪ ಮಾಡಿದ್ರು. ಸ್ಥಳದಲ್ಲಿದ್ದ ಪೋಷಕರು ಆಕ್ರೋಶಗೊಂಡು ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಪಟ್ಟು ಹಿಡಿದ್ರು,

ಹೌದು ಅಂಬೇಡ್ಕರ್ ವಸತಿ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿರುವ ದೀಪಾ ನಿತ್ಯವೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುತ್ತಾರೆ ಎಂದು 40 ವಿದ್ಯಾರ್ಥಿನಿಯರು ಆರೋಪ ಮಾಡಿದ್ದಾರೆ. ಇದಕ್ಕೆ ಕಾರಣವಾಗಿರುವುದು ಹಿಂದಿ ಶಿಕ್ಷಕಿ ದೀಪಾ ಮತ್ತು ಸಹಾಯಕ ವಾರ್ಡನ್ ರೇಖಾ ನಡುವಿನ ಕಿತ್ತಾಟ.

ಕಳೆದ ಮೂರು ತಿಂಗಳಿನಿಂದ ದೀಪಾ ಮತ್ತು ರೇಖಾ ನಡುವಿನ ಗಲಾಟೆ ವಸತಿ ಶಾಲೆಯಲ್ಲಿ ಜೋರಾಗಿದೆ. ಸಾಮಾಜಿಕ ಜಾಲದಲ್ಲೂ ರೇಖಾ ವಿರುದ್ಧ ದೀಪಾ‌ ಪೋಸ್ಟ್ ಮಾಡಿದ್ದಾರೆ. ಇದರ ವಿರುದ್ಧ ರೇಖಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ರು. ಇದಕ್ಕೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಕಾರಣ ಕೇಳಿ ನೋಟಿಸ್ ನೀಡಿದ್ದರು.

ಇಬ್ಬರ ನಡುವಿನ ಗಲಾಟೆಯಿಂದಾಗಿ ವಸತಿ ಶಾಲೆಯ ಮಕ್ಕಳು ಪರದಾಡು ವಂತಾಗಿದೆ. ನಿರ್ದಿಷ್ಟವಾಗಿ, ರೇಖಾ ಜೊತೆ ಆತ್ಮೀಯವಾಗಿರುವ ವಿದ್ಯಾರ್ಥಿಗಳ ಮೇಲೆ ಹಿಂದಿ ಶಿಕ್ಷಕಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ದೀಪಾ ಅವರನ್ನ ಅಮಾನತು ಮಾಡಲಾಗಿದೆ. ಪೋಷಕರ ಒತ್ತಾಯದ ಮೇರೆಗೆ ವಿದ್ಯಾರ್ಥಿಗಳ ಮೇಲೆ ನಡೆದಿರುವ ಹಲ್ಲೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಗೌರಿಬಿದನೂರು -ವಾಹನ ಸಾಲ ವಸೂಲಾತಿಗೆ ಬಂದ ಹೆಚ್‍ಡಿಎಫ್‍ಸಿ ಏಜೆಂಟ್‍ಗೆ ಮಚ್ಚಿನಿಂದ ಹಲ್ಲೆಗೆ ಯತ್ನ!

ಒಂದು ಕಡೆ ಶಿಕ್ಷಕಿ ವರ್ಸಸ್ ಸಹಾಯಕ ವಾರ್ಡನ್ ನಡುವಿನ ಗಲಾಟೆಗೆ ವಿದ್ಯಾರ್ಥಿನಿಯರು ಕಂಗಾಲಾಗಿದ್ರೆ ಮತ್ತೊಂದು ಕಡೆ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಪರದಾಟ ನಡೆಸಿದ್ದಾರೆ. ಚಿಕ್ಕಮಗಳೂರಿನ ಬೈಪಾಸ್ ರಸ್ತೆಯಲ್ಲಿರುವ ಗೋಡೋನ್ ನಲ್ಲಿ ಬಾಡಿಗೆ ಪಡೆದು ವಸತಿ ಶಾಲೆ ನಡೆಸುತ್ತಿದ್ದು ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಾರೆ.

ಒಂದೇ ಕೊಠಡಿಯಲ್ಲಿ 130 ವಿದ್ಯಾರ್ಥಿಗಳು ವಾಸವಾಗಿದ್ದು ಮಲಗಲು ಸರಿಯಾದ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿನಿಯರು ಚಾಪೆಯ ಮೇಲೆ ನೆಲದಲ್ಲೇ ಮಲಗುತ್ತಿದ್ದಾರೆ. ಇನ್ನು ಪ್ರತಿ ತಿಂಗಳು 1.90 ಲಕ್ಷ ರೂ ಬಾಡಿಗೆ ಕಟ್ಟುವ ಸಮಾಜ ಕಲ್ಯಾಣ ಇಲಾಖೆಗೆ ವಸತಿ ಶಾಲೆ ನಡೆಸಲು ಗೋಡೋನೇ ಸಿಗಬೇಕಾ? ಬೇರೆ ಯಾವ ಸ್ಥಳವೂ ಇರಲಿಲ್ವಾ? ಎಂದು ಪೋಷಕರು ಆಕ್ರೋಶಗೊಂಡಿದ್ದಾರೆ. ಪೋಷಕರು ವಸತಿ ಶಾಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಂತೆ ಸ್ಥಳಕ್ಕೆ ಬಂದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಯೋಗೇಶ್ ಅವರು ವಸತಿ ಶಾಲೆಯ ಪರಿಶೀಲನೆ ನಡೆಸಿದರು. ಜೊತೆಗೆ, ಹಲ್ಲೆ ನಡೆಸಿದ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:48 pm, Wed, 6 March 24