ಚಿಕ್ಕಮಗಳೂರು, ಆಗಸ್ಟ್ 14 : 13 ವರ್ಷದ ಪ್ರೀತಿಗಾಗಿ ಪ್ರಿಯಕರನ ಜೊತೆ ಸೇರಿ (illicit relation) ಪತಿಯನ್ನು ಕೊಂದು ನಾಟಕವಾಡಿದ್ದ ಪತ್ನಿಯ ನಿಜ ಬಣ್ಣ ತನಿಖೆಯಲ್ಲಿ ಬಯಲಾಗಿದ್ದು, ಇಬ್ಬರು ಯಗಟಿ ಪೊಲೀಸರ ಅತಿಥಿಯಾಗಿದ್ದಾರೆ. ಇದೀಗ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕಡೂರು ತಾಲೂಕಿನ ಹನುಮನಹಳ್ಳಿ ಗ್ರಾಮದ ಪಾವನ ಮತ್ತು ಸಂಜು ಬಂಧಿತ ಇಬ್ಬರು ಆರೋಪಿಗಳು. ಪಾವನಳ ಪತಿ (husband) ನವೀನ್ ಕುಮಾರ್ (೨೮) ಆಗಸ್ಟ್ ೬ರಂದು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆಂದು ವರದಿಯಾಗಿತ್ತು. ಮೃತದೇಹ ಪತ್ತೆಯಾದ ಹಿನ್ನೆಲೆಯನ್ನು ಗಮನಿಸಿ ನವೀನ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ, ಯಗಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು (Chikkamagaluru).
ಬಳಿಕ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಅಕ್ರಮ ಸಂಬಂಧದ ಸುಳಿವು ಸಿಕ್ಕಿದ ಹಿನ್ನೆಲೆಯಲ್ಲಿ ಸಿಪಿಐ ಶಿವಕುಮಾರ್ ಮತ್ತು ಪಿಎಸೈ ರಂಗನಾಥ್ ನೇತೃತ್ವದ ಪೊಲೀಸರ ತಂಡ ತನಿಖೆಯನ್ನು ಚುರುಕುಗೊಳಿಸಿ ವಾರದೊಳಗೆ ಕೊಲೆಯ ಪ್ರಕರಣದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Also Read: ‘ಕರಾಳ ಶನಿವಾರ‘ ಎಂದು ಟ್ವೀಟ್ ಮಾಡಿ ಕಳವಳ ವ್ಯಕ್ತಪಡಿಸಿದ ರಸ್ತೆ ಸುರಕ್ಷತೆ ADGP ಅಲೋಕ್ ಕುಮಾರ್
ಕಳೆದ ೬ ವರ್ಷಗಳ ಹಿಂದೆ ನವೀನ್ ಕುಮಾರ್ ಜೊತೆ ಪಾವನ ಮದುವೆಯಾಗಿ ೪ ವರ್ಷದ ಹೆಣ್ಣು ಮಗುವಿದೆ. ಆದರೆ ಪತ್ನಿ ಪಾವನ ಮತ್ತು ಪ್ರಿಯಕರ ಸಂಜು ಕಳೆದ ೧೩ ವರ್ಷಗಳಿಂದ ಪ್ರೀತಿಸುತ್ತಿದ್ದ ಬಗ್ಗೆ ವಿಚಾರಣೆಯಲ್ಲಿ ಬೆಳಕಿಗೆ ಬಂದಿತ್ತು. ತಮ್ಮ ಪ್ರೀತಿಗೆ ಗಂಡ ನವೀನ್ ಅಡ್ಡಿಯಾಗಿದ್ದರಿಂದ ಪ್ರಿಯಕರನ ಜೊತೆಗೂಡಿ ನಿದ್ದೆ ಮಾತ್ರೆಯನ್ನು ನೀರಿನಲ್ಲಿ ಕರಗಿಸಿ ಚಪಾತಿ ಹಿಟ್ಟಿಗೆ ಬೆರೆಸಿ ಊಟದ ಬಳಿಕ ನಿದ್ದೆ ಮಂಪರಿಗೆ ಜಾರಿದ ಬಳಿಕ ಸಿನಿಮೀಯ ಶೈಲಿಯಲ್ಲಿ ಪತಿಯನ್ನು ಪ್ರಿಯಕರನ ಬೈಕಿನಲ್ಲಿ ತಂದು ಯಗಟಿ ಸಮೀಪದ ಕೆರೆಯ ದೊಡ್ಡಗುಂಡಿಗೆ ಎಸೆದು ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದಾರೆ.
ಕೆರೆಯ ಬಳಿ ಪತ್ತೆಯಾದ ಬೈಕ್, ಬ್ಯಾಟರಿ, ಚಪ್ಪಲಿಗಳು ಹಾಗೂ ಮೃತ ನವೀನ್ ಕುಮಾರ್ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು. ನಂತರ ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೊತ್ತರ ಪರೀಕ್ಷೆಗೆ ಒಳಪಡಿಸಿದ್ದು ವರದಿ ಬಂದ ನಂತರ ತನಿಖೆಯ ಕಾರ್ಯಾಚರಣೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ವಶಪಡಿಸಿಕೊಂಡ ಬಳಿಕ ಘಟನೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಶನಿವಾರದಂದು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಿದರು.
ಚಿಕ್ಕಮಗಳೂರು ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:46 am, Mon, 14 August 23