
ಚಿಕ್ಕಮಗಳೂರು, ಅಕ್ಟೋಬರ್ 29: ಚಿಕ್ಕಮಗಳೂರು (Chikmagalur) ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಮಂಗಳವಾರ ಅಮಾನವೀಯ ಘಟನೆ ನಡೆದಿದೆ. ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ, ಅವರನ್ನು ವಿವಸ್ತ್ರಗೊಳಿಸಿ ಮರಕ್ಕೆ ಕಟ್ಟಿಹಾಕಲಾಗಿದೆ. ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಡೆದ ಈ ಘಟನೆಯಲ್ಲಿ, ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕಿ (25 ವರ್ಷ ವಯಸ್ಸು) ಶಾಲೆ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಗ್ನಗೊಳಿಸಿರುವ ಆರೋಪ ಕೇಳಿಬಂದಿದೆ.
ಶಿಕ್ಷಕಿಯ ಕೂಗಾಟ ಕೇಳಿ ಸ್ಥಳಕ್ಕೆ ಧಾವಿಸಿದ ಮನೆಯವರು ಮತ್ತು ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಶಿಕ್ಷಕಿಯನ್ನು ಮೊದಲು ಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಘಟನೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಶಿಕ್ಷಕಿ ಮೇಲೆ ಹಲ್ಲೆ ಮಾಡಿ ವಿವಸ್ತ್ರಗೊಳಿಸಿ ಮರಕ್ಕೆ ಕಟ್ಟಿಹಾಕಿದ ಘಟನೆ ಸಂಬಂಧ ತನಿಖೆಗೆ ಕೊಪ್ಪ ಡಿವೈಎಸ್‌ಪಿ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಿರುವುದಾಗಿ ಚಿಕ್ಕಮಗಳೂರು ಎಸ್‌ಪಿ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ತನ್ನ ತಾಯಿಗೆ ಬೈದಿದ್ದಕ್ಕೆ ವ್ಯಕ್ತಿ ಹತ್ಯೆ: ವಿಲವಿಲ ಒದ್ದಾಡಿ ಪ್ರಾಣಬಿಟ್ಟ ಆಟೋ ಡ್ರೈವರ್
ಈ ಅಮಾನವೀಯ ಘಟನೆಯಿಂದ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜನರಲ್ಲಿ ಆತಂಕ ವ್ಯಕ್ತವಾಗಿದ್ದು, ಆಕ್ರೋಶವೂ ವ್ಯಕ್ತವಾಗಿದೆ. ಶಿಕ್ಷಕಿಗೆ ನ್ಯಾಯ ಸಿಗಬೇಕು ಎಂಬ ಕೂಗು ಜೋರಾಗಿದೆ. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ನಡೆಯುವ ರೀತಿಯಲ್ಲಿ ಕರ್ನಾಟಕದಲ್ಲಿ ಕೂಡ ಒಂಟಿ ಯುವತಿಯ ಮೇಲೆ ಸಂಜೆ ಹೊತ್ತಿನಲ್ಲಿ ಅಮಾನುಷ ಹಲ್ಲೆ ಜತೆಗೆ ಕೊಲೆ ಯತ್ನ ನಡೆದಿರುವುದು ಜನರನ್ನು ಬೆಚ್ಚಿಬೀಳಿಸಿದೆ.
ಶಿಕ್ಷಕಿಯ ಹತ್ತಿರದ ಸಂಬಂಧಿ ಯುವಕನೇ ಕೃತ್ಯ ಎಸಗಿದ್ದಾನೆ. ಪ್ರೀತಿ ನಿರಾಕರಣೆ ಹಿನ್ನೆಲೆ ಭವಿತ್ ಅಲಿಯಾಸ್ ರಮೇಶ್ (30) ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಶಿಕ್ಷಕಿ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದ ಭವಿತ್, ಪ್ರೀತಿ ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡು ಕೃತ್ಯ ಎಸಗಿದ್ದಾನೆ. ಸದ್ಯ ಬಾಳೂರು ಸಮೀಪದ ಚಂದುವಳ್ಳಿ ಗ್ರಾಮದಲ್ಲಿ ಭವಿತ್ನನ್ನು ಜಯಪುರ ಪೋಲೀಸರು ಬಂಧಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:54 am, Wed, 29 October 25