ತನ್ನ ತಾಯಿಗೆ ಬೈದಿದ್ದಕ್ಕೆ ವ್ಯಕ್ತಿ ಹತ್ಯೆ: ವಿಲವಿಲ ಒದ್ದಾಡಿ ಪ್ರಾಣಬಿಟ್ಟ ಆಟೋ ಡ್ರೈವರ್
ತನ್ನ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣಕ್ಕೆ ವ್ಯಕ್ತಿಯೋರ್ವ ಆಟೋ ಚಾಲಕನನ್ನು ಕೊಂದಿರುವ ಘಟನೆ ಬೆಂಗಳೂರಿನ ಉಲ್ಲಾಳ ಉಪನಗರದಲ್ಲಿ ನಡೆದಿದೆ. ರಾಡ್ನಿಂದ ಹೊಡೆದು ಹತ್ಯೆ ಮಾಡಲಾಗಿದ್ದು, ಘಟನೆ ಬಳಿಕ ಆರೋಪಿಯೇ ಪೊಲೀಸರಿಗೆ ಕರೆ ಮಾಡಿ ಈ ಬಗ್ಗೆ ವಿಷಯ ತಿಳಿಸಿದ್ದಾನೆ. ಜ್ಞಾನಭಾರತಿ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು, ಅಕ್ಟೋಬರ್ 28: ತಾಯಿಯನ್ನು ಅವಾಚ್ಯವಾಗಿ ನಿಂದಿಸಿದ ಎಂಬ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಕೊಲೆ (Murder) ಮಾಡಿರುವ ಘಟನೆ ಬೆಂಗಳೂರಿನ ಉಲ್ಲಾಳ ಉಪನಗರದ ರಾಮಚಂದ್ರಪ್ಪ ಲೇಔಟ್ನಲ್ಲಿ ನಡೆದಿದೆ. ಆಟೋ ಚಾಲಕ ಅವಿನಾಶ್ (36) ಮೃತ ವ್ಯಕ್ತಿಯಾಗಿದ್ದು, ಆರೋಪಿ ಕಾರ್ತಿಕ್ನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಟೀಲ್ ರಾಡ್ನಿಂದ ಕಾರ್ತಿಕ್ ಹಲ್ಲೆ ನಡೆಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಅವಿನಾಶ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆ ಏನು?
ಹೆತ್ತವರನ್ನು ಕಳೆದುಕೊಂಡಿದ್ದ ಅವಿನಾಶ್ ಕುಡಿತಕ್ಕೆ ದಾಸನಾಗಿದ್ದ. ಹೀಗಾಗಿ ಹೆಂಡತಿಯೂ ಆತನನ್ನು ತೊರೆದಿದ್ದಳು. ಹೀಗಾಗಿ ರಾಮಚಂದ್ರಪ್ಪ ಲೇಔಟ್ನಲ್ಲಿದ್ದ ತನ್ನ ದೊಡ್ಡಮ್ಮನಿಗೆ ಸೇರಿದ ಚಿಕ್ಕ ಮನೆಯಲ್ಲಿ ಈತ ವಾಸವಿದ್ದ. ನೆರೆ ಮನೆಯಲ್ಲಿದ್ದ ಕಾರ್ತಿಕ್ ತಾಯಿ ಅವಿನಾಶ್ನನ್ನು ತನ್ನ ಮನೆಯ ಮಗನಂತೆ ನೋಡಿಕೊಂಡಿದ್ದರು. ಆದರೆ, ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಕುಡಿದು ಮನೆಗೆ ಬಂದ ಅವಿನಾಶ್ ಕಾರ್ತಿಕ್ ತಾಯಿಗೆ ಅವಾಚ್ಯವಾಗಿ ನಿಂದಿಸಿದ್ದಾನೆ. ಇದರಿಂದ ಕೋಪಗೊಂಡ ಆಕೆ ಮಗನಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ. ಕೆಲಸಕ್ಕೆ ಹೋಗಿದ್ದ ಕಾರ್ತಿಕ್ ಮನೆಗೆ ಬಂದವನೇ ಅವಿನಾಶ್ ಜೊತೆ ಜಗಳ ತೆಗೆದಿದ್ದು, ತನ್ನ ಬೈಕ್‌ನ ಸ್ಟೀಲ್ ರಾಡ್ನಿಂದ ಅವಿನಾಶ್ ತಲೆ, ಬೆನ್ನಿಗೆ ಹಲ್ಲೆ ಮಾಡಿದ್ದಾನೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಅವಿನಾಶ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮಕ್ಕಳ ಕೊಂದು ತಾಯಿ ಆತ್ಮಹತ್ಯೆ ಕೇಸ್ಗೆ ಟ್ವಿಸ್ಟ್: ಅಕ್ರಮ ಸಂಬಂಧಕ್ಕೆ ಹೋಗಿದ್ದು 3 ಜೀವ
ಕೊಲೆ ಮಾಡಿ ಪೊಲೀಸರಿಗೆ ಕರೆ ಮಾಡಿದ್ದ ಅರೋಪಿ
ಘಟನೆ ಬಳಿಕ ರಾತ್ರಿ ಪೂರ್ತಿ ಯೋಚನೆ ಮಾಡಿರುವ ಆರೋಪಿ ಕಾರ್ತಿಕ್, ಬೆಳಗಿನ ಜಾವ ಸರೆಂಡರ್ ಆಗಲು ತೀರ್ಮಾನಿಸಿದ್ದಾನೆ. ಹೀಗಾಗಿ ಆತನೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಘಟನೆಯ ಮಾಹಿತಿ ಹಿನ್ನಲೆ ಸ್ಥಳಕ್ಕೆ ಭೆಟಿ ನೀಡಿರುವ ಜ್ಞಾನ ಭಾರತಿ ಪೊಲೀಸರು ಆರೋಪಿಯನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ, Tv9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




