ಚಿಕ್ಕಮಗಳೂರು, ಜನವರಿ 28: ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ (Micro finance) ಹಾವಳಿ ಮಿತಿಮೀರಿದೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಜನರು ಊರು ತೊರೆಯುತ್ತಿದ್ದಾರೆ. ಇನ್ನು ಕೆಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ, ಕಿರುಕುಳಕ್ಕೆ ನೀಡದಂತೆ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದು, ಈ ಬಗ್ಗೆ ಸೂಕ್ತ ಕ್ರಮಕ್ಕೆ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಚಿಕ್ಕಮಗಳೂರಿನಲ್ಲಿ ಮೈಕ್ರೋ ಫೈನಾನ್ಸ್ ಮ್ಯಾನೇಜರ್ ಎಂದು ಮಹಿಳೆಗೆ ವಂಚನೆ ಮಾಡಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಇನ್ನುಳಿದ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಹಾಗೂ ಕಂಪನಿ ಹೆಸರಿನಲ್ಲಿ ವಂಚನೆ ಮಾಡುವವರಿಗೆ ಇದೊಂದು ಎಚ್ಚರಿಕೆ ಗಂಟೆಯಾಗಿದೆ.
ವಂಚನೆ, ಬ್ಯಾಂಕ್ ಸಿಬ್ಬಂದಿಗಳ ಕಿರುಕುಳ ಬಗ್ಗೆ ಟಿವಿ9 ಸುದ್ದಿ ಮಾಡಿತ್ತು. ಸುದ್ದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಮೈಕ್ರೋ ಫೈನಾನ್ಸ್ ಮ್ಯಾನೇಜರ್ ಸಂತೋಷ್ ನನ್ನು ಪೊಲೀಸರು ಬಂಧಿಸಿದ್ದಾರೆ. ನೂರಾರು ಮಹಿಳೆಯರಿಗೆ ಲೋನ್ ಕೊಡಿಸುವುದಾಗಿ ಸಂತೋಷ್ ಆ್ಯಂಡ್ ಗ್ಯಾಂಗ್ ವಂಚನೆ ಮಾಡಿತ್ತು. ಹಾಗಾಗಿ ಆಲ್ದೂರು ಮೂಲದ ಸಂತೋಷ್, ಆತನ ಪತ್ನಿ ಆಶಾರಾಣಿ ಮತ್ತು ಜಿನ್ನು ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರಿಂದ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ಟಿವಿ9 ಬಿಗ್ ಇಂಪ್ಯಾಕ್ಟ್: ಸೀಜ್ ಮಾಡಿದ್ದ ಬಾಣಂತಿ ಮನೆ ಓಪನ್ ಮಾಡಿದ ಮೈಕ್ರೋ ಫೈನಾನ್ಸ್ ಸಿಬ್ಬಂದಿ
ಮಂಜುಳಾ ಎಂಬುವವರಿಗೆ ನಾಲ್ಕು ಲಕ್ಷ ರೂ. ವಂಚನೆ ಮಾಡಿದ್ದ ಮೈಕ್ರೋ ಫೈನಾನ್ಸ್ ಮ್ಯಾನೇಜರ್ ಸಂತೋಷ್ ಎಂಬಾತನನ್ನು ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಟಿವಿ9 ನಲ್ಲಿ ಸುದ್ದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಅರೆಸ್ಟ್ ಮಾಡಲಾಗಿದೆ.
ಹಳೆಯ ಲೋನ್ ಕ್ಲಿಯರ್ ಮಾಡಿದರೆ 10 ಲಕ್ಷ ರೂ. ಲೋನ್ ನೀಡುವುದಾಗಿ ಭರವಸೆ ನೀಡಿದ್ದ. ಸಂತೋಷ್ ಮಾತು ನಂಬಿ ಮಹಿಳೆ ಖಾಸಗಿ ಬ್ಯಾಂಕಿನಲ್ಲಿ ಲೋನ್ ಮಾಡಿ ನಾಲ್ಕು ಲಕ್ಷ ರೂ. ಹಣ ನೀಡಿದ್ದರು. ಆದರೆ ಸಾಲ ಕ್ಲಿಯರ್ ಮಾಡದೆ ಸಂತೋಷ್ ಮಹಿಳೆಗೆ ವಂಚಿಸಿದ್ದಾರೆ. ಇತ್ತ ಮೈಕ್ರೋ ಫೈನಾನ್ಸ್ ಮತ್ತು ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ಬಡ ಕುಟುಂಬ ಮನೆ ಬಿಟ್ಟಿತ್ತು.
ಇಂದು ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಮಂಜುಳಾ ಚಿಕಿತ್ಸೆಗೆ ಬಂದಿದ್ದರು. ಈ ವೇಳೆ ಆಸ್ಪತ್ರೆ ಬಳಿಯೇ ಬ್ಯಾಂಕ್ ಸಿಬ್ಬಂದಿ ಹುಡುಕಿಕೊಂಡು ಬಂದಿದ್ದಾರೆ. ಹಣದ ಕಂತು ಕಟ್ಟುವಂತೆ ಸಿಬ್ಬಂದಿ ಕಿರುಕುಳ ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲೂ ಮೈಕ್ರೋ ಫೈನಾನ್ಸ್ ಹಾವಳಿ: ಸಾಲ ಮರುಪಾವತಿಸುವಂತೆ ಮಹಿಳೆಗೆ ಕಿರುಕುಳ ಆರೋಪ
ಇನ್ನು ಚಿಕ್ಕಮಗಳೂರು ತಾಲೂಕಿನ ಹಾಂದಿ ಗ್ರಾಮ ಸೇರಿದಂತೆ ಪಕ್ಕದ ಭೀಮ್ ನಗರದ 15 ಕ್ಕೂ ಹೆಚ್ಚು ಮಹಿಳೆಯರು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮನೆ ತೊರೆಯುವಂತಾಗಿದೆ. ಮಗಳ ಮದುವೆ, ಮನೆ ನಿರ್ಮಾಣ, ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಮೈಕ್ರೋ ಫೈನಾನ್ಸ್ನಲ್ಲಿ ಸಾಲ ಮಾಡಿದ ಮಹಿಳೆಯರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿ ವಾರದ ಕಂತು ಕಟ್ಟುವಂತೆ ಫೈನಾನ್ಸ್ ಸಿಬ್ಬಂದಿಗಳು ನೀಡುವ ಕಿರುಕುಳಕ್ಕೆ ಬೇಸತ್ತು ಮನೆಗಳನ್ನ ತೊರೆದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.