ಮಂಗಳೂರಿನಲ್ಲೂ ಮೈಕ್ರೋ ಫೈನಾನ್ಸ್ ಹಾವಳಿ: ಸಾಲ ಮರುಪಾವತಿಸುವಂತೆ ಮಹಿಳೆಗೆ ಕಿರುಕುಳ ಆರೋಪ
ದಕ್ಷಿಣ ಕನ್ನಡದ ಮಹಿಳೆಯೊಬ್ಬರು ಐದು ವರ್ಷಗಳ ಹಿಂದೆ ಪಡೆದ 20 ಸಾವಿರ ರೂ. ಸಾಲಕ್ಕೆ ಇದೀಗ 50 ಸಾವಿರ ರೂ. ಬಡ್ಡಿ ಕಟ್ಟುವಂತೆ ಒತ್ತಡ ಹಾಕಲಾಗುತ್ತಿದೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದ ಅನೇಕ ಮಹಿಳೆಯರು ಸಾಲಮನ್ನಾಕ್ಕಾಗಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಲಾಗಿದೆ.
ಮಂಗಳೂರು, ಜನವರಿ 24: ಕರ್ನಾಟಕದೆಲ್ಲೆಡೆ ಈಗ ಮೈಕ್ರೊ ಫೈನಾನ್ಸ್ (micro finance) ಕಿರುಕುಳ ಹೆಚ್ಚುತ್ತಲೇ ಇದೆ. ಇದೇ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತ ಜನರು ಊರು ಬಿಟ್ಟು ಹೋಗುತ್ತಿದ್ದರೆ, ಮತ್ತೆ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಮೈಕ್ರೋ ಫೈನಾನ್ಸ್ ಹಾವಳಿ ಶುರುವಾಗಿದೆ. ಐದು ವರ್ಷದ ಹಿಂದೆ ಪಡೆದ ಸಾಲದ ಮರುಪಾವತಿಗೆ ಕಿರುಕುಳ ನೀಡುತ್ತಿರುವುದಾಗಿ ಆರೋಪ ಕೇಳಿಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕುಜಡ್ಕ ಮೂಲದ ಸಂತ್ರಸ್ತ ಮಹಿಳೆ ದೇವಕಿ ಎಂಬುವವರು ಮನೆಗೆ ಬಂದು ಕಿರುಕುಳ ನೀಡುತ್ತಿರುವ ಬಗ್ಗೆ ಆರೋಪ ಮಾಡಿದ್ದಾರೆ. ಐದು ವರ್ಷದ ಹಿಂದೆ ಐದು ಜನರ ತಂಡ ಮಾಡಿ ತಲಾ 20 ಸಾವಿರದಂತೆ ಒಟ್ಟು 1 ಲಕ್ಷ ರೂ ಸಾಲ ಪಡೆದಿದ್ದ ದೇವಕಿ, ವಾರಕ್ಕೆ 1,200 ರೂ. ರಂತೆ ಮೂರು ತಿಂಗಳು ಕಂತು ಕಟ್ಟಿರುವುದಾಗಿ ಹೇಳಿದ್ದರು. ಆ ಬಳಿಕ ಮಹಿಳೆಯರು ಸಾಲ ಕಟ್ಟುವುದನ್ನು ನಿಲ್ಲಿಸಿದ್ದರು. ಇದೀಗ ಮತ್ತೆ ಮನೆಗೆ ಬಂದು ಸಾಲ ಕಟ್ಟುವಂತೆ ಮೈಕ್ರೊ ಫೈನಾನ್ಸ್ ಸಿಬ್ಬಂದಿಯಿಂದ ಬೆದರಿಕೆ ಆರೋಪ ಮಾಡಲಾಗಿದೆ. ತೆಗೆದುಕೊಂಡ ಸಾಲಕ್ಕೆ 50 ಸಾವಿರ ರೂ. ಬಡ್ಡಿ ಕಟ್ಟುವಂತೆ ಫೋನ್ ಮಾಡಿ ಒತ್ತಡ ಹಾಕುತ್ತಿದ್ದಾರೆ. ಆಧಾರ್ ಕಾರ್ಡ್ ಬ್ಲಾಕ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಹೆಚ್ಚಿದ ಮೈಕ್ರೋ ಫೈನಾನ್ಸ್ ಕಿರುಕುಳ: ಜ 25ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ
ಈ ಬಗ್ಗೆ ಟಿವಿ 9ಗೆ ಸಂತ್ರಸ್ತ ಮಹಿಳೆ ದೇವಕಿ ಮಾತನಾಡಿದ್ದು, 20 ಸಾವಿರ ರೂ. ಸಾಲ ತೆಗೆದುಕೊಂಡು ಐದು ವರ್ಷ ಆಯ್ತು. ವಾರಕ್ಕೆ 1200 ರೂ. ರಂತೆ ಒಟ್ಟು ಮೂರು ತಿಂಗಳು ಹಣ ಕಟ್ಟಿದ್ದೇವೆ. ಇದರ ಬಡ್ಡಿ ಸೇರಿದಂತೆ ಯಾವ ವಿಷಯವನ್ನು ಹೇಳಿರಲಿಲ್ಲ. ಕಷ್ಟ ಇದ್ದ ಕಾರಣ ಸಾಲ ತೆಗೆದಿದ್ದೆವು. ಐದು ಜನ ಸದಸ್ಯರನ್ನು ಮಾಡಿ ಸಾಲ ತೆಗೆದುಕೊಳ್ಳಿ ಎಂದು ಮಾತ್ರ ಹೇಳಿದ್ದರು. ಈಗ ಮನೆಗೆ ಬಂದು ಕಂತು ಕಟ್ಟುವಂತೆ ಹೇಳ್ತಿದ್ದಾರೆ. ಫೋನ್ ಮಾಡಿ ಮಕ್ಕಳ ಹತ್ತಿರ ನಿಮ್ಮ ಅಮ್ಮ ಸಾಲ ತಗೊಂಡಿದ್ದಾರೆಂದು ಹೇಳುತ್ತಿದ್ದಾರೆ. ಟಾರ್ಚರ್ ಕೊಡುತ್ತಿದ್ದಾರೆ ಎಂದಿದ್ದಾರೆ.
ಈಗ 20 ಸಾವಿರಕ್ಕೆ 50 ಸಾವಿರ ರೂ ಕಟ್ಟುವಂತೆ ಹೇಳುತ್ತಿದ್ದಾರೆ. ಸಾಲ ಕೊಡುವಾಗ ಆಧಾರ್ ಕಾರ್ಡ್, ಫೋಟೋ ತಗೊಂಡಿದ್ದಾರೆ. ನಿಮ್ಮನ್ನು ಹುಡುಕಿಕೊಂಡು ಫೈನಾನ್ಸ್ನವರು ಬಂದಿದ್ದಾರೆಂದು ಪಕ್ಕದ ಮನೆಯವರು ಹೇಳುತ್ತಿದ್ದಾರೆ. ಫೈನಾನ್ಸ್ನವರಿಂದ ಮುಂದೆ ನಮಗೆ ಯಾವುದೇ ತೊಂದರೆ ಆಗಬಾರದು. ಸರ್ಕಾರ ನಮ್ಮನ್ನು ಸಾಲದಿಂದ ಋಣಮುಕ್ತರನ್ನಾಗಿಸಬೇಕು. ಮಕ್ಕಳಿಗೆ ನಮಗೆ ಟಾರ್ಚರ್ ಕೊಡಬಾರದು ಎಂದುಅಳಲುತೊಡಿಕೊಂಡಿದ್ದಾರೆ.
ಮುಂದಿನ ಬಜೆಟ್ನಲ್ಲಿ ಸಾಲ ಮುಕ್ತದ ಯೋಜನೆ ಘೋಷಿಸಬೇಕು: ಎಂ.ಬಿ ಸದಾಶಿವ
ಇನ್ನು ಟಿವಿ 9ಗೆ ಹೋರಾಟ ಸಮಿತಿಯ ಉಪಾಧ್ಯಕ್ಷ ಎಂ.ಬಿ ಸದಾಶಿವ ಹೇಳಿಕೆ ನೀಡಿದ್ದು, ಋಣಮುಕ್ತ ಕಾಯ್ದೆಯನ್ನು ಕರ್ನಾಟಕ ಸರ್ಕಾರ ಅನುಷ್ಠಾನ ಮಾಡಬೇಕು. ಬಡ್ಡಿ ದಂಧೆ ಮಾಡುವ ಸಂಸ್ಥೆಗಳನ್ನು ಮುಟ್ಟುಗೋಲು ಹಾಕಬೇಕು. ಸಿಎಂ ಸಭೆ ಕರೆಯುವುದರ ಜೊತೆ ಮುಂದಿನ ಬಜೆಟ್ನಲ್ಲಿ ಸಾಲ ಮುಕ್ತದ ಯೋಜನೆ ಘೋಷಿಸಬೇಕು. ಶೋಷಣೆಗೆ ಒಳಗಾದವರ ರಕ್ಷಣೆಯನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.