ಕರ್ನಾಟಕದಲ್ಲಿ ಹೆಚ್ಚಿದ ಮೈಕ್ರೋ ಫೈನಾನ್ಸ್ ಕಿರುಕುಳ: ಜ 25ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ
ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾವೇರಿ, ಮೈಸೂರು, ಉಡುಪಿ, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳಲ್ಲಿ ಸಾಲದ ಬಾಧೆಗೆ ಸಿಲುಕಿ ಅನೇಕರು ಊರು, ಮನೆ ಬಿಟ್ಟು ಹೋಗಿದ್ದಾರೆ. ಮತ್ತೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಆಯಾ ಜಿಲ್ಲಾಧಿಕಾರಿಗಳಿಗೆ ಲಕ್ಷಂತರ ದೂರು ನೀಡಲಾಗಿದೆ. ಸದ್ಯ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಚರ್ಚೆ ನಡೆಸಲು ಮುಂದಾಗಿದೆ.
ಬೆಂಗಳೂರು, ಜನವರಿ 23: ದಿನದಿಂದ ದಿನಕ್ಕೆ ಮೈಕ್ರೋ ಫೈನಾನ್ಸ್ (micro finance) ಕಿರುಕುಳ ಮಿತಿಮೀರುತ್ತಿದೆ. ಹಾವೇರಿ, ಮೈಸೂರು, ಉಡುಪಿ, ಚಿಕ್ಕಮಗಳೂರು ಹೀಗೆ ಕರ್ನಾಟಕದ ಸಾಕಷ್ಟು ಜಿಲ್ಲೆಗಳಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚುತ್ತಿದೆ. ಕಾಟ ತಾಳಲಾರದೆ ಜನರು ಮನೆ, ಊರು ಬಿಟ್ಟು ಹೋಗುತ್ತಿದ್ದರೆ, ಮತ್ತೆ ಕೆಲವರು ಆತ್ಮಹತ್ಯೆ ಮಾಡಿದ್ದಾರೆ. ಸರಣಿ ಆತ್ಮಹತ್ಯೆ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಜನವರಿ 25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಲಿದ್ದು, ಸಮಸ್ಯೆಗಳ ಬಗ್ಗೆ ಚರ್ಚಿಸಲಿದ್ದಾರೆ.
ಈ ಜಿಲ್ಲೆಗಳಲ್ಲಿ ಅತಿ ಹೆಚ್ಚು ದೂರು ಅರ್ಜಿ ಸಲ್ಲಿಕೆ
ಬಡ ಮತ್ತು ಮದ್ಯಮ ವರ್ಗದ ಜನರು ಈ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಕಷ್ಟ ಕಾಲಕ್ಕೆ ಅಂತ ಹಣ ಪಡೆದು ಇದೀಗ ಸಾಕಷ್ಟು ಜನರು ಕಣ್ಣೀರಿಡುವಂತಾಗಿದೆ. ಮೈಕ್ರೋ ಫೈನಾನ್ಸ್ ಕಿರುಕುಳ ತಾಳಲಾರದೆ ಸಾಕಷ್ಟು ಜನರು ಆಯಾ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಂಪನಿಗಳ ಟಾರ್ಚರ್: ಗ್ರಾಮ ತೊರೆದ ನೂರಾರು ಕುಟುಂಬಗಳು
ಬೆಳಗಾವಿ-2,71,466, ಬಾಗಲಕೋಟೆ- 89,037, ವಿಜಯಪುರ-75,000, ಮಂಡ್ಯ- 42,500, ಗದಗ-41,116, ಧಾರವಾಡ-36,489, ರಾಮನಗರ- 33,326, ಶಿವಮೊಗ್ಗ-25,525, ಹಾಸನ- 24.556 ಮತ್ತು ಚಿಕ್ಕಬಳ್ಳಾಪುರ-22,054 ಈ ಜಿಲ್ಲೆಗಳಲ್ಲಿ ಅತಿ ಹೆಚ್ಚು ದೂರು ಅರ್ಜಿ ಸಲ್ಲಿಸಲಾಗಿದೆ.
ಮನೆ ಸದಸ್ಯರಿಗೆ ಟಾರ್ಚರ್
ಹಾವೇರಿ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚಾಗಿದೆ. ರಾಣೇಬೆನ್ನೂರು ತಾಲೂಕಿನ ಸಿದ್ದೇಶ್ವರ ನಗರದಲ್ಲಿನ ಸೂರಜ್, ಹೋಟೆಲ್ ಉದ್ಯಮಕ್ಕಾಗಿ 2 ಲಕ್ಷ ರೂ. ಸಾಲ ಮಾಡಿದಿದ್ದರು. ಒಂದೂವರೆ ಲಕ್ಷ ರೂ. ಸಾಲ ಮರು ಪಾವತಿಸಿದ್ದರು. ಆದರೆ ಒಂದೇ ಒಂದು ಕಂತು ಮಾತ್ರ ಬಾಕಿ ಇತ್ತು. ಹೀಗಾಗಿ ಫೈನಾನ್ಸ್ ಸಿಬ್ಬಂದಿ ಹೊಟೇಲ್ನಲ್ಲಿ 3 ಗಂಟೆ ಕುಳಿತು ಮನೆ ಸದಸ್ಯರಿಗೆ ಟಾರ್ಚರ್ ನೀಡಿದ್ದಾರೆ. ನೀವು ಆತ್ಮಹತ್ಯೆ ಮಾಡ್ಕೊಳ್ಳಿ, ನಮಗೆ ಹಣ ಕಟ್ಟಿ ಅಂತಾ ದರ್ಪ ತೋರಿಸಿದ್ದಾರೆ. ಇಷ್ಟೇ ಅಲ್ಲ, ಮುಂದಿನ ತಿಂಗಳು ಕಟ್ಟುತ್ತೇವೆ. ನಮ್ಮ ಅಜ್ಜಿ ಆಸ್ಪತ್ರೆಯಲ್ಲಿದ್ದಾರೆ ಅಂದ್ರೂ ಕೇಳದೇ, ಸಿಬ್ಬಂದಿ ಕಿರುಕುಳ ನೀಡಿದ್ದಾರೆ.
ಚಿಕ್ಕಮಗಳೂರಲ್ಲಿ ಮನೆಗೆ ಬೀಗ ಹಾಕಿ ಊರು ಬಿಟ್ಟ ಕುಟುಂಬ!
ಇತ್ತ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿ ಬ್ಯಾಂಕ್ ಸಾಲಕ್ಕೆ ಹೆದರಿ ಕುಟುಂಬ ಊರೇ ತೊರೆದಿದೆ. ಮರ್ಯಾದೆಗೆ ಅಂಜಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಮನೆ ಬ್ಯಾಂಕ್ಗೆ ಸೇರಿದ್ದು ಎಂದು ಐಡಿಎಫ್ಸಿ ಬ್ಯಾಂಕ್ ಮನೆಗೋಡೆ ಮೇಲೆ ಬರಹ ಬರೆದಿದೆ. 7 ಲಕ್ಷ ರೂ. ಸಾಲವನ್ನ 8 ವರ್ಷಗಳಿಗೆ ಇಎಂಐ ಪಡೆದಿದ್ದರು. ಕಳೆದ 3 ವರ್ಷಗಳಿಂದ ಇಎಂಐ ಕಟ್ಟಿ ನಾಲ್ಕು ತಿಂಗಳಿಂದ ಬಾಕಿ ಉಳಿಸಿಕೊಂಡಿದ್ದರು.
ಬೆಳಗಾವಿಯಲ್ಲಿ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮಹಿಳೆ ಸೂಸೈಡ್!
ಬೆಳಗಾವಿ ತಾಲೂಕಿನ ಯಮನಾಪುರದ ಹೊರವಲಯದ ಶಿರೂರಿನಲ್ಲಿ, ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರೋಜಾ ಕಿರಬಿ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದು, 2 ಲಕ್ಷದ 30 ಸಾವಿರ ರೂಪಾಯಿ ಸಾಲ ಮಾಡಿದ್ರು ಎನ್ನಲಾಗಿದೆ. ಸಾಲ ಕೊಡಿಸಿದ್ದ ಹೊಳೆಪ್ಪ ದಡ್ಡ ಎಂಬಾತ ಕೂಡಾ, ಸರೋಜಾಗೆ ವಂಚಿಸಿದ್ದಾನೆ ಎನ್ನಲಾಗಿದೆ. ಬೆಳಗಾವಿಯ ಕಾಕತಿ ಪೊಲೀಸ್ ಠಾಣೆಯಲ್ಲಿ ಹೊಳೆಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ತವರಲ್ಲೂ ಮೈಕ್ರೋ ಫೈನಾನ್ಸ್ ಹಾವಳಿ: ಊರಿಗೆ ಊರೇ ಖಾಲಿ
ಇನ್ನು ಸಿದ್ದರಾಮಯ್ಯ ತವರೂರು ಮೈಸೂರು ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಕಾಟ ಮುಂದುವರೆದಿದೆ. ಕಾಟ ತಾಳಲಾರದೆ ಮನನೊಂದು ಜನರು ಮನೆ, ಊರು ಬಿಟ್ಟು ಹೋಗುತ್ತಿದ್ದಾರೆ. ಮನೆಯ ಮುಂದಿನ ಗೋಡೆಗಳ ಮೇಲೆ ಸಾಲದ ಬಗ್ಗೆ ಬರಹ ಹಾಕಲಾಗಿದೆ. ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ, ರಾಂಪುರ ಶಿರಮಳ್ಳಿ ಗ್ರಾಮಗಳಲ್ಲಿ ಹೆಚ್ಚು ಸಮಸ್ಯೆವಾಗಿದೆ. ಫೈನಾನ್ಸ್ನವರ ಹಾವಳಿ ತಪ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಡಾ.ಜಿ.ಪರಮೇಶ್ವರ್, ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಿಷ್ಟು
ಈ ಬಗ್ಗೆ ಉಡುಪಿಯಲ್ಲಿ ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಮೈಕ್ರೋ ಫೈನಾನ್ಸ್ನವರು ಗ್ರಾಹಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಗ್ರಾಹಕರ ಮೇಲೆ ದೈಹಿಕ ಹಲ್ಲೆ, ಆಸ್ತಿ ಮುಟ್ಟುಗೋಲು ಮಾಡ್ತಿದ್ದಾರೆ. ಈ ರೀತಿಯ ಕೃತ್ಯಗಳಿಗೆ ಕಾನೂನಿನಲ್ಲಿ ಅವಕಾಶ ಇಲ್ಲ. ಪೊಲೀಸರಿಗೆ ದೂರು ನೀಡಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕೂಡ ಮಾತನಾಡಿ, ಈ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:25 pm, Thu, 23 January 25