ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ತವರಲ್ಲೂ ಮೈಕ್ರೋ ಫೈನಾನ್ಸ್ ಹಾವಳಿ: ಊರಿಗೆ ಊರೇ ಖಾಲಿ
ಸಿಎಂ ಸಿದ್ದರಾಮಯ್ಯ ತವರೂರು ಮೈಸೂರು ಮತ್ತು ಡಿಸಿಎಂ ಡಿಕೆ ಶಿವಕುಮಾರ್ ತವರೂರು ರಾಮನಗರದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳು ಜೋರಾಗಿದೆ. ಪರಿಣಾಮ ಮೈಕ್ರೋ ಫೈನಾನ್ಸ್ ಕಾಟಕ್ಕೆ 50ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಮನೆಗಳನ್ನು ಖಾಲಿ ಮಾಡಿ ವಲಸೆ ಹೋಗಿವೆ. ಸದ್ಯ ಬೀದಿಗಳು ಬಿಕೋ ಎನ್ನುತ್ತಿದ್ದು ವೃದ್ಧರ ಸ್ಥಿತಿ ಕಳವಳಕಾರಿಯಾಗಿದೆ.
ಮೈಸೂರು, ಜನವರಿ 15: ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮೈಕ್ರೋ ಫೈನಾನ್ಸ್ (Micro Finance) ಕಾಟ ಜೋರಾಗಿದೆ. ಪರಿಣಾಮ ಜನರು ಊರಿಗೆ ಊರೇ ಖಾಲಿ ಮಾಡುತ್ತಿದ್ದಾರೆ. ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯಲ್ಲಿ ನೂರಾರು ಕುಟುಂಬಗಳು ಗ್ರಾಮ ತೊರೆದಿದ್ದವು. ಇದೀಗ ಸಿಎಂ ಸಿದ್ದರಾಮಯ್ಯ ತವರಿನಲ್ಲೂ ಮೈಕ್ರೋ ಫೈನಾನ್ಸ್ ಹಾವಳಿ ಶುರುವಾಗಿದೆ. ಹಾಗಾಗಿ ಮನನೊಂದು ಜನರು ಗ್ರಾಮ ತೊರೆಯಲು ಮುಂದಾಗುತ್ತಿದ್ದಾರೆ.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ, ರಾಂಪುರ, ಕುರಿಹುಂಡಿ, ಶಿರಮಳ್ಳಿ, ಕಗ್ಗಲೂರು, ಹೆಗ್ಗಡಹಳ್ಳಿ, ಮುದ್ದಹಳ್ಳಿ ಸೇರಿ ಹಲವೆಡೆ ಕಿರುಕುಳ ಆರೋಪ ಕೇಳಿಬಂದಿದೆ. ಕೊಟ್ಟ ಸಾಲ ನೀಡಿಲ್ಲ ಎಂದು ಮನೆಗಳ ಮುಂಭಾಗ ನಾಮಫಲಕ ಅಳವಡಿಕೆ ಮಾಡಲಾಗಿದ್ದು, ನಾಮಫಲಕ ಹಾಕಿ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಂಪನಿಗಳ ಟಾರ್ಚರ್: ಗ್ರಾಮ ತೊರೆದ ನೂರಾರು ಕುಟುಂಬಗಳು
ಬಲವಂತವಾಗಿ ಸಾಲ ಕೊಟ್ಟು ವಸೂಲಿ ನೆಪದಲ್ಲಿ ಕಿರುಕುಳ ಆರೋಪ ಮಾಡಲಾಗಿದ್ದು, ಕೆಲ ಮನೆಗಳಿಗೆ ಬೀಗ ಹಾಕಿ ಕುಟುಂಬವನ್ನ ಹೊರದಬ್ಬಿರುವ ಘಟನೆ ಸಹ ಸಂಭವಿಸಿದೆ ಎನ್ನಲಾಗಿದೆ. ಇಂತಹ ಬೆಳವಣಿಗೆಗೆ ಮೂಗುದಾರ ಹಾಕುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಡಿಕೆ ಶಿವಕುಮಾರ್ ತವರಿನಲ್ಲೂ ಮೈಕ್ರೋ ಫೈನಾನ್ಸ್ ಕಾಟ
ಇದೇ ರೀತಿಯಾಗಿ ಇತ್ತ ಡಿಸಿಎಂ ಡಿಕೆ ಶಿವಕುಮಾರ್ ತವರಿನಲ್ಲೂ ಮೈಕ್ರೋ ಫೈನಾನ್ಸ್ ಕಾಟಕ್ಕೆ ಬೇಸತ್ತು ರಾಮನಗರ ತಾಲೂಕಿನ ಕೂನಮುನದ್ದನಹಳ್ಳಿ ನಿವಾಸಿಗಳು ಗ್ರಾಮ ತೊರೆಯುತ್ತಿದ್ದಾರೆ. ಖಾಸಗಿ ಕಂಪನಿಗಳಿಂದ ಸಾಲ ಪಡೆದಿದ್ದ ರೈತರು, ಮಹಿಳೆಯರು ಇದೀಗ ಸಾಲ ವಾಪಸ್ ಕೊಡಲು ಆಗದೆ ಕರು, ಕುರಿ ಮಾರಿಕೊಂಡು ವಲಸೆ ಹೊರಟಿದ್ದಾರೆ.
ವೃದ್ಧ ತಂದೆ, ತಾಯಿಯನ್ನೂ ಬಿಟ್ಟು ಮಕ್ಕಳು ಗ್ರಾಮ ತೊರೆದಿದ್ದಾರೆ. ಮನೆ ಮಕ್ಕಳು ಹೋದಾಗಿನಿಂದ ನೆಮ್ಮದಿ ಇಲ್ಲ ಅಂತಿರುವ ವೃದ್ಧರು. ಕೂನಮುನದ್ದನಹಳ್ಳಿ ಗ್ರಾಮದಲ್ಲಿ 50ಕ್ಕೂ ಜನರು ಊರು ತೊರೆದಿದ್ದಾರೆ.
ಇತ್ತ ನಾಲ್ಕು ಜನರ ಗ್ರೂಪ್ ಮಾಡಿ ಹಣ ಕೊಟ್ಟಿದ್ದ ಫೈನಾನ್ಸ್ ಕಂಪನಿಗಳು, ಮನೆಗಳಿಗೆ ಪೇಪರ್ ಕಟಿಂಗ್ ಅಂಟಿಸಿದ್ದಾರೆ. ಯಾರೇ ಒಬ್ಬರು ಕಟ್ಟದೇ ಇದರೂ ಏಜೆಂಟರು ಹಣ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಹಣ ಕಟ್ಟೋದಕ್ಕೆ ಆಗದೆ ರಾತ್ರೋರಾತ್ರಿ ಗ್ರಾಮಸ್ಥರು ಮನೆ ಬಿಟ್ಟಿದ್ದಾರೆ. ಕೆಲವು ಗ್ರಾಮಸ್ಥರು ಊರು ಬಿಟ್ಟು ವರ್ಷಗಳೇ ಕಳೆದರೂ ವಾಪಸ್ ಆಗಿಲ್ಲ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ: ಗರ್ಭಿಣಿ ಅಂತ ನೋಡದೆ ಮನೆಯಿಂದ ಹೊರಹಾಕಿದ ಸಿಬ್ಬಂದಿ
ಹೇಗೋ ಕೂಲಿ ನಾಲಿ ಮಾಡಿಕೊಂಡು ಇದ್ದೇವು. ಸಾಲ ತಗೊಳ್ಳಿ ಅಂತ ಮನೆ ಬಾಗಿಲಿಗೆ ಬಂದರು. ಸಾಲ ಕೊಟ್ಟರು, ಕೆಲವರು ವಾಪಸ್ ಸಾಲ ಕಟ್ಟುತ್ತಿದ್ದಾರೆ. ಇನ್ನೂ ಕೆಲವು ಜನ ಬಿಟ್ಟು ಹೋಗಿದ್ದಾರೆ. ಸಾಲಕ್ಕೆ ಇಡೀ ಊರು ಖಾಲಿ ಆಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಊರನ್ನೆ ಬಿಟ್ಟ ನೂರಾರು ಕುಟಂಬಗಳು
ಫೈನಾನ್ಸ್ಗಳ ಕಿರುಕುಳ ತಾಳಲಾರದೆ ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಗ್ರಾಮಗಳಲ್ಲಿ ನೂರಾರು ಕುಟುಂಬಗಳು ಗ್ರಾಮ ತೊರೆದಿವೆ. ಸಾಲ ತೀರಿಸಲಾಗದೆ ಮನೆಗೆ ಬೀಗ ಹಾಕಿ ಊರು ಖಾಲಿ ಮಾಡಿ ತಲೆಮರೆಸಿಕೊಂಡಿವೆ. ಹಲವೆಡೆ ಮಕ್ಕಳನ್ನು ಶಾಲೆ ಬಿಡಿಸಿ ತಮ್ಮ ಜೊತೆ ಕರೆದೊಯ್ದಿದ್ದಾರೆ. ಸಾಲದ ಹೊಡೆತಕ್ಕೆ ಮಕ್ಕಳ ವಿದ್ಯಾಭ್ಯಾಸವೇ ಮೊಟಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.