ಮದುವೆಯಾದ 5 ತಿಂಗಳಿಗೇ ವಿಚ್ಛೇದನಕ್ಕೆ ಸಿದ್ಧತೆ: ಕೆರಳಿದ ಗಂಡನಿಂದ ಪತ್ನಿಯ ಕೊಚ್ಚಿ ಕೊಲೆ

ಮದುವೆಯಾದ 5 ತಿಂಗಳಿಗೆ ಗಂಡನ ಬಿಟ್ಟು ತವರುಮನೆ ಸೇರಿದ್ದ ಪತ್ನಿ ಗಂಡನಿಂದ ಸಂಪೂರ್ಣವಾಗಿ ದೂರಾಗುಲು ಸಿದ್ಧತೆ ಮಾಡಿಕೊಂಡಿದ್ದಳು. ವಿಚ್ಛೇದನ ನೀಡಲು ಮುಂದಾಗಿದ್ದಳು. ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ದೂರನ್ನೂ ನೀಡಿದ್ದಳು. ವಿಷಯ ತಿಳಿದ ಪತಿ ಆಕೆಯ ಮೇಲೆ ಆಕ್ರೋಶಗೊಂಡು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಘಟನೆ ನಡೆದಿದ್ದೆಲ್ಲಿ? ಆಮೇಲೇನಾಯ್ತು? ವಿವರಗಳು ಇಲ್ಲಿವೆ.

ಮದುವೆಯಾದ 5 ತಿಂಗಳಿಗೇ ವಿಚ್ಛೇದನಕ್ಕೆ ಸಿದ್ಧತೆ: ಕೆರಳಿದ ಗಂಡನಿಂದ ಪತ್ನಿಯ ಕೊಚ್ಚಿ ಕೊಲೆ
ನೇತ್ರಾವತಿ ಹಾಗೂ ನವೀನ್
Edited By:

Updated on: Oct 13, 2025 | 7:30 AM

ಚಿಕ್ಕಮಗಳೂರು, ಅಕ್ಟೋಬರ್ 13: ಕೌಟುಂಬಿಕ ಕಲಹದಿಂದ ಗಂಡನನ್ನು ಬಿಟ್ಟು ತವರು ಮನೆ ಸೇರಿದ್ದ ಪತ್ನಿಯನ್ನು ಆಕೆಯ ಪತಿಯೇ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಚಿಕ್ಕಮಗಳೂರು (Chikmagalur) ತಾಲೂಕಿನ ಆಲ್ದೂರು ಪಟ್ಟಣ ಸಮೀಪದ ಹವ್ವಳ್ಳಿ ಗ್ರಾಮದಲ್ಲಿ ನಡೆದಿದೆ . ಹವ್ವಳ್ಳಿ ಗ್ರಾಮದ 34 ವರ್ಷದ ನೇತ್ರಾವತಿ ಎಂಬವರು ಸಕಲೇಶಪುರ ನವೀನ್ ಜೊತೆ ಕಳೆದ 5 ತಿಂಗಳ ಹಿಂದೆ ವಿವಾಹವಾಗಿದ್ದರು. ಆದರೆ, ಮದುವೆಯಾದ ಕೆಲ‌‌ ದಿನಗಳಲ್ಲಿ ಗಂಡನಿಂದ ದೂರವಾದ ನೇತ್ರಾವತಿ, ತನ್ನ ಹವ್ವಳ್ಳಿ ಗ್ರಾಮದ ತವರು ಮನೆ ಸೇರಿದ್ದರು. ನವೀನ್, ನೇತ್ರಾವತಿಯ ಕುಟುಂಬದ ಹಿರಿಯರು ರಾಜಿ ಪಂಚಾಯಿತಿ ಮಾಡಿ ಇಬ್ಬರನ್ನು ಒಂದು ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಗಂಡ ನವೀನ್​ನಿಂದ‌ ಸಂಪೂರ್ಣ ‌ದೂರವಾಗುವ ಯೋಚನೆ ಮಾಡಿದ್ದ ನೇತ್ರಾವತಿ ವಿಚ್ಛೇದನ ನೀಡಲು ಸಿದ್ದತೆ ನಡೆಸಿದ್ದರು. ಮೂರು ದಿನಗಳ‌ ಹಿಂದೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪತಿ‌ ನವೀನ್ ವಿರುದ್ಧ ಕಿರುಕುಳದ ದೂರು ನೀಡಿದ್ದರು. ಪೊಲೀಸರು ದೂರು ಸ್ವೀಕರಿಸಿದ್ದರು. ವಿಚ್ಛೇದನ ಮತ್ತು ಪೊಲೀಸರಿಗೆ ದೂರು ನೀಡಿರುವ ವಿಷಯ ತಿಳಿದ ಪತಿ ನವೀನ್ ಪತ್ನಿ ನೇತ್ರಾವತಿಯ ಪ್ರಾಣವನ್ನೇ ತೆಗೆದಿದ್ದಾನೆ.

ಆಲ್ದೂರು ಠಾಣೆಯಲ್ಲಿ ತನ್ನ ವಿರುದ್ಧ ದೂರು ನೀಡಿರುವ ವಿಷಯ ತಿಳಿದ ನವೀನ್ ಸಕಲೇಶಪುರದಿಂದ ಆಲ್ದೂರು ಪಟ್ಟಣಕ್ಕೆ ಬಂದಿದ್ದ. ಆಲ್ದೂರಿನಿಂದ‌ ಎರಡು ಕಿಮೀ ದೂರದಲ್ಲಿರುವ ಹವ್ವಳ್ಳಿ ಗ್ರಾಮದ ನೇತ್ರಾವತಿ ಮನೆಗೆ ಹಿಂಭಾಗದಿಂದ ತೆರಳಿದ್ದ. ಮನೆಯ ಹಿಂಭಾಗದಲ್ಲಿ ಕೆಲಸ‌ಮಾಡುತ್ತಿದ್ದ ನೇತ್ರಾವತಿ ಮೇಲೆ ನವೀನ್ ‌ ಊರಿನಿಂದ ತನ್ನ ಜೊತೆಯಲ್ಲಿ ‌ತಂದಿದ್ದ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ. ಕುತ್ತಿಗೆ ಹಾಗೂ ಎದೆ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ನೇತ್ರಾವತಿ ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಲಾಡ್ಜ್​ ನಲ್ಲಿ ಯುವಕನೊಂದಿಗೆ 3 ಮಕ್ಕಳ ತಾಯಿ ಸಾವು: ಅಸಲಿ ಕಾರಣ ಬಿಚ್ಚಿಟ್ಟ 3ನೇ ವ್ಯಕ್ತಿ

ಸದ್ಯ ಆಲ್ದೂರು ಪೊಲೀಸ್ ಠಾಣೆಯಲ್ಲಿ ನವೀನ್ ವಿರುದ್ಧ ಪ್ರಕರಣ ‌ದಾಖಲಾಗಿದ್ದು, ಆತನ ಬಂಧನಕ್ಕೆ ಪೊಲೀಸರು ‌ ಬಲೆ ಬೀಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ