ಚಿಕ್ಕಮಗಳೂರು, ಜನವರಿ 11: ಜ.22ರಂದು ಅಯೋಧ್ಯೆ (Ayodhya) ಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲಿದೆ. ಈ ಹಿನ್ನೆಲೆ ಜಿಲ್ಲೆಯ ಶೃಂಗೇರಿಯಲ್ಲಿ ಜನವರಿ 16ರಿಂದ ಜನವರಿ 22ರವರೆಗೆ ವಿದ್ಯಾರಣ್ಯಪುರದ ರಾಮ ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಶೃಂಗೇರಿ ಶಾರದಾ ಮಠದ ಜಗದ್ಗುರುಗಳ ಉಪಸ್ಥಿತಿಯಲ್ಲಿ ರಾಮ ಜಪ, ರಾಮಾಯಣ ಪಾರಾಯಣ, ಅಖಂಡ ರಾಮ ಜಪ ಹಾಗೂ ರಾಮತಾರಕ ಹೋಮ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಜನವರಿ 22ರಂದೇ ವಿದ್ಯಾರಣ್ಯಪುರ ಶ್ರೀರಾಮ ದೇಗುಲ ಉದ್ಘಾಟನೆ ನಡೆಯಲಿದೆ.
ಅಯೋಧ್ಯೆ ರಾಮ ಪ್ರಾಣ ಪ್ರತಿಷ್ಟಾಪನೆಗೆ ಶೃಂಗೇರಿ ಮಠದ ಕಿರಿಯ ಜಗದ್ಗರುಗಳಾದ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮಿಗೆ ಆಹ್ವಾನ ನೀಡಲಾಗಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಟಾನೆ ನಡೆಯಲಿದೆ. ಈ ಹಿಂದೆ ತುಂಗಾ ಭದ್ರಾ ನದಿಗೆ ಕಾಶ್ಮೀರ ಪಂಡಿತರ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಜಲವನ್ನ ಅಯೋಧ್ಯೆಗೆ ಕಳಿಸಲಾಗಿತ್ತು.
ಅತ್ತ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಇತ್ತ ಕೊಪ್ಪಳ ಜಿಲ್ಲೆ ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ರಾಮ ತಾಂಡವ ಸ್ತೋತ್ರ ಪಠಣ ನಡೆಯುತ್ತಿದೆ. ಹನುಮ ಜನ್ಮ ಸ್ಥಳದಲ್ಲಿ ಸಾವಿರಕ್ಕೂ ಹೆಚ್ಚು ಮಹಿಳೆಯರಿಂದ ರಾಮ ನಾಮ ಜಪ ಮಾಡಿದ್ದಾರೆ. ಶಾಸಕ ಜನಾರ್ದನ ರೆಡ್ಡಿ, ಪತ್ನಿ ಅರುಣಾ ಲಕ್ಷ್ಮಿ ಭಾಗಿಯಾಗಿದ್ದರು.
ಮೈಸೂರಿನಲ್ಲಿ ಮುಸಲ್ಮಾನರು ಭಾವೈಕ್ಯತೆ ಮೆರೆದಿದ್ದಾರೆ. ದೇವರಾಜ ಮೊಹಲ್ಲಾದಲ್ಲಿರೋ ರಾಮಮಂದಿರ ಕಟ್ಟಲು ಫಾತಿಮಾ ಖುರೇಷಿ ಹಾಗೂ ಮೀರ್ ಬಷೀರ್ ಅಹಮದ್ ಖುರೇಷಿ ಸಹಾಯ ಮಾಡಿದ್ದರು. 1994ರಲ್ಲಿ ಮಂದಿರ ಕಟ್ಟಲು ಈ ದಂಪತಿ 6600 ರೂಪಾಯಿ ದೇಣಿಗೆ ನೀಡಿತ್ತು. ಇಂದು ಸಹ ಈ ಮಂದಿರಯಲ್ಲಿ ಹಿಂದೂ ಮುಸ್ಲಿಂ ಒಟ್ಟಿಗೆ ಭಾಗಿ ಪೂಜೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ಗದಗ: ಸೀಮಂತ ಕಾರ್ಯಕ್ರಮದಲ್ಲಿ ಮಥುರಾ ಮಂದಿರದ ಕನಸು ವ್ಯಕ್ತಪಡಿಸಿದ ಭಕ್ತರು
ಜನವರಿ 22 ರಂದು ನಡೆಯಲಿರುವ ಐತಿಹಾಸಿಕ ಕಾರ್ಯಕ್ರಮಕ್ಕೆ ಆಹ್ವಾನಿಸುವ ಕಾರ್ಯ ನಡೆಯುತ್ತಿದೆ. ಸಾಧು-ಸಂತರು, ರಾಜಕಾರಣಿಗಳು, ವಿವಿಧ ಕ್ಷೇತ್ರಗಳ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ. ಪ್ರಮುಖ ರಾಜಕೀಯ ಪಕ್ಷಗಳ ಮುಖ್ಯಸ್ಥರಿಗೂ ಕೂಡ ಆಹ್ವಾನ ನೀಡಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.