ಚಿಕ್ಕಮಗಳೂರು: ಬಿಹಾರದ ಕಿಶನ್ ಗಂಜ್ನಲ್ಲಿ ಕಾಫಿನಾಡಿನ ಯೋಧ ಅನುಮಾನಸ್ಪದವಾಗಿ ಸಾವನ್ನಪ್ಪಿರೋದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಶನಿವಾರ ರಾತ್ರಿ ಯೋಧ ಗಣೇಶ್(36) ಅವರ ಮೃತದೇಹ ಕಿಶನ್ ಗಂಜ್ ರೇಲ್ವೆ ನಿಲ್ದಾಣದ ಸಮೀಪ ಪತ್ತೆಯಾಗಿತ್ತು. ಚಿಕ್ಕಮಗಳೂರು ತಾಲೂಕಿನ ಮಸಿಗದ್ದೆ ಗ್ರಾಮದಿಂದ ಬೆಂಗಳೂರು ಮೂಲಕ ಗುವಾಹಟಿಗೆ ಯೋಧ ಗಣೇಶ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಆದ್ರೆ ಮಾರ್ಗಮಧ್ಯೆದಲ್ಲೇ ಅನುಮಾನಸ್ಪದವಾಗಿ ಯೋಧ ಗಣೇಶ್ ಸಾವನ್ನಪ್ಪಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಯೋಧ ಗಣೇಶ್ ತಂದೆಗೆ ಕರೆ ಮಾಡಿ ಸುದ್ದಿ ತಿಳಿಸಿದ ಅಂಬ್ಯುಲೆನ್ಸ್ ಚಾಲಕ!
ಶನಿವಾರ ರಾತ್ರಿ ಅಂಬ್ಯುಲೆನ್ಸ್ ಚಾಲಕ ಮಾಡಿದ ಅದೊಂದು ಕರೆ ಕಾಫಿನಾಡಿನ ಯೋಧನ ಕುಟುಂಬಕ್ಕೆ ಸಿಡಿಲಾಘಾತದಂತೆ ಅಪ್ಪಳಿಸಿತು. ಕಿಶನ್ ಗಂಜ್ ರೇಲ್ವೆ ನಿಲ್ದಾಣದಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಹೊಸದಾಗಿ ನಿರ್ಮಾಣಗೊಂಡ ಸೇತುವೆ ಬಳಿ ಯೋಧ ಗಣೇಶ್ ಪತ್ತೆಯಾಗಿತ್ತು. ಇದನ್ನ ನೋಡಿದ ಸ್ಥಳೀಯರು ಅಂಬ್ಯುಲೆನ್ಸ್ ಗೆ ಕರೆ ಮಾಡಿದ್ರು, ಮೃತದೇಹವನ್ನ ಅಂಬ್ಯುಲೆನ್ಸ್ಗೆ ಹಾಕಿಕೊಳ್ಳುವಾಗ ಗುರುತಿನ ಚೀಟಿಯೊಂದರಲ್ಲಿ ಮೊಬೈಲ್ ನಂಬರ್ ಪತ್ತೆ ಹಚ್ಚಿ ತಂದೆ ನಾಗಯ್ಯಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ರು.. ಹಿಂದಿಯಲ್ಲಿ ಮಾತನಾಡಿದಾಗ ಯೋಧ ಗಣೇಶ್ ತಂದೆ ನಾಗಯ್ಯ ಅವರಿಗೆ ಸರಿಯಾಗಿ ಅರ್ಥವಾಗಿಲ್ಲ. ಆ ಬಳಿಕ ಯೋಧ ಗಣೇಶ್ ಅವರ ಮಾವ ಮಾತನಾಡಿದಾಗ ಯೋಧ ಗಣೇಶ್ ಇನ್ನಿಲ್ಲ ಅನ್ನೋ ಸುದ್ದಿ ತಿಳಿದಿದೆ.
ಕಳೆದ ಗುರುವಾರವಷ್ಟೇ ಗ್ರಾಮದಿಂದ ಸೇನಾ ಕರ್ತವ್ಯಕ್ಕೆ ತೆರಳುತ್ತಿದ್ದ ಯೋಧ ಗಣೇಶ್!
ಏಪ್ರಿಲ್ 24ರಂದು ರಜೆ ನಿಮಿತ್ತ ಯೋಧ ಗಣೇಶ್, ಸೇನೆಯಿಂದ ಗ್ರಾಮಕ್ಕೆ ಬಂದಿದ್ರು. ಒಂದೂವರೆ ತಿಂಗಳು ಕುಟುಂಬದೊಂದಿಗೆ ಸಮಯ ಕಳೆದು ಜೂನ್ 12ರಂದು ಕರ್ತವ್ಯಕ್ಕೆ ಹಾಜರಾಗಬೇಕಿದ್ದರಿಂದ ಗುರುವಾರವಷ್ಟೇ (ಜೂನ್ 9) ಬೆಂಗಳೂರು ಮೂಲಕ ಅಸ್ಸಾಂನ ಗುವಾಹಟಿಗೆ ಹಿಂದಿರುಗುತ್ತಿದ್ರು. ಆದರೆ ದುರಂತ ಅಂದ್ರೆ ರೈಲಿನಲ್ಲಿ ಬೆಂಗಳೂರಿನಿಂದ ಬಿಹಾರ ಮೂಲಕ ಅಸ್ಸಾಂ ತಲುಪುವ ಮೊದಲೇ ಯೋಧ ಗಣೇಶ್ ಸಾವನ್ನಪ್ಪಿದ್ದಾರೆ. ಬಿಹಾರದ ಕಿಶನ್ ಗಂಜ್ ರೇಲ್ವೆ ನಿಲ್ದಾಣದ ಲಗೇಜ್ ರೂಂನಲ್ಲಿ ಗಣೇಶ್ ಅವರ ಬ್ಯಾಗ್ ಪತ್ತೆಯಾಗಿವೆ. ಈ ರೇಲ್ವೆ ನಿಲ್ದಾಣದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಗಣೇಶ್ ಅವರ ಮೃತದೇಹ ಸಿಕ್ಕಿದೆ. ಹೋಗುವ ವೇಳೆ ಯೋಧ ಗಣೇಶ್ ಅವರ ಬಳಿ 30 ಸಾವಿರಕ್ಕೂ ಅಧಿಕ ಹಣ ಇತ್ತು, ಈ ಹಣವನ್ನ ನೋಡಿಯೇ ಯಾರಾದ್ರೂ ಗಣೇಶ್ ಅವರ ಪ್ರಾಣಕ್ಕೆ ಕುತ್ತು ತಂದಿರಬಹುದಾ ಅನ್ನೋದು ಸದ್ಯದ ಯಕ್ಷಪ್ರಶ್ನೆಯಾಗಿದೆ.
14 ವರ್ಷದಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ!
ಯೋಧ ಗಣೇಶ್ ಕಳೆದ 14 ವರ್ಷದಿಂದ ಸೇನೆಯಲ್ಲಿರುವ 4 CORPS ಸಿಗ್ನಲ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ರು. ಸೇನೆ, ದೇಶದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಗಣೇಶ್ ಅವರಿಗೆ ಸೈನಿಕನಾಗಬೇಕು ಅನ್ನೋ ಹಂಬಲ ಚಿಕ್ಕದಾಗಿನಿಂದಲೂ ಇತ್ತು. ಹಾಗಾಗಿಯೇ ಪಿಯುಸಿ ಆಗುತ್ತಲೇ ಸೇನೆಗೆ ಸೇರಿಕೊಂಡು ತನ್ನ ಕನಸನ್ನ ನನಸು ಮಾಡಿಕೊಂಡಿದ್ರು. ಇನ್ನೂ ಹಲವು ವರ್ಷ ಸೇನೆಯಲ್ಲಿ ಮುಂದುವರಿಯಬೇಕು ಅನ್ನೋ ಮಹತ್ವಕಾಂಕ್ಷೆ ಕಾಫಿನಾಡಿನ ಯೋಧನದ್ದಾಗಿತ್ತು. ಆದ್ರೆ ವಿಧಿ ಮಾತ್ರ ಅದಕ್ಕೆ ಅವಕಾಶ ಕೊಡದೇ ಇರೋದು ನಿಜಕ್ಕೂ ದುರಂತವೇ ಸರಿ.
ಇಡೀ ಕುಟುಂಬದ ಆಧಾರಸ್ತಂಬವಾಗಿದ್ದ ಯೋಧ!
ನಾಗಯ್ಯ-ಗಂಗಮ್ಮ ದಂಪತಿಯ ಮಗನಾದ ಗಣೇಶ್ಗೆ 6 ವರ್ಷದ ಹಿಂದೆ ಶ್ವೇತಾ ಎಂಬುವರ ಜೊತೆ ವಿವಾಹವಾಗಿತ್ತು. ದಂಪತಿಗೆ 5 ವರ್ಷದ ಆದ್ಯಾ ಎಂಬ ಮಗಳಿದ್ದಾಳೆ. ಮೂರು ವರ್ಷದ ಹಿಂದೆ ನಾಗಯ್ಯ-ಗಂಗಮ್ಮ ಮತ್ತೊಬ್ಬ ಮಗ, ಗಣೇಶ್ ಅವರ ಸಹೋದರ ಸಾವನ್ನಪ್ಪಿದ್ದರು. ಸದ್ಯ ಇಡೀ ಕುಟುಂಬಕ್ಕೆ ಗಣೇಶ್ ಅವರೇ ಆಧಾರಸ್ತಂಭವಾಗಿದ್ರು. ಇದೀಗ ಈ ದುರಂತ ಕುಟುಂಬಕ್ಕಿದ್ದ ಆಧಾರಸ್ತಂಭವನ್ನೇ ಕಿತ್ತುಕೊಂಡಿದ್ದು, ಗಣೇಶ್ ಅವರ ಸಾವಿನ ಸುದ್ಧಿ ತಿಳಿದು ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.
ನಾಳೆ ಅಥವಾ ನಾಡಿದ್ದು ಸ್ವಗ್ರಾಮಕ್ಕೆ ಪಾರ್ಥಿಕ ಶರೀರದ ಆಗಮನ
ನಾಳೆ ರಾತ್ರಿ ಅಥವಾ ನಾಡಿದ್ದು ಬೆಳಗ್ಗೆ ಯೋಧನ ಪಾರ್ಥಿವ ಶರೀರ ಚಿಕ್ಕಮಗಳೂರು ತಾಲೂಕಿನ ಮಸಿಗದ್ದೆ ಗ್ರಾಮಕ್ಕೆ ತರಲು ಏರ್ಪಾಡು ಮಾಡಲಾಗಿದೆ ಅಂತಾ ಚಿಕ್ಕಮಗಳೂರು ಡಿಸಿ ಕೆ.ಎನ್ ರಮೇಶ್ ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ ಕರ್ತವ್ಯಕ್ಕೆ ತೆರಳುವ ಮಾರ್ಗಮಧ್ಯೆ ಯೋಧ ಅನುಮಾನಸ್ಪದವಾಗಿ ಸಾವನ್ನಪ್ಪಿರೋದು ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದ್ದು, ಈ ಬಗ್ಗೆ ಸೇನೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
-ಪ್ರಶಾಂತ್, ಚಿಕ್ಕಮಗಳೂರು