
ಚಿಕ್ಕಮಗಳೂರು, ಜುಲೈ 10: ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಗೂಗಲ್ನಲ್ಲಿ (Google) ಕಳ್ಳತನ (theft) ಮಾಡುವುದು ಹೇಗೆಂದು ಸರ್ಚ್ ಮಾಡಿ ಬಳಿಕ ಖದೀಮರು ಕಳ್ಳತನಕ್ಕೆ ಇಳಿದಿರುವಂತಹ ವಿಭಿನ್ನ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಒಂದೇ ದಿನ ಮೂರು ಮಹಿಳೆಯರ ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಮೂವರ ಖತರ್ನಾಕ್ ಗ್ಯಾಂಗ್ ಅನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಬೀರೂರು ಠಾಣೆಯ ಪೊಲೀಸರಿಂದ ಬೆಳಗಾವಿ ಜಿಲ್ಲೆಯ ಯವಕನಮರಡಿ ಗ್ರಾಮದ ಕಲ್ಲೇಶ್, ರಾಜು ಮತ್ತು ಬಸವರಾಜ್ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತ ಮೂವರಿಂದ 68 ಗ್ರಾಂ ಚಿನ್ನ ಮತ್ತು ಬೈಕ್ ವಶಕ್ಕೆ ಪಡೆಯಲಾಗಿದೆ.
ಕಡೂರಿಗೆ ಕೆಲಸಕ್ಕೆ ಬಂದಿದ್ದ ಈ ಮೂವರು, ಹಬ್ಬದ ಖರ್ಚಿಗೆ ಹಣವಿಲ್ಲ ಎಂದು ಸರಗಳ್ಳತನಕ್ಕೆ ನಿರ್ಧರಿಸಿದ್ದಾರೆ. ಹಾಗಾಗಿ ಕಳ್ಳತನ ಮಾಡುವುದು ಹೇಗೆ, ಬಳಿಕ ಗುರುತು ಸಿಗದಂತೆ ಎಸ್ಕೇಪ್ ಆಗುವುದು ಹೇಗೆ ಎಂದು ಗೂಗಲ್ನಲ್ಲಿ ಸರ್ಚ್ ಮಾಡಿ ಮಾಹಿತಿ ಪಡೆದು, ಅದರಂತೆ ಪ್ಲ್ಯಾನ್ ಕೂಡ ಮಾಡಿದ್ದಾರೆ.
ಇದನ್ನೂ ಓದಿ: ಸಿಎಂ, ಡಿಸಿಎಂ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ: 20ಕ್ಕೂ ಹೆಚ್ಚು ಜನರಿಗೆ ಯಾಮಾರಿಸಿದ್ದ ಮಹಿಳೆ ಅರೆಸ್ಟ್
ಮಹಿಳೆಯರನ್ನು ಟಾರ್ಗೆಟ್ ಮಾಡಿದ ಗ್ಯಾಂಗ್, ಕಣ್ಣಿಗೆ ಕಾರದಪುಡಿ ಎರಚಿ ಮಾಂಗಲ್ಯ ಸರ ಕಸಿದು ಪಲ್ಸರ್ ಬೈಕ್ನಲ್ಲಿ ಪರಾರಿ ಆಗಿದ್ದಾರೆ. ಕಡೂರು, ಬೀರೂರು ಮತ್ತು ಸಿಂಗಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ, ಒಂದು ಗಂಟೆಯಲ್ಲಿ ಮೂರು ಕಡೆ, ಮೂರು ಮಹಿಳೆಯರ ಮಾಂಗಲ್ಯ ಸರ ಕಳ್ಳತನ ಮಾಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಅಮಾನವೀಯ ಘಟನೆ: ದೆವ್ವ ಬಿಡಿಸ್ತೀನಂತ ಮಹಿಳೆಯ ಪ್ರಾಣವನ್ನೇ ತೆಗೆದಳು..!
ಇನ್ನು ಈ ಖತರ್ನಾಕ್ ಗ್ಯಾಂಗ್ ಸರಗಳ್ಳತನ ಮಾಡಲು ಮೂರು ಬಾರಿ ಬಟ್ಟೆ ಬದಲಾಯಿಸಿದ್ದಾರೆ. ಬಳಿಕ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ಬಾವಿಗೆ ತಳ್ಳಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಕಳ್ಳರ ಕೈಚಳಕ ಮತ್ತು ವೈನ್ ಶಾಪ್ ನಲ್ಲಿ ಬಟ್ಟೆ ಬದಲಾಯಿಸುವ ದೃಶ್ಯ ಎಲ್ಲವು ಸೆರೆಯಾಗಿದೆ. ಬೆಳಗಾವಿ ಜಿಲ್ಲೆಯ ಯವಕನಮರಡಿ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ ಮೂವರನ್ನ ಇದೀಗ ಬೀರೂರು ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:56 pm, Thu, 10 July 25