ಮರದಲ್ಲಿ ಹೊಡೆದಿದ್ದ ಹರಕೆಯ ತಗಡಿನಿಂದ ಗೃಹಿಣಿ ನಾಪತ್ತೆ ಹಿಂದಿನ ಕೊಲೆ ರಹಸ್ಯ ಬಯಲು

ಗೃಹಿಣಿಯೊಬ್ಬರು ಒಂದುವರೆ ತಿಂಗಳ ಹಿಂದೆ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಳು. ನಾಪತ್ತೆಯಾಗಿದ್ದ ಪತ್ನಿಗಾಗಿ ಗಂಡ ಹುಡುಕಬಾರದ ಕಡೆಯಲ್ಲ ಹುಡುಕಾಟ ನಡೆಸಿದ್ದ. ಆದರೆ ದೇವರ ಮರದಲ್ಲಿ ಹೊಡೆದಿದ್ದ ಹರಕೆಯ ತಗಡಿನಿಂದ ನಾಪತ್ತೆ ಹಿಂದಿನ ಮರ್ಡರ್ ಹಿಸ್ಟರಿ ತೆರೆದುಕೊಂಡಿದ್ದು, ಇಡೀ ಚಿಕ್ಕಮಗಳೂರು ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸಿದೆ. ಈ ಮರ್ಡರ್ ಕಹಾನಿಯಲ್ಲಿ ಏನೆಲ್ಲಾ ಆಯ್ತು ಎನ್ನುವ ವಿವರ ಇಲ್ಲಿದೆ.

ಮರದಲ್ಲಿ ಹೊಡೆದಿದ್ದ ಹರಕೆಯ ತಗಡಿನಿಂದ ಗೃಹಿಣಿ ನಾಪತ್ತೆ ಹಿಂದಿನ ಕೊಲೆ ರಹಸ್ಯ ಬಯಲು
Bharathi
Updated By: ರಮೇಶ್ ಬಿ. ಜವಳಗೇರಾ

Updated on: Oct 14, 2025 | 8:09 PM

ಚಿಕ್ಕಮಗಳೂರು, (ಅಕ್ಟೋಬರ್ 14): ತವರು ಮನೆಯಿಂದ ಎರಡು ಲಕ್ಷ ಹಣ ತರಲಿಲ್ಲ ಎಂಬ ಕಾರಣಕ್ಕೆ ದೊಣ್ಣೆಯಿಂದ ಹೊಡೆದು ಕೊಂಡು ಕೊಳವೆ ಬಾವಿಗೆ ಶವ ಹಾಕಿ ನಾಪತ್ತೆಯಾಗಿದ್ದಾಳೆ ಎಂದು ನಾಟಕವಾಡಿದ ಮರ್ಡರ್ ಕಹಾನಿ ತಡವಾಗಿ ಬೆಳಕಿಗೆ ಬಂದಿದೆ. ನನ್ನ ಹೆಂಡತಿ ಭಾರತಿಯನ್ನ ಹತ್ಯೆ ಮಾಡಿದ್ದೇನೆ ಅವಳು ಪ್ರೇತವಾಗಿ ನನ್ನನ್ನ ಕಾಡಬಾರದು. ತನ್ನ ಹಾಗೂ ತನ್ನ ಕುಟುಂಬ ಸೇರಿದಂತೆ ಯಾರಿಗೂ ತೊಂದರೆ ಆಗಬಾರದು ಅಂತ ದೇವಸ್ಥಾನದ ಮರಕ್ಕೆ ಹೊಡೆದಿದ್ದ ಹರಕೆ ತಗಡಿನಿಂದ ಅಸಲಿ ಸತ್ಯ ಹೊರಗೆ ಬಂದಿದೆ. ಹೌದು ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ನಡೆದಿರುವ ಈ ಘಟನೆ ಇಡೀ ಚಿಕ್ಕಮಗಳೂರನ್ನ ಬೆಚ್ಚಿ ಬೀಳುವಂತೆ ಮಾಡಿದೆ.

ಆಲಘಟ್ಟ ಗ್ರಾಮದ ಭಾರತಿ (28) ಮೃತ ದುರ್ದೈವಿ. ಒಂದೂವರೆ ತಿಂಗಳ ಹಿಂದೆ ತವರಿಗೆ ಹೊರಟಿದ್ದ ಹೆಂಡತಿ ಜೊತೆ ಗಂಡ ವಿಜಯ್ ಗಲಾಟೆ ಮಾಡಿದ್ದ. ಈ ಗಲಾಟೆಯಲ್ಲಿ ಹೆಂಡತಿಗೆ ಹೊಡೆದಿದ್ದ. ಗಂಡ ಹೊಡೆಯುತ್ತಿದ್ದಂತೆ ಪತ್ನಿ ಭಾರತಿ ಜೀವ ಬಿಟ್ಟಿದ್ದಳು. ಪೊಲೀಸರು ಬಂಧಿಸುತ್ತಾರೆ ಎಂದು ಭಯದಿಂದ ಪತ್ನಿಯನ್ನ ತಮ್ಮ ತೋಟದಲ್ಲಿನ ಕೊಳವೆ ಬಾವಿಯಲ್ಲಿ ಕಿರಾತಕ ಗಂಡ ಹೂತು ಹಾಕಿದ್ದ. ಬಳಿಕ ಕೊಳವೆ ಬಾವಿಯಲ್ಲಿ ಹೂತು ಹಾಕಿದ ಮೇಲೆ ಕಡೂರು ಠಾಣೆಯಲ್ಲಿ ಪತ್ನಿ ನಾಪತ್ತೆ ಆಗಿದ್ದಾಳೆ ಎಂದು ಆರೋಪಿ ವಿಜಯ್ ದೂರು ನೀಡಿದ್ದ. ಈ ಸಂಬಂಧ ತನಿಖೆ ಕೈಗೊಂಡಿದ್ದ ಪೊಲೀಸರು ಕೊನೆಗೂ ಸತ್ಯವನ್ನು ಕಂಡು ಹಿಡಿದಿದ್ದಾರೆ. ಒಂದೂವರೆ ತಿಂಗಳ ನಡೆದ ಪೊಲೀಸರ ತನಿಖೆಯಲ್ಲಿ ಗಂಡ ವಿಜಯ್​ನೇ ಹಂತಕ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ಲಾಡ್ಜ್​ ನಲ್ಲಿ ಯುವಕನೊಂದಿಗೆ 3 ಮಕ್ಕಳ ತಾಯಿ ಸಾವು: ಅಸಲಿ ಕಾರಣ ಬಿಚ್ಚಿಟ್ಟ 3ನೇ ವ್ಯಕ್ತಿ

ಕೊಂದು ಮಿಸ್ಸಿಂಗ್ ಕೇಸ್ ದಾಖಲಿಸಿದ್ದ ಗಂಡ

ಕಳೆದ ತಿಂಗಳು 4 ರಂದು ಕಡೂರು ಪೊಲೀಸ್ ಠಾಣೆಯಲ್ಲಿ ತನ್ನ ಹೆಂಡತಿ ಮಿಸ್ ಆಗಿದ್ದಾಳೆ. ಶಿವಮೊಗ್ಗದ ಆಸ್ಪತ್ರೆಯಲ್ಲಿರೋ ಆಕೆಯ ಅಜ್ಜಿಯನ್ನ ನೋಡಿಕೊಂಡು ಬರುವುದಕ್ಕೆ ಅಂತ ಯರೇಹಳ್ಳಿ ಬಸ್ ನೀಲ್ದಾಣದಲ್ಲಿ ಜೀಪ್ ಹತ್ತಿಸಿ ಬಂದಿದ್ದೆ. ಆದ್ರೆ ಆಕೆ ಆಸ್ಪತ್ರೆಗೂ ಹೋಗದೆ, ಮನೆಗೂ ಬಾರದೆ ನಾಪತ್ತೆಯಾಗಿದ್ದಾಳೆ. ಒಂದೂವರೆ ವರ್ಷದ ಮಗುವನ್ನ ಬಿಟ್ಟು ಹೋಗಿದ್ದಾಳೆ. ಮೊದಲೇ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ನನ್ನ ಹೆಂಡತಿ ಭಾರತಿಯನ್ನ ಹುಡುಕಿ ಕೊಡಿ ಸರ್ ಎಂದು
ದೂರು ನೀಡಿದ್ದ.

ಹರಕೆಯ ತಗಡಿನಲ್ಲಿ ಸಿಕ್ತು ಕೊನೆ ರಹಸ್ಯ

ಹಂತಕ ವಿಜಯ್ ಕೊಟ್ಟ ಮಿಸ್ಸಿಂಗ್ ಕಂಪ್ಲೇಂಟ್ ಹಿಂದೆ ಬಿದ್ದ ಕಡೂರು ಪೊಲೀಸರಿಗೆ ಭಾರತಿಯನ್ನ ಹುಡುಕಿ ಹುಡುಕಿ ಸಾಕಾಗಿತ್ತು. ಮತ್ತೊಂದೆಡೆ ಮೃತ ಭಾರತಿ ಅಣ್ಣ ಮಾರುತಿಗೆ ಮಾತ್ರ ತನ್ನ ತಂಗಿ ಕಳೆದು ಹೋಗಿಲ್ಲ ಎನ್ನುವ ಅನುಮಾನ ಕಾಡುತ್ತಲೇ ಇತ್ತು. ಅಷ್ಟೇ ಅಲ್ಲದೆ ಭಾರತಿ ಹುಡುಕಾಟಕ್ಕಾಗಿ ಪೂಜೆ ಮಾಡುತ್ತುದ್ದೇವೆ ಎಂದು ಅವಳ ಅಣ್ಣ ಮಾರುತಿಯನ್ನೂ ವಿಜಯ್ ಕರೆದುಕೊಂಡು ಹೋಗಿದ್ದು, ಆ ವೇಳೆ ಚಟ್ನಪಾಳ್ಯದ ಚೌಡೇಶ್ವರಿ ದೇವಾಲಯದ ಮರಕ್ಕೆ ಹೊಡೆದಿದ್ದ ಹರಕೆಯ ತಗಡನ್ನ ಮಾರುತಿ ಚೆಕ್‌ ಮಾಡಿದ್ದಾನೆ. ಆಗಲೇ ತನ್ನ ತಂಗಿ ಭಾರತಿ ನಾಪತ್ತೆಯಾಗಿಲ್ಲ‌ ಕೊಲೆಯಾಗಿದ್ದಾಳೆ ಎನ್ನುವುದು ಮಾರುತಿಗೆ ಕನ್ಫರ್ಮ್ ಆಗಿದೆ.

ಕೂಡಲೇ ಮಾರುತಿ ಕಡೂರು ಇನ್ಸ್ಪೆಕ್ಟರ್ ರಫೀಕ್‌ಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಮೃತ ಭಾರತಿಯ ಗಂಡ ವಿಜಯ್, ಮಾವ ಗೋವಿಂದಪ್ಪ ಹಾಗೂ ಅತ್ತೆ ತಾಯಮ್ಮರನ್ನ ಎತ್ತಾಕೊಂಡು ಬಂದು ಪೊಲೀಸ್ ಸ್ಟೈಲ್‌ನಲ್ಲಿ ವಿಚಾರಣೆ ನಡೆಸುತ್ತಿದ್ದಂತೆ ಸತ್ಯ ಬಾಯಿಬಿಟ್ಟಿದ್ದಾರೆ.

ಪೂಜೆ ಪುನಸ್ಕಾರ ಅಂತ ಹೋಗಿ ಸಿಕ್ಕಿಬಿದ್ರು

ವಿಜಯ್ ತನ್ನ ಕಾರಿನ ಲೋನ್ ಕಟ್ಟಲು ಹೆಂಡತಿಯನ್ನ ತವರು‌ಮನೆಯಿಂದ ಎರಡು ಲಕ್ಷ ಹಣ ತರುವಂತೆ ಪೀಡಿಸಿದ್ದಾನೆ. ಆಗ ಅಲ್ಲಿ ಏನು ನಡೆಯಿತೋ ಗೊತ್ತಿಲ್ಲ. ಆ ವೇಳೆ ದೊಣ್ಣೆಯಿಂದ ಹೊಡೆದಿದ್ದಾರೆ, ತಲೆಗೆ ಹೊಡೆತ ಬೀಳುತ್ತಿದ್ದಂತೆ ಭಾರತಿ ಮೃತಪಟ್ಟಿದ್ದಾಳೆ. ಬಳಿಕ ತನ್ನ ತಂದೆ ಗೋವಿಂದಪ್ಪನ ಜೊತೆ ಬೈಕ್ ನಲ್ಲಿ ತೆಗೆದುಕೊಂಡು ಹೋಗಿ ತನ್ನದೇ ತೋಟದಲ್ಲಿ ಪಾಳು ಬಿದ್ದಿದ್ದ ಕೊಳವೆ ಬಾವಿಗೆ ಹಾಕಿದ್ದ. ಹೆಂಡತಿಯನ್ನ ಕೊಂದ ಬಳಿಕ ವಿಜಯ್ ಮತ್ತವನ ಕುಟುಂಬದವರಿಗೆ ಅದ್ಯಾವ ಪಶ್ಚಾತ್ತಾಪ ಕಾಡ್ತಿತ್ತೋ ಗೊತ್ತಿಲ್ಲ ಕಂಡ ಕಂಡ ದೇವರಿಗೆ ಪೂಜೆ ಪುನಸ್ಕಾರ ಮಾಡಿಸುವುದು ಹೋಮ, ಬಲಿ ಎಲ್ಲ ಮಾಡಿದ್ದಾರೆ. ಇವರು ಹೋಗೋದಷ್ಟೇ ಅಲ್ಲದೆ ಭಾರತಿಯ ಅಣ್ಣ ಮಾರುತಿಯನ್ನೂ ಎಲ್ಲ ಕಡೆ ಕರೆದುಕೊಂಡು ಹೋಗಿದ್ದಾರೆ.‌ ಅಲ್ಲೇ ನೋಡಿ ಅವರು ಎಡವಿದ್ದು.‌ ಎಲ್ಲವನ್ನೂ ಕಣ್ಣಾರೆ ಕಂಡಿದ್ದ ನವೀನ್ ತನ್ನ ಮನೆಯವರಿಗೆ, ಪೊಲೀಸರ ಮುಂದೆ ಎಲ್ಲವನ್ನೂ ಹೇಳಿದ್ದು, ಗಂಡ, ಮಾವ, ಅತ್ತೆಯನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ ಪೊಲೀಸರಿಗೆ ಎಲ್ಲ ಸತ್ಯ ಕಕ್ಕಿದ್ದಾರೆ.

ಒಟ್ನಲ್ಲಿ ಎರಡು ಲಕ್ಷ ಹಣಕ್ಕಾಗಿ ಹೆಂಡತಿಯನ್ನೇ ದೊಣ್ಣೆಯಿಂದ ಹೊಡೆದು ಕೊಂದು ಕೊಳವೆ ಬಾವಿಗೆ ಹಾಕಿದ್ದು ಮಾತ್ರ ದುರಂತ. ಆದ್ರೆ ಪಾಪದ ತಾಯಿ ಸತ್ತು ಕೊಳವೆ ಬಾವಿ ಸೇರಿದ್ದರೆ ಇತ್ತ ತಂದೆ ಜೈಲು ಪಾಲಾಗಿದ್ದಾನೆ. ಇದರಿಂದ ಮಗು ಅನಾಥವಾಗಿದ್ದು ಮಾತ್ರ ದುರಂತ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:59 pm, Tue, 14 October 25