ಚಿಕ್ಕಮಗಳೂರು: ವಿವಾದಿತ ಇನಾಂ ದತ್ತಾತ್ರೇಯ ಪೀಠದಲ್ಲೂ ವಸ್ತ್ರ ಸಂಹಿತೆ ಜಾರಿಗೆ ಪಟ್ಟು

| Updated By: Ganapathi Sharma

Updated on: Aug 10, 2024 | 12:03 PM

ಶೃಂಗೇರಿ ದೇಗುಲದಲ್ಲಿ ವಸ್ತ್ರಸಂಹಿತೆ ಕಟ್ಟುನಿಟ್ಟಿನ ಜಾರಿಗೆ ಬರಲು ಕೆಲವೇ ದಿನಗಳಿವೆ. ಇದೇ ಸಂದರ್ಭದಲ್ಲಿ ವಿವಾದಿತ ಇನಾಂ ದತ್ತಾತ್ರೇಯ ಪೀಠದಲ್ಲೂ ವಸ್ತ್ರ ಸಂಹಿತೆ ಜಾರಿಗೊಳಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಈ ಸಂಬಂಧ ಸೈಯದ್​ ಬುಡೇನ್​ ಶಾಖಾದ್ರಿ ವಂಶಸ್ಥರು ಜಿಲ್ಲಾಡಳಿತಕ್ಕೆ ಮನವಿಯನ್ನೂ ಸಲ್ಲಿಸಿದ್ದಾರೆ.

ಚಿಕ್ಕಮಗಳೂರು: ವಿವಾದಿತ ಇನಾಂ ದತ್ತಾತ್ರೇಯ ಪೀಠದಲ್ಲೂ ವಸ್ತ್ರ ಸಂಹಿತೆ ಜಾರಿಗೆ ಪಟ್ಟು
ಇನಾಂ ದತ್ತಾತ್ರೇಯ ಪೀಠ
Follow us on

ಚಿಕ್ಕಮಗಳೂರು, ಆಗಸ್ಟ್ 10: ಶೃಂಗೇರಿ ಶಾರದಾ ಮಠದಿಂದ ಶೃಂಗೇರಿ ದೇಗುಲದಲ್ಲಿ ವಸ್ತ್ರ ಸಂಹಿತೆ ಜಾರಿ ಬೆನ್ನಲೇ ಚಿಕ್ಕಮಗಳೂರು ಜಿಲ್ಲೆಯ ವಿವಾದಿತ ಇನಾಂ ದತ್ತಾತ್ರೇಯ ಪೀಠದಲ್ಲೂ ವಸ್ತ್ರ ಸಂಹಿತೆ ಜಾರಿಗೆ ಆಗ್ರಹ ಕೇಳಿಬಂದಿದೆ. ಇನಾಂ ದತ್ತ ದತ್ತಾತ್ರೇಯ ಬಾಬಾ ಬುಡನ್​ ಸ್ವಾಮಿ ದರ್ಗಾದಲ್ಲಿ ಭಾರತೀಯ ಸಂಪ್ರದಾಯಿಕ ವಸ್ತ್ರ ಸಂಹಿತೆ ಜಾರಿಗೊಳಿಸಬೇಕೆಂದು ಸೈಯದ್​ ಬುಡೇನ್​ ಶಾಖಾದ್ರಿ ವಂಶಸ್ಥರಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆಯಾಗಿದೆ.

ಹಿಂದೂ, ಮುಸ್ಲಿಂ ವಿವಾದಿತ ಕೇಂದ್ರವಾಗಿರುವ ಇನಾಂ ದತ್ತಾತ್ರೇಯ ದರ್ಗಾಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ದರ್ಗಾಕ್ಕೆ ಬರುವ ಪ್ರವಾಸಿಗರಿಗೆ ವಸ್ತ್ರ ಸಂಹಿತೆ ಜಾರಿ ಮಾಡುವಂತೆ ​ ಶಾಖಾದ್ರಿ ವಂಶಸ್ಥ ಮನವಿ ಮಾಡಿದ್ದಾರೆ.

ಶೃಂಗೇರಿ ಶಾರದಾಂಬೆ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರಸಂಹಿತೆ ಜಾರಿ ಮಾಡಿ ಜುಲೈ ತಿಂಗಳಲ್ಲಿ ಪ್ರಕಟಣೆ ಹೊರಡಿಸಲಾಗಿತ್ತು. ಆಗಸ್ಟ್ 15ರಿಂದ ಶ್ರೀ ಶಾರದಮ್ಮನವರ ದರ್ಶನಕ್ಕೆ ಹಾಗೂ ಗುರುಗಳ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಕಡ್ಡಾಯವಾಗಿ ಭಾರತೀಯ ಸಂಪ್ರದಾಯಿಕ ಉಡುಗೆಯಲ್ಲಿ ಬರುವಂತೆ ಸೂಚಿಸಲಾಗಿತ್ತು.

ಪುರುಷರಾದಲ್ಲಿ ಧೋತಿ ಶಲ್ಯ ಮತ್ತು ಉತ್ತರೀಯ ಹಾಗೂ ಮಹಿಳೆಯರು ಸೀರೆ ರವಿಕೆ, ಸಲ್ವಾರ್ ದುಪಟ್ಟ ಅಥವಾ ಲಂಗ ದಾವಣಿಗಳಂತ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ದೇವರ ದರ್ಶನ ಮಾಡಬಹುದು ಎಂದು ಶೃಂಗೇರಿ ಶಾರದಾ ಪೀಠ ತಿಳಿಸಿತ್ತು. ಮಠದ ಗುರುನಿವಾಸದಲ್ಲಿ ಪಾದಪೂಜೆ, ಭಿಕ್ಷಾವಂದನೆ ಹಾಗೂ ಗುರು ದರ್ಶನ ಸಂದರ್ಭದಲ್ಲಿ ಈ ಹಿಂದಿನಿಂದಲೂ ಈ ನಿಯಮ ಜಾರಿಯಲ್ಲಿದ್ದು, ಆಗಸ್ಟ್ 15 ರಿಂದ ಶ್ರೀ ಮಠದಲ್ಲಿ ಭಕ್ತರು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿತ್ತು. ಈ ನಿರ್ಧಾರಕ್ಕೆ ವ್ಯಾಪಕ ಬೆಂಬಲವೂ ವ್ಯಕ್ತವಾಗಿತ್ತು.

ಇದನ್ನೂ ಓದಿ: ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ

ಇದೀಗ ಬಾಬಾ ಬುಡನ್​ ಸ್ವಾಮಿ ದರ್ಗಾದಲ್ಲಿಯೂ ವಸ್ತ್ರಸಂಹಿತೆಗೆ ಆಗ್ರಹ ವ್ಯಕ್ತವಾಗಿದ್ದು, ಸೈಯದ್​ ಬುಡೇನ್​ ಶಾಖಾದ್ರಿ ವಂಶಸ್ಥರ ಮನವಿಗೆ ಜಿಲ್ಲಾಡಳಿತ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:01 pm, Sat, 10 August 24