ಚಿಕ್ಕಮಗಳೂರು: ಕೋಟೆ ದರ್ಗಾದಲ್ಲಿ ನಿಲ್ಲದ ಕಿರಿಕ್, ಪ್ರತಿಭಟನೆಗಳ ಮಧ್ಯೆಯೇ ಮಸೀದಿ ಕಾಮಗಾರಿ ಶುರು

| Updated By: Ganapathi Sharma

Updated on: Jan 07, 2025 | 6:51 AM

ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯಲ್ಲಿರುವ ಜಾಮಿಯಾ ಮಸೀದಿ ಕಳೆದ ಮೂರು ದಶಕದಿಂದ ಒಂದಿಲ್ಲೊಂದು ವಿವಾದಕ್ಕೆ ಕಾರಣವಾಗುತ್ತಿದೆ. ಅಲ್ಲೀಗ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ದರ್ಗಾ ಕಾಮಗಾರಿಗೆ ಸ್ಥಳೀಯರು, ಹಿಂದೂ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದ್ದು, ಪೊಲೀಸರ ಜೊತೆ ಸ್ಥಳೀಯರು ವಾಗ್ವಾದ ನಡೆಸಿದ್ದಾರೆ. ಹಾಗಾದರೆ ಏನಿದು ವಿವಾದ ಎಂಬ ವಿವರ ಇಲ್ಲಿದೆ.

ಚಿಕ್ಕಮಗಳೂರು: ಕೋಟೆ ದರ್ಗಾದಲ್ಲಿ ನಿಲ್ಲದ ಕಿರಿಕ್, ಪ್ರತಿಭಟನೆಗಳ ಮಧ್ಯೆಯೇ ಮಸೀದಿ ಕಾಮಗಾರಿ ಶುರು
ಕೋಟೆ ದರ್ಗಾ ಬಳಿ ಪೊಲೀಸ್ ಭದ್ರತೆ
Follow us on

ಚಿಕ್ಕಮಗಳೂರು, ಜನವರಿ 7: ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯಲ್ಲಿರುವ ಜಾಮಿಯಾ ಮಸೀದಿ ಅಧೀನದಲ್ಲಿರುವ ಹಜರತ್ ಸೈಯದ್ ಮೌಲಾನಾ ರೋಂ ಶಾಖಾದ್ರಿ ದರ್ಗಾ ಮತ್ತೆ ವಿವಾದಕ್ಕೆ ಕಾರಣವಾಗಿದೆ. ದರ್ಗಾದ ಆವರಣದಲ್ಲಿ ಟೈಲ್ಸ್ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿರುವ ಸ್ಥಳೀಯರು, ಹಿಂದೂ ಸಂಘಟನೆ ಸದಸ್ಯರು ಕಾಮಗಾರಿ ನಡೆಸದಂತೆ ಪ್ರತಿಭಟನೆ ನಡೆಸಿದ್ದಾರೆ. ಕಳೆದ ಶುಕ್ರವಾರ ರಾತ್ರಿ ದರ್ಗಾದ ಮುಂದೆ ಹಿಂದೂ ಸಂಘಟನೆಗಳು ಮತ್ತು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಆಗ ವಾಗ್ವಾದ ನಡೆದಿದ್ದರಿಂದ ಬಿಗಿ‌ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಬಳಿಕ ನಗರಸಭೆ ಅಧ್ಯಕ್ಷೆ ಸುಜಾತಾ ಸ್ಥಳಕ್ಕೆ ಭೇಟಿ ನೀಡಿ ದಾಖಲೆ ಪರಿಶೀಲನೆ ನಡೆಸುವ ವರೆಗೂ ಯಾವುದೇ ಕಾಮಗಾರಿ ನಡೆಸದಂತೆ ಸೂಚನೆ ನೀಡಿದ್ದರು.

ಬಳಿಕ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಸೋಮವಾರ ಮತ್ತೆ ಆರಂಭಿಸಲಾಯಿತು. ಜಿಲ್ಲಾಧಿಕಾರಿ‌ ಮೀನಾ ನಾಗರಾಜ್ ಮತ್ತು ಎಸ್ಪಿ ವಿಕ್ರಮ್ ಅಮಟೆ ನೇತೃತ್ವದಲ್ಲಿ ಎರಡೂ ಸಮುದಾಯದ ಮುಖಂಡರ ಸಭೆ ನಡೆದಿದ್ದು, ದರ್ಗಾ ಸಮಿತಿಯವರು ಸಂಪೂರ್ಣ ದಾಖಲೆಗಳನ್ನು ಜಿಲ್ಲಾಡಳಿತದ ಮುಂದೆ ಹಾಜರುಪಡಿಸಿ, ದರ್ಗಾದಲ್ಲಿ ಕಾಮಗಾರಿ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು. ದರ್ಗಾ ಸಮಿತಿ ಮನವಿ ಮೇರೆಗೆ 500 ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಿ, ಖಾಕಿ ಸರ್ಪಗಾವಲಿನಲ್ಲಿ ಕಾಮಗಾರಿ ನಡೆಸಲಾಯಿತು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಕೂಡಾ ದರ್ಗಾ ಸಮಿತಿಯವರ ದಾಖಲೆಗಳು ಸಮರ್ಪಕವಾಗಿವೆ ಎಂಬುದನ್ನ ತಿಳಿಸಿದರು. ಇದೇ ವೇಳೆ ಹಿಂದೂ ಸಂಘಟನಳು ಮತ್ತು ಸ್ಥಳೀಯರು ದರ್ಗಾದ ಬಳಿ ಜಮಾವಣೆಗೊಂಡಿದ್ದರು. ಕೋಟೆ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಲಾಕ್ ಮಾಡಲಾಗಿತ್ತು.

ಅರಳಿಮರ ಪ್ರದಕ್ಷಿಣೆಗೆ ಹಿಂದೂಗಳ ಮನವಿ

ಚಂಪಾ ಷಷ್ಠೀ ಹಿನ್ನೆಲೆ ಅರಳಿ ಮರದ ಸುತ್ತ ಪ್ರದಕ್ಷಿಣೆ ಹಾಕಬೇಕು, ಅರಳಿಮರದ ಬಳಿ ಇರುವ ನಾಗರ ಕಲ್ಲಿಗೆ ಹಾಲನ್ನ ತನಿ ಎರೆಯಬೇಕು, ಅದಕ್ಕೆ ಅವಕಾಶ ಕೊಡಿ ಎಂದು ಸ್ಥಳೀಯರು ಮನವಿ ಮಾಡಿದರು. ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳು ಅವಕಾಶ ನೀಡದ ಹಿನ್ನೆಲೆ ಪೊಲೀಸರು ಮತ್ತು ಸ್ಥಳೀಯರ ನಡುವೆ ವಾಗ್ವಾದ ನಡೆದಿಯಿತು. ಇದೇವೇಳೆ ಅಯ್ಯಪ್ಪ ಮಾಲಾಧಾರಿಗಳಿಗೆ ಅರಳಿ ಮರದ ಸುತ್ತ ಪ್ರದಕ್ಷಿಣೆಗೆ ಅವಕಾಶ ಕೊಡದಿದ್ದಕ್ಕೆ ಮತ್ತೆ ಕೆರಳಿದ ಹಿಂದೂ ಸಂಘಟನೆಗಳು ಜಿಲ್ಲಾಡಳಿತದ ನಡೆಗೆ ಕೆರಳಿ ಕೆಂಡವಾಗಿದರು.

ಸೋಮವಾರ ಬೆಳಗ್ಗೆಯಿಂದಲೂ ಕೋಟೆ ದರ್ಗಾ ಹಾಗೂ ಅರಳಿ ಮರದ ಸುತ್ತ ಪೊಲೀಸ್ ನಿಯೋಜನೆಗೊಂಡಿದ್ದು ಅತ್ತ ಯಾರೂ ಸುಳಿಯದಂತೆ ಕಾವಲು ಕಾಯಲಾಗಿತ್ತು.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಶವವೊಂದನ್ನ ಸ್ಮಶಾನಕ್ಕೆ ಕರೆದೊಯ್ಯಲೂ ಸಹ ಬಿಡಲಿಲ್ಲ. ‘‘ನಾವು ಇದೇ ದಾರಿಯಲ್ಲಿ ಶವ ತೆಗೆದುಕೊಂಡು ಹೋಗಬೇಕು ಸರ್, ದಯವಿಟ್ಟು ಶವ ತೆಗೆದುಕೊಂಡು ಹೋಗಲು ಅವಕಾಶ ಕೊಡಿ’’ ಎಂದು ಪರಿ ಪರಿಯಾಗಿ ಬೇಡಿಕೊಂಡರೂ ಬಗ್ಗದ ಪೊಲೀಸರು ಪಕ್ಕದ ರಸ್ತೆಯಲ್ಲಿ ಹೋಗಿ ಎಂದು ಸೂಚನೆ ನೀಡಿದರು. ಇದರಿಂದಾಗಿ, ಮೊದಲೇ ಕೆರಳಿ ಕೆಂಡವಾಗಿದ್ದ ಸ್ಥಳೀಯರು ಜಿಲ್ಲಾಡಳಿತದ ವಿರುದ್ಧ ನಿಗಿ ನಿಗಿ ಉರಿದು ಬಿದ್ದರು.

ದರ್ಗಾ ಕುರಿತು ನಕಲಿ ದಾಖಲೆ ಸೃಷ್ಟಿ: ಸ್ಥಳೀಯರ ಆರೋಪ

ದರ್ಗಾದ ಕುರಿತಾಗಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಇದರ ಕುರಿತು ಕಾನೂನು ಹೋರಾಟ ಮಾಡುತ್ತೇವೆ. ನಮ್ಮಪ್ಪನ ಕಾಲದಲ್ಲಿ‌ ಆರಂಭವಾದ ಈ ಹೋರಾಟವನ್ನು ಇಲ್ಲಿಗೇ ಬಿಡುವುದಿಲ್ಲ. ನಾವು ಸತ್ತರೂ ನಮ್ಮ ಮಕ್ಕಳ ಕಾಲಕ್ಕೂ ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಜಿಲ್ಲಾಡಳಿತ ಮತ್ತು‌ ದರ್ಗಾ ಕಮಿಟಿ ವಿರುದ್ಧ ಸ್ಥಳೀಯರು ತೊಡೆ ತಟ್ಟಿದರು.

ಇದನ್ನೂ ಓದಿ: ಚಿಕ್ಕಮಗಳೂರು ನಗರ ಕೋಟೆ ದರ್ಗಾದಲ್ಲಿ ಭುಗಿಲೆದ್ದ ವಿವಾದ: ನೂರಾರು ಪೊಲೀಸರ ನಿಯೋಜನೆ

ಒಟ್ಟಾರೆಯಾಗಿ ಒಂದೇ ಒಂದು ಮುಸ್ಲಿಂ ಕುಟುಂಬವೂ ವಾಸವಿಲ್ಲದ ಕೋಟೆ ಬಡಾವಣೆಯಲ್ಲಿರೋ ದರ್ಗಾ ನಕಲಿ. ಸುಳ್ಳು ದಾಖಲೆ ಸೃಷ್ಟಿಸಿದ್ದಾರೆಂದು ಹಿಂದೂ ಸಂಘಟನೆಗಳು ವಾದ ಮಾಡುತ್ತಿದ್ದರೆ, ಇತ್ತ ದರ್ಗಾ‌ ಸಮಿತಿ ಜಿಲ್ಲಾಡಳಿತದ ಮುಂದೆ ದಾಖಲೆ ಕೊಟ್ಟು, ದರ್ಗಾ ನಮ್ಮದು ಎಂದು ಕಾಮಗಾರಿಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದೆ. ಸ್ಥಳೀಯ ಹಿಂದೂಗಳೂ ಪಟ್ಟು ಬಿಡುತ್ತಿಲ್ಲ. ಈ ಜಟಾಪಟಿ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ