ಚಿಕ್ಕಮಗಳೂರು, ನವೆಂಬರ್ 05: ಶ್ರೀರಾಮಸೇನೆ (Sriramsena) ನೇತೃತ್ವದಲ್ಲಿ ದತ್ತಮಾಲಾ (Dattamale) ಅಭಿಯಾನ ಆರಂಭವಾಗಿದೆ. ದತ್ತಮಾಲಾಧಾರಿಗಳು ಏಳು ದಿನಗಳ ಕಾಲ ಕಠಿಣ ವ್ರತದಲ್ಲಿದ್ದು, ಕೊನೆಯ ದಿನ (ನವೆಂಬರ್ 10 ರಂದು) ದತ್ತಪೀಠಕ್ಕೆ ಆಗಮಿಸುತ್ತಾರೆ. ಅಂದು, ದತ್ರಪೀಠದಲ್ಲಿ ಹೋಮ-ಹವನ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಪೊಲೀಸರು ನಗರದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲಾದ್ಯಂತ ಏಳು ದಿನಗಳ ಕಾಲ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದೆ.
ಅಲ್ಲದೇ, ಮುಂಜಾಗ್ರತ ಕ್ರಮವಾಗಿ ಚಂದ್ರದ್ರೋಣ ಪರ್ವತ ಸಾಲಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ ಮತ್ತು ಗಾಳಿಕೆರೆ ಸೇರಿದಂತೆ ಸುತ್ತಮುತ್ತಲಿನ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡುವುದನ್ನು ನವೆಂಬರ್ 9ರ ಬೆಳಗ್ಗೆ 6 ಗಂಟೆಯಿಂದ ನವೆಂಬರ್ 11ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಿಸಲಾಗಿದೆ.
ಇದನ್ನೂ ಓದಿ: ವರ್ಷಕ್ಕೆ ಒಮ್ಮೆ ದರ್ಶನ ಕರುಣಿಸುವ ಚಿಕ್ಕಮಗಳೂರಿನ ದೇವಿರಮ್ಮನ ಮಹಿಮೆ ಇಲ್ಲಿದೆ, ಫೋಟೋಸ್ ನೋಡಿ
ದತ್ತ ಮಾಲಾಧಾರಿಗಳು ನವೆಂಬರ್ 10ರಂದು ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠಕ್ಕೆ ಭೇಟಿ ನೀಡಲಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಮಾಲಾಧಾರಿಗಳು ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿ ತಾಣಗಳಿಗೆ ನಿರ್ಬಂಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರಿನ ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠ ಸಂಪೂರ್ಣ ಹಿಂದೂ ಪೀಠಕ್ಕೆ ಆಗ್ರಹಿಸಿ ಶ್ರೀರಾಮಸೇನೆ ವತಿಯಿಂದ ನಡೆಯುತ್ತಿರುವ 21ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಅಧಿಕೃತ ಚಾಲನೆ ದೊರೆತಿದೆ. ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಶ್ರೀಗುರುದತ್ತಾತ್ರೇಯರ ಭಕ್ತರು ಮಾಲೆ ಧರಿಸಿ, ಏಳು ದಿನಗಳ ಕಾಲ ವ್ರತಾಚರಣೆಯಲ್ಲಿರುತ್ತಾರೆ. ಏಳನೇ ದಿನ ದತ್ತಪೀಠಕ್ಕೆ ಭೇಟಿ ನೀಡುತ್ತಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:55 am, Tue, 5 November 24