ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ಬಲಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 22, 2024 | 2:48 PM

ಇತ್ತೀಚೆಗಷ್ಟೇ ಜಿಲ್ಲೆಯಲ್ಲಿ ಕಾಡಾನೆ ಬೀಟಮ್ಮ ಗ್ಯಾಂಗ್ ದಿನಕ್ಕೊಂದು ಗ್ರಾಮದಲ್ಲಿ ಕಾಣಿಸಿಕೊಂಡು ಭಯದ ವಾತಾವರಣ ಸೃಷ್ಟಿ ಮಾಡಿತ್ತು. ಅದರಂತೆ ಮೂಡಿಗೆರೆ ತಾಲೂಕಿನಲ್ಲಿ ಬೀಡುಬಿಟ್ಟಿರುವ ಈ ಗ್ಯಾಂಗ್​ನ ದಾಂಧಲೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶಗೊಂಡಿತ್ತು. ಇದೀಗ ಚಿಕ್ಕಮಗಳೂರು (Chikkamagaluru) ತಾಲೂಕಿನ ಕೆಂಚೇನಹಳ್ಳಿಯಲ್ಲಿ ಒಂಟಿ ಸಲಗ ದಾಳಿಗೆ ಓರ್ವ ಕಾರ್ಮಿಕ ಬಲಿಯಾಗಿದ್ದಾನೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ಬಲಿ
ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮತ್ತೋರ್ವ ಬಲಿ
Follow us on

ಚಿಕ್ಕಮಗಳೂರು, ಮಾ.22: ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಕೆಂಚೇನಹಳ್ಳಿಯಲ್ಲಿ ನಡೆದಿದೆ. ತೋಟಕ್ಕೆ ತೆರಳುತ್ತಿದ್ದ ಕಾರ್ಮಿಕ ಶ್ರೀಧರ್ ಎಂಬುವವರ ಮೇಲೆ ಒಂಟಿ ಸಲಗ ದಾಳಿ ಮಾಡಿದ್ದು, ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಇನ್ನು ಮೃತ ಕಾರ್ಮಿಕ ಶ್ರೀಧರ್, ತಮಿಳುನಾಡು ಮೂಲದವನಾಗಿದ್ದು, ಕಾಫಿ ತೋಟದ ಕೆಲಸಕ್ಕೆ ಕುಟುಂಬ ಸಮೇತ ಬಂದಿದ್ದ.

ಕಳೆದ 10 ತಿಂಗಳಲ್ಲಿ ಆನೆ ದಾಳಿಗೆ ನಾಲ್ಕು ಜನ ಬಲಿ

ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಈ ಮೂಲಕ ಕಳೆದ 10 ತಿಂಗಳಲ್ಲಿ ಆನೆ ದಾಳಿಗೆ ನಾಲ್ಕು ಜನ ಬಲಿಯಾಗಿದ್ದಾರೆ. ಜಿಲ್ಲೆಯ ಕೆ.ಆರ್.ಪೇಟೆ ಹಾಗೂ ಕೆಂಚೇನಹಳ್ಳಿ ಸುತ್ತಮುತ್ತ ಒಂಟಿ ಸಲಗ ಓಡಾಡುತ್ತಿದ್ದು, ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕಾಡಾನೆ ದಾಳಿಯಿಂದ ಕೇರಳದಲ್ಲಿ ವ್ಯಕ್ತಿ ಸಾವು: ಕರ್ನಾಟಕ ಸರ್ಕಾರ ಘೋಷಿಸಿದ್ದ 15 ಲಕ್ಷ ರೂ ಪರಿಹಾರ ತಿರಸ್ಕಾರ

ಇನ್ನೂ ಜಿಲ್ಲೆಯಲ್ಲಿ ಕಾಡಾನೆ ಬೀಟಮ್ಮ ಗ್ಯಾಂಗ್ ದಿನಕ್ಕೊಂದು ಗ್ರಾಮದಲ್ಲಿ ಕಾಣಿಸಿಕೊಂಡು ಭಯದ ವಾತಾವರಣ ಸೃಷ್ಟಿ ಮಾಡುತ್ತಿದೆ. ಅದರಂತೆ ಮೂಡಿಗೆರೆ ತಾಲೂಕಿನಲ್ಲಿ ಬೀಡುಬಿಟ್ಟಿರುವ ಈ ಗ್ಯಾಂಗ್​ನ ದಾಂಧಲೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶಗೊಂಡಿದೆ. ಕಳೆದ ನಾಲ್ಕು ದಿನಗಳಲ್ಲಿ ಮೂಡಿಗೆರೆ ತಾಲೂಕಿನ ಐದು ಗ್ರಾಮಗಳಿಗೆ ಈ ಗ್ಯಾಂಗ್ ಲಗ್ಗೆ ಇಟ್ಟಿದ್ದು, ಲಕ್ಷಾಂತರ ಮೌಲ್ಯದ ಕಾಫಿ, ಮೆಣಸು, ಬಾಳೆ ಬೆಳೆ ನಾಶಗೊಂಡಿದೆ.

ಕಾರ್ ಬೈಲು, ನಂದಿಪುರ, ಮಾಕೋನಹಳ್ಳಿ, ಚಂದ್ರಾಪುರದಲ್ಲಿ ಸಂಚಾರ ಮಾಡುತ್ತಿರುವ ಬೀಟಮ್ಮ ಗ್ಯಾಂಗ್, ಮಾಕೋನಹಳ್ಳಿ ಹಾಗೂ ಕಾರ್ ಬೈಲು ಗ್ರಾಮಗಳಲ್ಲಿ 10 ಎಕರೆಗೂ ಅಧಿಕ ಪ್ರದೇಶದಲ್ಲಿ ಕಾಫಿ ತೋಟ ನಾಶಗೊಳಿಸಿದೆ. ಈ ಬಗ್ಗೆ ಅರಣ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದು, ಕಾಡಾನೆ ಹಿಂಡನ್ನು ಕಾಡಿಗಟ್ಟುವಂತೆ ಆಗ್ರಹಿಸಿದ್ದರು. ಇನ್ನು ಜಿಲ್ಲೆಯಲ್ಲಿ ಕಾಡಾನೆ ಹಾವಳಿಗೆ ಎಷ್ಟೇ ಕಟ್ಟುನಿಟ್ಟಿನ ಕ್ರಮಕೈಗೊಂಡರೂ ಕೂಡ ಇದನ್ನು ತಡೆಯಲಾಗುತ್ತಿಲ್ಲ. ಅದರಂತೆ ಕಳೆದ ಹತ್ತು ತಿಂಗಳಲ್ಲಿ 4 ನಾಲ್ಕು ಜನ ಕಾಡಾನೆಗೆ ಕೊನೆಯುಸಿರೆಳೆದಿದ್ದಾರೆ. ಇನ್ನಾದರೂ ಅರಣ್ಯ ಇಲಾಖೆ ಎಚ್ಚೆತ್ತು ಸೂಕ್ತ ಕ್ರಮಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ