ಚಿಕ್ಕಮಗಳೂರು: ಅದು ಗ್ರಾಮಸ್ಥರು ದಶಕಗಳ ಕನಸಾಗಿತ್ತು. ನಮ್ಮೂರಿಗೂ ಕೆಂಪು ಬಸ್ಸು(KSRTC) ಬರಬೇಕು ಎಂದು ದಶಕಗಳ ಕಾಲ ಹೋರಾಟ ಮಾಡಿದ್ರು. ಸಿಕ್ಕ ಸಿಕ್ಕ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರು. ಆದ್ರೆ ಮಲೆನಾಡಿನ ಕುಗ್ರಾಮದ ಗ್ರಾಮಸ್ಥರಿಗೆ ಕೆಂಪು ಬಸ್ಸಿನ ಭಾಗ್ಯದ ಕನಸು ನನಸಾಗಿರಲಿಲ್ಲ. ಸದ್ಯ ಈಗ ದಶಕಗಳ ಹೋರಾಟದ ಬಲವಾಗಿ ಇತಿಹಾಸದಲ್ಲಿ ಮೊದಲ ಬಾರಿಗೆ ಹೊಯ್ಸಳಲು ಗ್ರಾಮಕ್ಕೆ( Hoysalalu Village) ಕೆಂಪು ಬಸ್ ಬಂದಿದೆ. ಕೆಂಪು ಬಸ್ ನೋಡಿ ಜನ ಫುಲ್ ಖುಷಿ ಆಗಿದ್ದಾರೆ.
ಹೊಯ್ಸಳಲು ಗ್ರಾಮ ಮಲೆನಾಡಿನ ಕುಗ್ರಾಮ, ಪಟ್ಟಣಕ್ಕೆ ಬರಬೇಕು ಅಂದ್ರೆ 5 km ನಡಿಲೇಬೇಕು, ಇಲ್ಲ ಖಾಸಗಿ ವಾಹನಗಳ ಮೊರೆ ಹೋಗ್ಬೇಕು. ವಿದ್ಯಾರ್ಥಿಗಳಿಗೆ ಬೆಳಗಾದ್ರೆ 5 km ನಡೆದು ಶಾಲೆಗೆ ಹೋಗುವ ದುಸ್ಥಿತಿ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಯ್ಸಳಲು ಗ್ರಾಮಕ್ಕೆ KSRTC ಬಸ್ ಬೇಕು ಎಂಬುದು ದಶಕಗಳ ಬೇಡಿಕೆಯಾಗಿತ್ತು. ಮೂಡಿಗೆರೆ ಪಟ್ಟಣದಿಂದ 30km ದೂರದಲ್ಲಿರುವ ಹೊಯ್ಸಳಲು ಗ್ರಾಮದಲ್ಲಿ 200 ಕ್ಕೂ ಅಧಿಕ ಕುಟುಂಬಗಳಿದ್ದು ಸರ್ಕಾರಿ ಬಸ್ ವ್ಯವಸ್ಥೆ ಇಲ್ಲದೆ ದಶಕಗಳ ಕಾಲ ಪರದಾಡಿದ್ದಾರೆ. ಅದ್ರೆ ಕಳೆದ ಶನಿವಾರ ಮೂಡಿಗೆರೆ KSRTC ವಿಭಾಗದಿಂದ ಹೊಯ್ಸಳಲು ಗ್ರಾಮಕ್ಕೆ ನಿತ್ಯ ಬೆಳಗ್ಗೆ ಸಂಜೆಯಂತೆ ಎರಡು ಬಸ್ ವ್ಯವಸ್ಥೆ ಮಾಡಿದ್ದು ಗ್ರಾಮಸ್ಥರು ಗ್ರಾಮಕ್ಕೆ ಬಸ್ ಬರುತ್ತಿದ್ದಂತೆ ಸಂಭ್ರಮಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಅದೆಷ್ಟೋ ಗ್ರಾಮಗಳಿಗೆ ಇಲ್ಲಿಯವರೆಗೂ ಬಸ್ ಭಾಗ್ಯವೇ ಸಿಕ್ಕಿಲ್ಲ. ಸರ್ಕಾರಿ ಬಸ್ಸುಗಳಿಲ್ಲದೆ ಜನ್ರು ಪರದಾಡುತ್ತಿದ್ದಾರೆ. ಆದ್ರೆ ಮೂಡಿಗೆರೆ ತಾಲೂಕಿನ ಹೊಯ್ಸಳಲು ಗ್ರಾಮಕ್ಕೆ ದಶಕಗಳ ಹೋರಾಟದ ಫಲವಾಗಿ KSRTC ಬಸ್ ಸೌಲಭ್ಯ ಸಿಕ್ಕಿದ್ದು, ಗ್ರಾಮಸ್ಥರು ಹಬ್ಬದ ರೀತಿ ಸಂಭ್ರಮಿಸಿದ್ದಾರೆ. ಗ್ರಾಮಕ್ಕೆ ಬಸ್ ಬರುತ್ತಿದ್ದಂತೆ ಬಸ್ಸಿಗೆ ಅಲಂಕಾರ ಮಾಡಿ, ಪೂಜೆ ಮಾಡಿ ಸಂಭ್ರಮಿಸಿದ್ದಾರೆ. ತಮ್ಮೂರಿನಿಂದ ಮೂಡಿಗೆರೆಗೆ ಬಸ್ಸಿನ ಟಿಕೆಟ್ ಪಡೆದು ಬಸ್ಸಿನಲ್ಲಿ ಸಂಚಾರ ಮಾಡಿ ಖುಷಿ ಪಟ್ಟಿದ್ದಾರೆ.
ಮೂಲಭೂತ ಸೌಕರ್ಯಗಳ ಪಟ್ಟಿಯಲ್ಲಿ ಬರುವ ಸಾರಿಗೆ ವ್ಯವಸ್ಥೆ ಇನ್ನೂ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಅದೆಷ್ಟೋ ಗ್ರಾಮಕ್ಕೆ ಸಿಕ್ಕಿಲ್ಲ. ಇತಿಹಾಸದಲ್ಲಿ ಮೊದಲ ಬಾರಿಗೆ ಗ್ರಾಮಕ್ಕೆ KSRTC ಬಸ್ಸು ಬರುತ್ತಿದ್ದಂತೆ ಗ್ರಾಮಸ್ಥರು ಸಂಭ್ರಮಿಸಿದ್ದು. ಗ್ರಾಮದಲ್ಲಿ ಹಬ್ಬ ಮಾಡಿದ್ದಾರೆ. ಸರ್ಕಾರ ಆದಷ್ಟು ಬೇಗ ಇನ್ನುಳಿದ ಗ್ರಾಮಗಳಿಗೂ ಬಸ್ ವ್ಯವಸ್ಥೆ ಕಲ್ಪಿಸ ಬೇಕಿದೆ.
ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ