ಚಿಕ್ಕಮಗಳೂರು: ದತ್ತಪೀಠ ಮತ್ತು ದತ್ತಮಾಲೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ಕ್ಷಮೆಯಾಚಿಸಿದ್ದಾರೆ. ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳಿರುವ ಟಿ.ಡಿ ರಾಜೇಗೌಡ ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾರೆ. ವಿಡಿಯೋದಲ್ಲಿ ಹಳ್ಳಿಗಳಲ್ಲಿ ರೂಡಿಯಿರುವ ಶಬ್ದವನ್ನು ಬಳಸಿದ್ದೇನೆ. ಆ ಶಬ್ದ ಬಳಕೆ ಯಾರ ಸಂಸ್ಕೃತಿಯೂ ಆಗಬಾರದು. ಆ ಶಬ್ದ ಬಳಸಬಾರದಿತ್ತು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕ್ಷಮೆಯಾಚಿಸಿದ್ದಾರೆ.
ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುತ್ತಿದ್ದಾರೆ ಆದ್ದರಿಂದ ಆಕ್ರೋಶವಾಗಿ ಮಾತನಾಡಿದೆ. ದತ್ತಮಾಲೆ ಹಾಕಲಿಲ್ಲ ಎಂದು ದಲಿತ ವಿದ್ಯಾರ್ಥಿಗೆ ಹಲ್ಲೆ ಮಾಡಿದರು. ಹಲ್ಲೆ ವಿಷಯವಾಗಿ ಬುದ್ದಿಹೇಳುವ ಕೆಲಸವನ್ನು ಮಾಡಿದ್ದೇನೆ.
ಶಾಸಕ ಟಿ.ಡಿ.ರಾಜೇಗೌಡ ಅವರ ಮಾತಿಗೆ ಹಿಂದೂ ಸಂಘಟನೆಗಳು ಆಕ್ರೋಶ ಹೊರ ಹಾಕಿದ್ದು, 24 ಗಂಟೆಯೊಳಗೆ ಕ್ಷಮೆ ಕೇಳಬೇಕು ಇಲ್ಲವಾದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಕರೆ ನೀಡಿದ್ದವು.
ಜನೆವರಿ 24 ರಂದು ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಯೋಧ್ಯೆ, ದತ್ತಪೀಠ ಹೋರಾಟ ಬಗ್ಗೆ ಅವಾಚ್ಯ ಶಬ್ದದಿಂದ ನಿಂದನೆ ಮಾಡಿದ್ದರು. ಸದ್ಯ ಈಗ ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಆಡಿಯೋ ವೈರಲ್ ಆಗಿದೆ. ಅವರು ಮನೆ ಹಾಳು * ಮಕ್ಕಳು. ಜನರಿಗೆ ದತ್ತಮಾಲೆ ಹಾಕಿಸಿ, ಕುಂಕುಮವನ್ನು ಹಾಕಿ ಕರೆದುಕೊಂಡು ಹೋಗುತ್ತಾರೆ. ಅಯೋಧ್ಯೆ ಹೋರಾಟದಲ್ಲಿ ಲಕ್ಷಾಂತರ ಜನರನ್ನು ಬಲಿ ಕೊಟ್ಟರು. ಬಾಬ್ರಿ ಮಸೀದಿ ಕೆಡವಲು ಹೋಗಿ ಲಕ್ಷಾಂತರ ಜನರು ಬಲಿಯಾದ್ರು. ನಾನು ಬೈಯುತ್ತೇನೆ, ಜನರನ್ನ ಕರೆದುಕೊಂಡು ಹೋಗುವವರು ಮನೆಹಾಳರು ಎಂದು ಶಾಸಕ ಟಿ.ಡಿ.ರಾಜೇಗೌಡರ ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು.
ಕೇಸರಿ ಶಾಲು, ಕುಂಕುಮ, ದತ್ತಮಾಲೆ ಹಾಕಿದರೆ ಹೊಟ್ಟೆ ತುಂಬಲ್ಲ. ದತ್ತಪೀಠದ ಹೋರಾಟದಿಂದ ಅನ್ನ ಸಿಗುವುದಿಲ್ಲ ಎಂದು ಪರೋಕ್ಷವಾಗಿ ಹಿಂದೂಪರ ಸಂಘಟನೆ, ಬಿಜೆಪಿ ಪಕ್ಷದ ವಿರುದ್ಧ ರಾಜೇಗೌಡರು ನಿಂದನೆ ಮಾಡಿದ್ದಾರೆ. ಸದ್ಯ ಈಗ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ. ಟಿ.ಡಿ.ರಾಜೇಗೌಡ ಹೇಳಿಕೆ ಖಂಡಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಬಿಜೆಪಿ, ವಿಶ್ವಹಿಂದೂಪರಿಷತ್, ಬಜರಂಗದಳ ಕಾರ್ಯಕರ್ತರಿಂದ ಇಂದು ಪ್ರತಿಭಟನೆ ನಡೆಯಲಿದ್ದು ಶಾಸಕ ಟಿ.ಡಿ.ರಾಜೇಗೌಡ ಕ್ಷಮೆಯಾಚನೆಗೆ ಆಗ್ರಹಿಸಲಿದ್ದರು.
ದತ್ತಮಾಲೆ, ಅಯೋಧ್ಯೆ, ಬಗ್ಗೆ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಪಕ್ಷ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ರಾಮ ಮಂದಿರದ ಬಗ್ಗೆಯೇ ಮಾತನಾಡಿದ್ರು. ಕಾಂಗ್ರೆಸ್ ಪಕ್ಷದ ನಾಯಕರೇ ಹಿಂದೂ ವಿರುದ್ದವಾಗಿ ಮಾತನಾಡುತ್ತಾರೆ. ನಾಯಕರೇ ಮಾತನಾಡುವಾಗ ಶಾಸಕರು ಕೂಡಾ ಮಾತನಾಡುತ್ತಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:10 pm, Wed, 25 January 23