ಚಿಕ್ಕಮಗಳೂರು ನಗರ ಕೋಟೆ ದರ್ಗಾದಲ್ಲಿ ಭುಗಿಲೆದ್ದ ವಿವಾದ: ನೂರಾರು ಪೊಲೀಸರ ನಿಯೋಜನೆ

| Updated By: Ganapathi Sharma

Updated on: Jan 04, 2025 | 11:29 AM

ಅದು ಚಿಕ್ಕಮಗಳೂರು ನಗರದ ವಿವಾದಿತ ದರ್ಗಾ. ಕಳೆದ ಒಂದು ದಶಕದಿಂದ ಒಂದಿಲ್ಲೊಂದು ವಿವಾದಕ್ಕೆ ಕಾರಣವಾಗುತ್ತಿರುವ ಜಾಮಿಯಾ ಮಸೀದಿ ಅಧೀನದಲ್ಲಿರುವ ದರ್ಗಾದಲ್ಲಿ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಅನುಮತಿ ಪಡೆಯದೆ ವಿವಾದಿತ ಸ್ಥಳದಲ್ಲಿ ಕಾಮಗಾರಿಗೆ ಹಿಂದೂ ಸಂಘಟನೆ, ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗಿವಿನ ವಾತವರಣ ಸೃಷ್ಟಿಯಾಗಿದ್ದು, ದರ್ಗಾದ ಸುತ್ತ ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಚಿಕ್ಕಮಗಳೂರು ನಗರ ಕೋಟೆ ದರ್ಗಾದಲ್ಲಿ ಭುಗಿಲೆದ್ದ ವಿವಾದ: ನೂರಾರು ಪೊಲೀಸರ ನಿಯೋಜನೆ
ಕೋಟೆ ದರ್ಗಾದಲ್ಲಿ ವಿವಾದ
Follow us on

ಚಿಕ್ಕಮಗಳೂರು, ಜನವರಿ 4: ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯಲ್ಲಿರುವ ಜಾಮಿಯಾ ಮಸೀದಿ ಅಧೀನದಲ್ಲಿರುವ ಹಜರತ್ ಸೈಯದ್ ಮೌಲಾನಾ ರೋಂ ಶಾಖಾದ್ರಿ ದರ್ಗಾ ಮತ್ತೆ ವಿವಾದಕ್ಕೆ ಕಾರಣವಾಗಿದೆ. ದರ್ಗಾದ ಆವರಣದಲ್ಲಿ ಟೈಲ್ಸ್ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿರುವ ಸ್ಥಳೀಯರು ಹಾಗೂ ಹಿಂದೂ ಸಂಘಟನೆ ಸದಸ್ಯರು ಕಾಮಗಾರಿ ನಡೆಸದಂತೆ ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ. ವಿವಾದಿತ ಸ್ಥಳದಲ್ಲಿ ಕಾಮಗಾರಿ ನಡೆಸಲು ಅನುಮತಿ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆಯೇ ಕೋಟೆ ಬಡಾವಣೆಯಲ್ಲಿ ಚಿಕ್ಕಮಗಳೂರು ಡಿವೈಎಸ್​ಪಿ ಶೈಲೇಂದ್ರ ನೇತೃತ್ವದಲ್ಲಿ ನೂರಾರು ಪೊಲೀಸರ ಭದ್ರತೆ ನೀಡಲಾಗಿದೆ. ಸ್ಥಳಕ್ಕೆ ಬಂದ ಚಿಕ್ಕಮಗಳೂರು ನಗರ ಸಭೆ ಅಧ್ಯಕ್ಷೆ ಸುಜಾತಾ ಕಾಮಗಾರಿ ನಡೆಸದಂತೆ ಸೂಚನೆ ನೀಡಿದ್ದಾರೆ. ಜಾಮಿಯಾ ಮಸೀದಿ ನಾಳೆಯೊಳಗೆ ದರ್ಗಾಕ್ಕೆ ಸಂಬಂಧಿಸಿದ ದಾಖಲೆ ನೀಡುವಂತೆ ಸೂಚನೆ ನೀಡಿದ್ದಾರೆ.

ಹಿಂದೂ ಸಂಘಟನೆಗಳ, ಸ್ಥಳೀಯರ ಆಕ್ಷೇಪವೇನು?

ಒಂದೇ ಒಂದು ಮುಸ್ಲಿಂ ಮನೆಗಳೇ ಇಲ್ಲದ‌ ಕೋಟೆ ಬಡಾವಣೆಯಲ್ಲಿರುವ ಈ‌ ದರ್ಗಾದಲ್ಲಿರುವ ಗೋರಿಗಳು ನಕಲಿ. ಆಸ್ತಿ ಹೊಡೆಯುವ ಸಂಚು. ಜಾಮಿಯಾ ಮಸೀದಿ ಬಳಿ ಯಾವುದೇ ದಾಖಲೆಗಳಿಲ್ಲ. ದಾಖಲೆ ಇದ್ದರೆ ನೀಡಲಿ ಎಂಬುದೇ ಹಿಂದೂ ಸಂಘಟನೆಗಳು ಹಾಗೂ ಸ್ಥಳೀಯರ ವಾದ. ಇದೇ ಸಂಘರ್ಷ ವಿವಾದಿತ ದರ್ಗಾವಾಗಿ ಮಾರ್ಪಟ್ಟಿದೆ. ಕಳೆದ ವರ್ಷವೂ ಕಾಮಗಾರಿ ವಿರೋಧಿಸಿ ದರ್ಗಾದೊಳಗೆ ಗಲಾಟೆ ನಡೆದಿತ್ತು. ಇದೀಗ ಮತ್ತೆ ವಿವಾದ ಮುನ್ನೆಲೆಗೆ ಬಂದಿದ್ದು ನಾಳೆ ನಗರಸಭೆಯಲ್ಲಿ ಸಭೆ ಕರೆಯಲಾಗಿದೆ.

ಸ್ಥಳಕ್ಕೆ ಪೊಲೀಸ್ ಭದ್ರತೆ

ಇದನ್ನೂ ಓದಿ: ಅಂಗನವಾಡಿ ಟೀಚರ್ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶಾಂತವಾಗಿದ್ದ ಕಾಫಿ ನಾಡಿನಲ್ಲಿ ಮತ್ತೆ ಸಂಘರ್ಷಗಳು ದಿನದಿಂದ ದಿನಕ್ಕೆ ಸೃಷ್ಟಿಯಾಗುತ್ತಿದೆ. ಜಾಮಿಯಾ ಮಸೀದಿ ಅಧೀನದಲ್ಲಿರುವ ದರ್ಗಾ ಮತ್ತೊಂದು ವಿವಾದ ಸೃಷ್ಟಿ ಮಾಡಿದ್ದು, ದರ್ಗಾ ಬಳಿ ನೂರಾರು ಪೊಲೀಸರನ್ನ ಮುಂಜಾಗ್ರತಾ ಕ್ರಮವಾಗಿ ನಿಯೋಜನೆ ಮಾಡಲಾಗಿದೆ.‌ ಇಂದು ನಗರಸಭೆಯಲ್ಲಿ ಸಭೆ ನಡೆಯಲಿದ್ದು, ಬಳಿಕ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ