ನವೆಂಬರ್ 4 ರಿಂದ 10ರವರೆಗೆ ದತ್ತಮಾಲಾ ಅಭಿಯಾನ: ಇಸ್ಲಾಂ ಮುಕ್ತ ದತ್ತಪೀಠ ನೀಡುವಂತೆ ಶ್ರೀರಾಮ ಸೇನೆ ಪಟ್ಟು

| Updated By: ವಿವೇಕ ಬಿರಾದಾರ

Updated on: Oct 08, 2024 | 11:35 AM

ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ಕಳೆದ 20 ವರ್ಷಗಳಿಂದ ಶ್ರೀರಾಮ ಸೇನೆ ದತ್ತಮಾಲಾ ಅಭಿಯಾನ ನಡೆಸುತ್ತಿದೆ.

ಚಿಕ್ಕಮಗಳೂರು, ಅಕ್ಟೋಬರ್​ 08: ವಿವಾದಿತ ಕೇಂದ್ರ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ (Dattapeeta) ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ಶ್ರೀರಾಮ ಸೇನೆ (Sri Ram Sena) ನಡೆಸುವ ದತ್ತಮಾಲಾ ಅಭಿಯಾನಕ್ಕೆ (Dattamala Abhiyan) ಸಿದ್ಧತೆ ಆರಂಭವಾಗಿದೆ. ಸರ್ಕಾರದ ಮುಂದೆ ಇಸ್ಲಾಂ ಮುಕ್ತ ದತ್ತಪೀಠಕ್ಕೆ ಶ್ರೀರಾಮ ಸೇನೆ ಬೇಡಿಕೆ ಇಟ್ಟಿದೆ.

ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ಕಳೆದ 20 ವರ್ಷಗಳಿಂದ ಶ್ರೀರಾಮ ಸೇನೆ ನಡೆಸುತ್ತಿರುವ ದತ್ತಮಾಲಾ ಅಭಿಯಾನಕ್ಕೆ ದಿನಗಣನೆ ಆರಂಭವಾಗಿದೆ. ನವೆಂಬರ್ 4 ರಿಂದ‌ 10 ರವರೆಗೂ 6 ದಿನಗಳ ಕಾಲ ದತ್ತಮಾಲಾ ಅಭಿಯಾನ ನಡೆಯಲಿದೆ. ನವೆಂಬರ್ 4 ರಂದು ರಾಜ್ಯಾದ್ಯಂತ ಸಾವಿರಾರು ಶ್ರೀರಾಮ ಸೇನೆ ಕಾರ್ಯಕರ್ತರು ದತ್ತಮಾಲಾ ಧಾರಣೆ ಮಾಡಲಿದ್ದಾರೆ.

ದತ್ತಮಾಲಾ ಅಭಿಯಾನದ ಕೊನೆಯ ದಿನವಾದ ನವೆಂಬರ್ 10 ರಂದು ಚಿಕ್ಕಮಗಳೂರು ನಗರದಲ್ಲಿ ಧರ್ಮ ಸಭೆ, ಶೋಭಾಯಾತ್ರೆ ಬಳಿಕ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ತೆರಳಿ ಹೋಮ, ಪೂಜೆ ನರವೇರಿಸಲಿದ್ದಾರೆ. ಈ ಬಾರಿ ಸರ್ಕಾರದ ಮುಂದೆ ವಿವಿಧ ಬೇಡಿಕೆ ಮುಂದಿಟ್ಟಿರುವ ಶ್ರೀರಾಮ ಸೇನೆ, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಆವರಣದಲ್ಲಿರುವ ಗೋರಿಗಳನ್ನ ನಾಗೇನಹಳ್ಳಿ ದರ್ಗಾಕ್ಕೆ ಸ್ಥಳಾಂತರ ಮಾಡಬೇಕು. ಇಸ್ಲಾಂ ಮುಕ್ತ ದತ್ತಪೀಠವನ್ನು ಹಿಂದೂಗಳಿಗೆ ನೀಡುವಂತೆ ಆಗ್ರಹಿಸಿದೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಾಬಾಬುಡನ್ ಗಿರಿ ಅರ್ಚಕರಿಗಿಲ್ಲ ಸಂಬಳ

ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿರುವ ಮುಸ್ಲಿಮರ ಪವಿತ್ರ ನಾಗೇನಹಳ್ಳಿ ದರ್ಗಾದಲ್ಲಿ ದತ್ತಮಾಲಾ ಆಚರಣೆಗೆ ಶ್ರೀರಾಮ ಸೇನೆ ಕಳೆದ ವರ್ಷ ಕರೆ ನೀಡಿತ್ತು. ಇದಕ್ಕೆ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು.

ಈ ವರ್ಷವೂ ನಾಗೇನಹಳ್ಳಿ ದರ್ಗಾದಲ್ಲಿ ದತ್ತಮಾಲಾ ಆಚರಣೆ ಕುರಿತು ಸಭೆ ಬಳಿಕ ತೀರ್ಮಾನ ಮಾಡುವುದಾಗಿ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಹೇಳಿದ್ದಾರೆ. ಹಿಂದೂಗಳ ದತ್ತಪೀಠದಲ್ಲಿ ಉರುಸ್ ನಡೆಸುವುದಾದರೆ ನಾವು ಯಾಕೆ ನಾಗೇನಹಳ್ಳಿ ದರ್ಗಾದಲ್ಲಿ ದತ್ತಮಾಲಾ ಆಚರಣೆ ಮಾಡಬಾರದು? ಸೌಹಾರ್ದತೆ ಬಯಸುವವರು ನಾಗೇನಹಳ್ಳಿ ದರ್ಗಾದಲ್ಲೂ ಆಚರಣೆ ಮಾಡಿ ಅನ್ನಬೇಕಿತ್ತು. ಬುದ್ಧಿಜೀವಿಗಳು ಬೇರೆ ಬೇರೆಯವರು ಸೌಹಾರ್ದತೆಯ ಪಾಠ ಮಾಡುತ್ತಾರೆ. ಕೆಲವರಿಗೆ ಸೌಹಾರ್ದತೆ ಬೇಡ ಸಂಘರ್ಷ ಬೇಕು. ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂದರು.

ನವೆಂಬರ್ 4 ರಂದು ನಡೆಯುವ ದತ್ತಮಾಲಾ ಅಭಿಯಾನದ ಜಾಗೃತಿ ಕುರಿತು ರಾಜ್ಯಾದ್ಯಂತ ಪ್ರವಾಸ ನಡೆಸಿ ದತ್ತಪೀಠ ಹೋರಾಟಕ್ಕೆ ಸಂಘಟಿಸುವುದಕ್ಕೆ ಶ್ರೀರಾಮ ಸೇನೆ ಸಿದ್ಧತೆ ನಡೆಸಿದ್ದು‍, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ನಡೆಯುವ ದತ್ತಮಾಲಾ ಅಭಿಯಾನಕ್ಕೆ ಶ್ರೀರಾಮ ಸೇನೆ ಸಿದ್ಧತೆ ನಡೆಸಿದ್ದು, ಸರ್ಕಾರಕ್ಕೆ ಇಸ್ಲಾಂ ಮುಕ್ತ ದತ್ತಪೀಠ ನೀಡುವಂತೆ ಮನವಿ ನೀಡಿದೆ. ಚಿಕ್ಕಮಗಳೂರು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಶಾಂತಿಯುತ ದತ್ತಮಾಲಾ ಅಭಿಯಾನಕ್ಕೆ ಸಿದ್ಧತೆ ನಡೆಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:31 am, Tue, 8 October 24