ಅಭಿವೃದ್ಧಿ ಕಾರ್ಯದ ಬಗ್ಗೆ ಶ್ವೇತ ಪತ್ರ ಹೊರಡಿಸಲಿ; ಎಂಕೆ ಪ್ರಾಣೇಶ್ಗೆ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಸವಾಲು
ಗ್ರಾಮ ಪಂಚಾಯತಿಗಳಿಗೆ ನನ್ನ ಕೊಡುಗೆ ಏನು ಎಂದು ಬಿಜೆಪಿ ಅಭ್ಯರ್ಥಿ ಎಂಕೆ ಪ್ರಾಣೇಶ್ ಪ್ರಶ್ನಿಸಿದ್ದಾರೆ. ಅವರ ಅವಧಿಯ ಅಭಿವೃದ್ಧಿ ಕಾರ್ಯಕ್ಕೂ ನನ್ನ ಅವಧಿಯ ಅಭಿವೃದ್ಧಿ ಕಾರ್ಯಕ್ಕೂ ಹೋಲಿಕೆ ಮಾಡಿ ಶ್ವೇತ ಪತ್ರ ಹೊರಡಿಸಲಿ ಅಂತ ಗಾಯತ್ರಿ ಶಾಂತೇಗೌಡ ಸವಾಲು ಹಾಕಿದ್ದಾರೆ.
ಚಿಕ್ಕಮಗಳೂರು: ಕಾಂಗ್ರೆಸ್ ಅಭ್ಯರ್ಥಿಯಾಗಿ ಗಾಯತ್ರಿ ಶಾಂತೇಗೌಡ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿಸಿ ರಮೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಮೋಟಮ್ಮ, ಬಿಎಲ್ ಶಂಕರ್, ಮಾಜಿ ಕೇಂದ್ರ ಸಚಿವೆ ಡಿಕೆ ತಾರಾದೇವಿ ಉಪಸ್ಥಿತರಿದ್ದರು. ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ನಾಮಪತ್ರ ಸಲ್ಲಿಸುವ ವೇಳೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಡಿಸಿ ಕಚೇರಿ ಬಳಿ ಜಮಾಯಿಸಿದ್ದರು. ಪಕ್ಷದ ಮುಖಂಡರು, ನಾಯಕರ ಒಮ್ಮತದ ನಿರ್ಣಯದಿಂದ ನಾನು ಪರಿಷತ್ಗೆ ಸ್ಪರ್ಧಿಸಿದ್ದು ಗ್ರಾಮ ಪಂಚಾಯತಿ, ಪುರಸಭೆ, ಪಟ್ಟಣ ಪಂಚಾಯತಿ ಸದಸ್ಯರ ಬೆಂಬಲದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಅಂತಾ ನಾಮಪತ್ರ ಸಲ್ಲಿಸಿದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತಿಗಳಿಗೆ ನನ್ನ ಕೊಡುಗೆ ಏನು ಎಂದು ಬಿಜೆಪಿ ಅಭ್ಯರ್ಥಿ ಎಂಕೆ ಪ್ರಾಣೇಶ್ ಪ್ರಶ್ನಿಸಿದ್ದಾರೆ. ಅವರ ಅವಧಿಯ ಅಭಿವೃದ್ಧಿ ಕಾರ್ಯಕ್ಕೂ ನನ್ನ ಅವಧಿಯ ಅಭಿವೃದ್ಧಿ ಕಾರ್ಯಕ್ಕೂ ಹೋಲಿಕೆ ಮಾಡಿ ಶ್ವೇತ ಪತ್ರ ಹೊರಡಿಸಲಿ ಅಂತ ಗಾಯತ್ರಿ ಶಾಂತೇಗೌಡ ಸವಾಲು ಹಾಕಿದ್ದಾರೆ. ಇದೇ ವೇಳೆ ಮಾತನಾಡಿದ ಕೆಪಿಸಿಸಿ ಮುಖಂಡ ಬಿಎಲ್ ಶಂಕರ್, ಚಿಕ್ಕಮಗಳೂರು ಸೇರಿದಂತೆ ರಾಜ್ಯದಲ್ಲಿ ಅತಿವೃಷ್ಠಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಆದರೆ ಸೂಕ್ತ ಪರಿಹಾರ ನೀಡಬೇಕಾದ ಸರ್ಕಾರ, ಜನಸ್ವರಾಜ್ ಯಾತ್ರೆಯನ್ನ ಮಾಡಿಕೊಂಡು ರೈತರನ್ನ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದೆ ಅಂತ ಹೇಳಿದರು.
ಯಾವ ಸಚಿವರು ಹಾನಿಯಾಗಿರುವ ಜಿಲ್ಲೆಗಳಿಗೆ ಹೋಗಿ ಸಮೀಕ್ಷೆ ಮಾಡುತ್ತಿಲ್ಲ. ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ಕೊಡುತ್ತಿಲ್ಲ. ಕೂಡಲೇ ಸಂತ್ರಸ್ಥ ರೈತರ ಅಳಲನ್ನ ಸರ್ಕಾರ ಆಲಿಸಬೇಕು. ಜೊತೆಗೆ ಸೂಕ್ತ ಪರಿಹಾರ ನೀಡಬೇಕು ಅಂತಾ ಕೆಪಿಸಿಸಿ ಮುಖಂಡ, ಮಾಜಿ ಸಚಿವ ಬಿಎಲ್ ಶಂಕರ್ ಆಗ್ರಹಿಸಿದರು. ಕೇಂದ್ರದ ಮಾಜಿ ಸಚಿವೆ ಡಿಕೆ ತಾರದೇವಿ, ಮಾಜಿ ಸಚಿವ ಸಗೀರ್ ಅಹ್ಮದ್, ಮಾಜಿ ಶಾಸಕ ಎಸ್ಎಂ ನಾಗರಾಜ್ ಹಾಜರಿದ್ದರು.
ಇದನ್ನೂ ಓದಿ
ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಹಾಸನದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಒಟಿಟಿಯಲ್ಲಿ ಕೋಟಿಗೊಬ್ಬ 3 ಬಿಡುಗಡೆ ಯಾವಾಗ?; ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ ಇಲ್ಲಿದೆ
Published On - 10:44 am, Wed, 24 November 21