ಚಿಕ್ಕಮಗಳೂರು: ದೇವಸ್ಥಾನ ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆ ಸಂಬಂಧ ಕಳೆದ ವರ್ಷ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಇದೇ ತಿಂಗಳು ಮಾರ್ಚ್ 22 ರಿಂದ ರಂಜಾನ್ ಪ್ರಾರಂಭವಾಗುವ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಮಸೀದಿಗಳಲ್ಲಿ ನಸುಕಿನ ಜಾವ 5 ರಿಂದ 5:30 ವರೆಗು ಧ್ವನಿವರ್ಧಕಗಳನ್ನು ಬಳಸಲು ಅನುಮತಿ ನೀಡಬೇಕೆಂದು ಮುಸ್ಲಿಂ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮತ್ತು ಶಾಸಕ ಸಿ.ಟಿ ರವಿಯವರಿಗೆ ಮನವಿ ಮಾಡಿದ್ದಾರೆ.
ಮುಸಲ್ಮಾನ್ ಬಾಂಧವರಿಗೆ ರಂಜಾನ್ ಮಾಸವು ಬಹಳ ಪವಿತ್ರ ಮಾಸವಾಗಿರುತ್ತದೆ. ಶಾಂತಿ, ಸಹಬಾಳ್ವೆ, ದಾನ ಧರ್ಮ ಉಪವಾಸದೊಂದಿಗೆ ಕಟ್ಟುನಿಟ್ಟಾಗಿ ಪ್ರಾರ್ಥನೆಗಳು ರಂಜಾನ್ ಮಾಸದಲ್ಲಿ ನಡೆಯುತ್ತವೆ, ಇದರ ಜೊತೆಗೆ ಮುಸಲ್ಮಾನ್ ಬಾಂಧವರಿಗೆ ಆಝಾನ್ ಕೂಡ ರಂಜಾನ್ ಆಚರಣೆಯ ಒಂದು ಭಾಗವಾಗಿರುತ್ತದೆ. ಹೀಗಿರುವಾಗ ರಂಜಾನ್ ಉಪವಾಸ ನಡೆಯುವ ಒಂದು ತಿಂಗಳ ಕಾಲ ಬೆಳಗಿನ ಆಝಾನ್ ಧ್ವನಿವರ್ಧಕದಲ್ಲಿ ನೀಡಲು ಅವಕಾಶ ಮಾಡಿಕೊಡಬೇಕೆಂದು ಎಲ್ಲಾ ಮುಸಲ್ಮಾನರ ಪರವಾಗಿ ಕೋರಿಕೊಳ್ಳುತ್ತೇವೆ.
ವಿಶೇಷ ಸಂದರ್ಭಗಳು, ಧಾರ್ಮಿಕ ಕಾರ್ಯಕ್ರಮಗಳಿಗೆ, ಕ್ರೀಡಾಕೂಟಗಳಿಗೆ ರಾತ್ರಿ ಹಾಗೂ ಮುಂಜಾನೆ ಧ್ವನಿ ವರ್ಧಕವನ್ನು ಬಳಸಲು ಅನುಮತಿ ನೀಡುತ್ತಿದ್ದೀರಿ, ಇದೇ ರೀತಿ ಮುಸಲ್ಮಾನರ ಪವಿತ್ರ ರಂಜಾನ್ ಮಾಸದಲ್ಲಿ ಬೆಳಗಿನ ಜಾವ 5-00 ರಿಂದ 5-30 ರ ಒಳಗೆ ಗರಿಷ್ಠ 5 ನಿಮಿಷಗಳ ಕಾಲ ಧ್ವನಿವರ್ಧಕದ ಮೂಲಕ ಆಝಾನ್ ನೀಡಲು ಅನುಮತಿ ನೀಡಬೇಕೆಂದು ಕೋರಿಕೊಳ್ಳುತ್ತೇವೆ ಎಂದು ಮುಸ್ಲಿಂ ಮುಖಂಡರು ಮನವಿ ಮಾಡಿದ್ದಾರೆ.
2021ರ ಮಾರ್ಚನಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮಸೀದಿಗಳು ಮತ್ತು ದರ್ಗಾಗಳಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಲೌಡ್ ಸ್ಪೀಕರ್‌ಗಳನ್ನು ಬಳಸುವುದಕ್ಕೆ ನಿರ್ಬಂಧ ವಿಧಿಸಿ ಸುತ್ತೋಲೆ ಹೊರಡಿಸಿದೆ. ಶಬ್ದ ಮಾಲಿನ್ಯ (ನಿಯಂತ್ರಣ ಮತ್ತು ನಿರ್ವಹಣೆ) ಕಾನೂನು, 2000ದ ಅಡಿ ಮಂಡಳಿ ಸುತ್ತೋಲೆಯನ್ನು ಹೊರಡಿಸಿತ್ತು. ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಎಲ್ಲ ಮಸೀದಿ ಮತ್ತು ದರ್ಗಾಗಳ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದೆ. ಆಝಾನ್ ಮತ್ತು ಪ್ರಮುಖ ಸೂಚನೆಗಳನ್ನು ನೀಡಲು (ಸಾವು, ಸಮಾಧಿ ಮಾಡುವ ಸಮಯ, ಚಂದ್ರ ಕಾಣಿಸುವ ಮತ್ತು ಹಗಲು ಹೊತ್ತಿನಲ್ಲಿ) ಮಾತ್ರ ಧ್ವನಿವರ್ಧಕ ಬಳಸಬೇಕು ಎಂದು ಸುತ್ತೋಲೆಯಲ್ಲಿ ಹೇಳಿದೆ.
ಧ್ವನಿವರ್ಧಕ ಬಳಕೆ ಸಂಬಂಧ ಸುಪ್ರೀಂಕೋರ್ಟ್ ಮಸೀದಿ, ದೇವಸ್ಥಾನಗಳಲ್ಲಿ 10 ಡೆಸಿಬಲ್ ಗಿಂತ ಕಡಿಮೆ ಧ್ವನಿವರ್ಧಕ ಮಾತ್ರ ಹಗಲು ಹೊತ್ತಿನಲ್ಲಿ ಬಳಸಬಹುದು. ಮಾಲಿನ್ಯ ನಿಯಂತ್ರಣ ಮಂಡಳಿಯ ಕಾಯ್ದೆಯ ಪ್ರಕಾರ ಆದೇಶ ಪಾಲನೆಗೆ ಪೊಲೀಸರಿಗೆ ಹಾಗೂ ಸರ್ಕಾರಕ್ಕೆ ಸೂಚನೆ ಹೊರಡಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ