ಚಿಕ್ಕಮಗಳೂರು: ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಭಾರೀ ಅನಾಹುತ ಎದುರಾಗುತ್ತಿದೆ. ಮಳೆ(Karnataka Rains) ನಿಂತರೂ ಮಳೆ ಅವಾಂತರಗಳು ಕಡಿಮೆ ಆಗುತ್ತಿಲ್ಲ. ವರುಣನ ಆರ್ಭಕ್ಕೆ ಕರುನಾಡೇ ತತ್ತರಿಸಿ ಹೋಗಿದೆ. ನಿರಂತರ ಮಳೆಯಿಂದಾಗಿ ಜನರ ಗೋಳು ಹೇಳತೀರದಾಗಿದೆ. ಜಲಾಶಯಗಳು ಭರ್ತಿಯಾಗಿ, ನೀರನ್ನ ಹೊರಬಿಡಲಾಗ್ತಿದೆ. ನದಿಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಇವೆಲ್ಲದರ ನಡುವೆ ಮಲೆನಾಡಿನಲ್ಲಿ ಮಳೆ ಅಬ್ಬರ ಮುಂದುವರೆದಿದ್ದು ಶೃಂಗೇರಿ ಶಾರದಾಂಬೆಗೆ ಹಾಲಿ ಮತ್ತು ಮಾಜಿ ಶಾಸಕರು ಮೊರೆ ಹೋಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿರೋ ಶಾರದಾಂಬೆ ದೇವಾಲಯಕ್ಕೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಶಾಸಕ ಟಿ.ಡಿ. ರಾಜೇಗೌಡ ಮೊರೆ ಹೋಗಿದ್ದಾರೆ. ಶಾರದಾಂಬೆಗೆ ಪೂಜೆ ಸಲ್ಲಿಸಿ ಅತಿವೃಷ್ಟಿ ನಿಲ್ಲಿಸುವಂತೆ ಬೇಡಿಕೊಂಡಿದ್ದಾರೆ. ಹಾಗೂ ಕೈ ಹಾಲಿ ಶಾಸಕ-ಬಿಜಿಪಿಯ ಮಾಜಿ ಶಾಸಕರಿಬ್ಬರೂ ಒಟ್ಟೊಟ್ಟಿಗೆ ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ ಬಳಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಎಂದೂ ಕೂಡ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದ ನಾಯಕರು ಇಂದು ಒಟ್ಟೊಟ್ಟಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಶೃಂಗೇರಿಯಲ್ಲಿ ವಾಡಿಕೆ ಮಳೆಗಿಂತ ಡಬಲ್ ಮಳೆ ಸುರಿದಿದೆ.
ಕೃಷ್ಣಾ ನದಿಗೆ ಹರಿದು ಬಂತು ಅಪಾರ ನೀರು
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆ ಮುಂದುವರೆದಿದೆ. ಈ ಹಿನ್ನಲೆ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಮಹಾರಾಷ್ಟ್ರದ ಕೊಯ್ನಾ 161mm, ನವಜಾ 204mm ಮಹಾಬಲೇಶ್ವರ 246 mm. ಮಳೆ ಸುರಿದಿದೆ. 1 ಲಕ್ಷ 10 ಸಾವಿರ ಕ್ಯೂಸೇಕ್ ನಷ್ಟು ಕೃಷ್ಣಾ ನೀರು ಹರಿದು ಬರುತ್ತಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ – ಯಡೂರಿನ ಕೃಷ್ಣಾ ನದಿ ತೀರದಲ್ಲಿ ಸಾರ್ವಜನಿಕರು ವಾಹನ, ಬಟ್ಟೆ ತೊಳೆಯುತ್ತಿರುವ ದೃಶ್ಯ ಕಂಡು ಬಂದಿದೆ. ಇನ್ನು ನದಿ ಮಧ್ಯದ ದೇವಸ್ಥಾನದಲ್ಲಿ ಜನ ಸೆಲ್ಫಿ, ಫೋಟೊ ತೆಗೆದುಕೊಳ್ಳುತ್ತಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ಅಪಾಯ ಲೆಕ್ಕಿಸದೆ ನಿರ್ಲಕ್ಷ್ಯ
ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದಲ್ಲಿ ಯುವಕರು ನೀರಿಗಿಳಿದು ಈಜಾಡುತ್ತಿದ್ದಾರೆ. ಅಪಾಯ ಲೆಕ್ಕಿಸದೇ ನೀರಿಗೆ ಧುಮುಕಿದ್ದಾರೆ. ನೀರಿಗೆ ಧುಮುಕಿ ಓರ್ವ ಯುವಕನಿಗೆ ತಲೆಗೆ ಗಾಯಗಳಾಗಿವೆ. ಸಣ್ಣ ಸಣ್ಣ ಮಕ್ಕಳೊಂದಿಗೆ ದಡದಲ್ಲಿ ಕುಳಿತು ಪೋಷಕರು ಎಂಜಾಯ್ ಮಾಡುತ್ತಿದ್ದಾರೆ. ಫೊಟೋಗೆ ಪೋಜ್ ಕೊಟ್ಟಿದ್ದಾರೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರೋ ತುಂಗಭದ್ರಾ ಜಲಾಶಯಕ್ಕೆ ಅಪಾಯವನ್ನೂ ಲೆಕ್ಕಿಸದೆ ಜನ ಬರುತ್ತಿದ್ದಾರೆ. ಈ ಬಗ್ಗೆ ಪೊಲೀಸರು, ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.
ಕೆಲವು ಮನೆಗಳಿಗೆ ನುಗ್ಗಿದ ನೀರು ಜನರ ಪರದಾಟ
ಬೀದರ್ ಜಿಲ್ಲೆಯಲ್ಲಿ ನಾಲ್ಕು ದಿನದಿಂದ ನಿರಂತರ ಜಿಟಿ ಜಿಟಿ ಮಳೆಯಾಗುತ್ತಿದ್ದು ಮಳೆಯಿಂದಾಗಿ ಜನ ಮನೆಯಿಂದಾ ಹೊರಬಾರದಂತಾಗಿದೆ. ಜೀವನ ಅಸ್ಥವ್ಯಸ್ತಗೊಂಡಿದೆ. ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ 49 ಮನೆಗಳು ಭಾಗಶಃ ಕುಸಿದಿವೆ. ಬಸವಕಲ್ಯಾಣ ತಾಲೂಕಿನಲ್ಲಿ 20 ಮನೆ ಔರಾದ್ ತಾಲೂಕಿನಲ್ಲಿ 12 ಮನೆಗಳು, ಕಮಲನಗರ ತಾಲೂಕಿನಲ್ಲಿ 7 ಮನೆ ಬೀದರ್ ಭಾಲ್ಕಿ ತಾಲೂಕಿನಲ್ಲಿ ತಲಾ 4 ಮನೆ ಕುಸಿದಿದೆ. ಹುಣಸೂರು ತಾಲೂಕಿನ 2 ಮನೆ ಹುಮ್ನಾಬಾದ್ ತಾಲೂಕಿನಲ್ಲಿ 1 ಮನೆ ಭಾಗಶಃ ಕುಸಿದಿದೆ.
ಮಳೆಗೆ ಮನೆ ಮೇಲೆ ಬಿದ್ದ ಬೃಹತ್ ಮರ
ನಿರಂತರ ಸುರಿಯುತ್ತಿರುವ ಭಾರೀ ಮಳೆಗೆ ಮನೆ ಮೇಲೆ ಬೃಹತ್ ಮರ ಬಿದ್ದಿದೆ. ಮನೆಯ ಮೇಲ್ಚಾವಣಿ, ಗೋಡೆ ಕುಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಲಿಂಗದಬೈಲ್ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ ಭಾರೀ ಅನಾಹುತ ತಪ್ಪಿದೆ. ಶ್ರೀಮತಿ ಶ್ಯಾಮಲಾ ಬಾಬು ಮರಾಠಿ ಅವರಿಗೆ ಸೇರಿದ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಮನೆ ಗೋಡೆ, ಮೇಲ್ಚಾವಣಿ ಹಂಚು ಒಡೆದು ಅಂದಾಜು 50,000 ಹಾನಿ ಸಂಭವಿಸಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಪರಿಹಾರಕ್ಕಾಗಿ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಮಹದೇವಪುರದಲ್ಲಿ ಚಿತ್ರೀಕರಣಕ್ಕೆ ನಿರ್ಬಂಧ
ಕೆಆರ್ಎಸ್ನಿಂದ 72 ಸಾವಿರ ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಚಿತ್ರೀಕರಣಕ್ಕೆ ನಿರ್ಬಂಧ ಹೇರಲಾಗಿದೆ. ಮಹದೇವಪುರ ಸಿನಿಮಾ, ಧಾರಾವಾಹಿ ಶೂಟಿಂಗ್ ತಾಣವಾಗಿತ್ತು. ಡ್ಯಾಂನಿಂದ ಹೊರಹರಿವು ಹೆಚ್ಚಳ ಹಿನ್ನೆಲೆ ಶೂಟಿಂಗ್ಗೆ ಬ್ರೇಕ್ ಹಾಕಲಾಗಿದೆ.
Published On - 4:46 pm, Tue, 12 July 22