ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆ: ಕಳಸ‌-ಶೃಂಗೇರಿ ಮಾರ್ಗ ರಸ್ತೆ ಕುಸಿತ, ಜನರು ಪರದಾಟ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 23, 2023 | 4:12 PM

ನಿತ್ಯ ಸಾವಿರಾರು ಪ್ರವಾಸಿಗರು ಸಂಚರಿಸುವ ಜಿಲ್ಲೆಯ ಶೃಂಗೇರಿ ತಾಲೂಕಿನ ಹೆಗ್ಗಾರುಕೂಡಿಗೆ ಗ್ರಾಮದ ಬಳಿಯ ಕಳಸ‌-ಶೃಂಗೇರಿ ಮಾರ್ಗದ ರಸ್ತೆ ಭಾರೀ ಮಳೆಯಿಂದಾಗಿ ಕುಸಿದಿದ್ದು, ಜನರು ಪರದಾಡುವಂತಾಗಿದೆ. ಸ್ಥಳಕ್ಕೆ ಸಚಿವ ಕೆ.ಜೆ ಜಾರ್ಜ್ ಭೇಟಿ ನೀಡಿ ಮಳೆಯಿಂದ ಹಾನಿಯಾದ ರಸ್ತೆ ವೀಕ್ಷಣೆ ಮಾಡಿದ್ದಾರೆ.

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆ: ಕಳಸ‌-ಶೃಂಗೇರಿ ಮಾರ್ಗ ರಸ್ತೆ ಕುಸಿತ, ಜನರು ಪರದಾಟ
ಮಳೆಗೆ ರಸ್ತೆ ಕುಸಿತ
Follow us on

ಚಿಕ್ಕಮಗಳೂರು, ಜುಲೈ 23: ಕಾಫಿನಾಡು ಚಿಕ್ಕಮಗಳೂರಿನ (Chikkamagaluru) ಮಲೆನಾಡು ಭಾಗದಲ್ಲಿ ಮಹಾ ಮಳೆ‌ ಆರಂಭವಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಸುರಿಯುತ್ತಿರುವ ಧಾರಾಕಾರ ಮಳೆ‌ಯಿಂದ ಅವಾಂತರ ಸೃಷ್ಟಿಯಾಗುತ್ತಿವೆ. ಸದ್ಯ ಮಳೆಯಿಂದಾಗಿ ಜಿಲ್ಲೆಯ ಶೃಂಗೇರಿ ತಾಲೂಕಿನ ಹೆಗ್ಗಾರುಕೂಡಿಗೆ ಗ್ರಾಮದ ಬಳಿಯ ಕಳಸ‌-ಶೃಂಗೇರಿ ಮಾರ್ಗದ ರಸ್ತೆ ಕುಸಿದಿದೆ. ನಿತ್ಯ ಸಾವಿರಾರು ಪ್ರವಾಸಿಗರು ಸಂಚಾರ ಮಾಡುವ ಮತ್ತು 15 ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಯೇ ಕುಸಿದಿದ್ದು, ಜನರು ಪರದಾಡುವಂತಾಗಿದೆ.

ಕಳೆದ ವರ್ಷ ಸುರಿದ ಮಳೆಗೆ ಸ್ವಲ್ಪ ಕುಸಿತವಾಗಿದ್ದ ರಸ್ತೆ ಇದೀಗ ಮತ್ತೆ ಕುಸಿತವಾಗಿದೆ. ರಸ್ತೆ ಕುಸಿತವಾದ ಸ್ಥಳಕ್ಕೆ ಸಚಿವ ಕೆ.ಜೆ ಜಾರ್ಜ್ ಭೇಟಿ ನೀಡಿ ಮಳೆಯಿಂದ ಹಾನಿಯಾದ ರಸ್ತೆ ವೀಕ್ಷಣೆ ಮಾಡಿದ್ದಾರೆ. ಶೃಂಗೇರಿ, ಕಳಸ‌, ಕೊಪ್ಪ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: DudhSagar: ದೂಧ್​ ಸಾಗರ್ ಜಲಪಾತದ ವೈಭೋಗಕ್ಕೆ ಪ್ರವಾಸಿಗರು ಫಿದಾ; ಇಲ್ಲಿದೆ ಅದರ ಝಲಕ್

ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಡಿಸಿಗೆ ಸೂಚನೆ: ಸಚಿವ ಕೆ.ಜೆ.ಜಾರ್ಜ್

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್​, ಸಿಎಂ ಸಿದ್ಧರಾಮಯ್ಯ ಅವರ ಸೂಚನೆ ಮೇರೆಗೆ ಮಳೆ ಹಾನಿ ಪ್ರದೇಶಗಳ ಪರಿಶೀಲನೆ ಮಾಡಲಾಗುತ್ತಿದೆ. ಸ್ಥಳೀಯ ಶಾಸಕರ ಜತೆ ಮಳೆ ಹಾನಿ ಪ್ರದೇಶ ‌ಪರಿಶೀಲಿಸುತ್ತಿದ್ದೇನೆ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಡಿಸಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ತಾಲೂಕು ಮಟ್ಟದಲ್ಲಿ ವಾರ್ ಟೀಂ ರೆಡಿ ಮಾಡಲಾಗಿದೆ. ನದಿಪಾತ್ರದ ಜನರನ್ನು ಸ್ಥಳಾಂತರಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಹಾರಂಗಿ ಜಲಾಶಯ ಕ್ರೆಸ್ಟ್ ಗೇಟ್ ಓಪನ್, ನೀರು ಧುಮ್ಮಿಕ್ಕುವ ಮನಮೋಹಕ ದೃಶ್ಯವನ್ನು ನೋಡಿ

ಮುಂದುವರೆದ ಮಳೆ ಅಬ್ಬರ: ರಸ್ತೆ, ಮೈದಾನ ಮುಳುಗಡೆ

ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಮಳೆ ಅವಾಂತರದಿಂದಾಗಿ ಶೃಂಗೇರಿ ದೇಗುಲ ಬಳಿಯ ಗಾಂಧಿ ಮೈದಾನ ಸಂಪೂರ್ಣ ಜಲಾವೃತವಾಗಿದೆ. ಅದೇ ರೀತಿಯಾಗಿ ಪ್ಯಾರ್ಲರ್​​​​​​ ರಸ್ತೆ, ಕರುಬಕೇರಿ ರಸ್ತೆಯೂ ಮುಳುಗಡೆಯಾಗಿದ್ದು, ಅಂಗಡಿಗಳಿಗೆ ನದಿ ನೀರು ನುಗ್ಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಅಂಗಡಿಗಳನ್ನು  ತಾಲೂಕು ಆಡಳಿತ ತೆರವುಗೊಳಿಸಿದೆ. ದೇವಾಲಯದ ಸುತ್ತಮುತ್ತಲಿನ ಇನ್ನಷ್ಟು ಪ್ರದೇಶಗಳು ಮುಳುಗಡೆ ಆತಂಕ ಎದುರಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.