ಚಿಕ್ಕಮಗಳೂರು, (ಅಕ್ಟೋಬರ್ 25): ಬಿಗ್ ಬಾಸ್ ಮನೆಯಲ್ಲಿ ಮಿಂಚುತಿದ್ದ ಹಳ್ಳಿಕಾರ್ ಖ್ಯಾತಿಯ ವರ್ತೂರ್ ಸಂತೋಷ್ಗೆ (Varthur Santosh) ತಾನು ಧರಿಸಿದ್ದ ಹುಲಿ(Tiger) ಉಗುರಿನ ಲಾಕೆಟ್ ಸಂಕಷ್ಟ ತಂದಿಟ್ಟಿದೆ. ಬಿಗ್ಬಾಸ್ ಮನೆಯಿಂದ ಅರೆಸ್ಟ್ ಆಗಿರೋ ಸಂತೋಷ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ. ಇದರ ಬೆನ್ನಲ್ಲೇ ಇದೀಗ ಇದೇ ರೀತಿ ಹುಲಿ ಉಗುರಿನ ಲಾಕೆಟ್ ಧರಿಸಿರುವ ಹಲವರಿಗೆ ಢವಢವ ಶುರುವಾಗಿದೆ. ನಟ ದರ್ಶನ್, ನವರಸ ನಾಯಕ ಜಗ್ಗೇಶ್, ವಿನಯ್ ಗುರೂಜಿ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹುಲಿ ಉಗುರಿನ ಲಾಕೆಟ್ ಧರಸಿದವರ ಬಂಧನ ಯಾವಾಗ? ಎಂದು ಸಾರ್ವಜನಿಕರು, ಆರಣ್ಯ ಇಲಾಖೆ, ಹಾಗೂ ಪೊಲೀಸ್ ಇಲಾಖೆಗೆ ಪ್ರಶ್ನಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಹುಲಿ ಚರ್ಮದ ಮೇಲೆ ಕುಳಿತ ಅವಧೂತ ವಿನಯ ಗುರೂಜಿ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದ್ದು, ಇದೀಗ ಅವರ ವಿರುದ್ಧ ದೂರು ದಾಖಲಾಗಿದೆ. ಇನ್ನು ವಿನಯ್ ಗುರೂಜಿ ಆಶ್ರಮದಲ್ಲಿದ್ದ ಹುಲಿ ಚರ್ಮ ಕೊಟ್ಟಿದ್ಯಾರು? ಯಾವಾಗ? ಈ ಎಲ್ಲಾ ದಾಖಲೆಗಳ ಪ್ರತಿ TV9ಗೆ ಲಭ್ಯವಾಗಿದೆ.
ವಿನಯ್ ಗುರೂಜಿ ಫೋಟೋ ಹುಲಿ ಚರ್ಮದ ಮೇಲೆ ಕುಳಿತುಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ವಿನಯ್ ಗುರೂಜಿ ಅವರ ಗೌರಿಗದ್ದೆ ದತ್ತಾಶ್ರಮಕ್ಕೆ ಶಿವಮೊಗ್ಗ ಮೂಲದ ಅಮರೇಂದ್ರ ಕಿರೀಟಿ ಎನ್ನುವರು ಚರ್ಮ ದಾನವಾಗಿ ನೀಡಿದ್ದಾರೆ ಎನ್ನುವ ದಾಖಲಿಗಳಲ್ಲಿ ಇದೆ.
ಇದನ್ನೂ ಓದಿ: ಹುಲಿ ಉಗುರು: ವರ್ತೂರು ಸಂತೋಷ್ ಬಳಿಕ ದರ್ಶನ್, ವಿನಯ್ ಗುರೂಜಿ ವಿರುದ್ಧ ದೂರು ದಾಖಲು
ಅಮರೇಂದ್ರ ಅವರು ಹುಲಿ ಚರ್ಮ ದಾನ ನೀಡುವ ಬಗ್ಗೆ 23-8-2-2019ರಲ್ಲಿ ಶಿವಮೊಗ್ಗ ಉಪ ಅರಣ್ಯಾಧಿಕರಿಗೆ ಪತ್ರ ಬರೆದಿದು ಲೈಸೆನ್ಸ್ ಪಡೆದುಕೊಂಡಿದ್ದರು. ಲೈಸೆನ್ಸ್ ಪಡೆದುಕೊಂಡೇ ಗೌರಿಗದ್ದೆ ದತ್ತಾಶ್ರಮ ಹುಲಿ ಚರ್ಮ ನೀಡಲಾಗಿತ್ತು. ನಂತರ ಹುಲಿ ಚರ್ಮದ ಮೇಲೆ ಕುಳಿತ ವಿನಯ್ ಗುರೂಜಿ ಫೋಟೋ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಅದನ್ನು ವಿನಯ್ ಗುರೂಜಿ ಅವರು ಅಮರೇಂದ್ರ ಅವರಿಗೆ ವಾಪಸ್ ನೀಡಿದ್ದರು. ನಂತರ ಹುಲಿ ಚರ್ಮವನ್ನು ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪತ್ರ ಅಮರೇಂದ್ರ ಅವರು ಅರಣ್ಯ ಇಲಾಖೆಗೆ ಪತ್ರ ಬರೆದು 20-5-2023ರಲ್ಲಿ ಶಿವಮೊಗ್ಗ ಅರಣ್ಯ ಇಲಾಖೆಗೆ ಒಪ್ಪಿಸಿದ್ದರು.
ಜನಪ್ರಿಯ ರಿಯಾಲಿಟಿ ಶೋ ಆದ ಕನ್ನಡದ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಅವರು ಹುಲಿ ಉಗುರುಳ್ಳ ಡಾಲರ್ – ಚೈನ್ ಹಾಕಿಕೊಂಡಿದ್ದರಿಂದ ಅವರನ್ನು ಪೊಲೀಸರು ಬಂಧಿಸಿದ್ದರು. ಆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆದಿದ್ದು, ಇತರೆ ಸೆಲೆಬ್ರಿಟಿಗಳು ಹಾಕಿಕೊಂಡಿರುವ ಹುಲಿ ಉಗುರಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಇವರ ಬಂಧನ ಯಾವಾಗ ಎಂದು ಪ್ರಶ್ನಿಸಿದ್ದಾರೆ. ಇದೇ ರೀತಿಯ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಬೆಂಗಳೂರಿನಲ್ಲಿರುವ ಸರ್ವಸಂಘಗಳ ಒಕ್ಕೂಟದ ಅಧ್ಯಕ್ಷ ಸಿ.ಎಂ. ಶಿವಕುಮಾರ್ ನಾಯಕ್ ಎಂಬುವವರು ವಿನಯ್ ಗುರೂಜಿ ಹಾಗೂ ನಟ ದರ್ಶನ್ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ದರ್ಶನ್ ಅವರು ಅರಣ್ಯ ರಾಯಭಾರಿ ಆಗಿದ್ದಾರೆ. ಅವರಿಗೆ ಕನಿಷ್ಠ ಪ್ರಜ್ಞೆ ಇಲ್ಲವೇ, ದರ್ಶನ್ ಬಂಗಾರದ ಚೈನ್ ಹಾಕಿದ್ದಾರೆ. ಅದರಲ್ಲಿ ಹುಲಿಯ ಉಗುರು ಇದೆ. ಅವರಿಂದ ಕಾನೂನಿನ ಉಲ್ಲಂಘನೆ ಆಗಿದೆ. ವಿನಯ್ ಗುರೂಜಿ ಹುಲಿಯ ಚರ್ಮದ ಮೇಲೆ ಕೂತಿದ್ದಾರೆ. ಹುಲಿಯ ಉಗುರು ಇದ್ದ ಕಾರಣಕ್ಕೆ ವರ್ತೂರು ಸಂತೋಷ ಅವರನ್ನು ಬಂಧಿಸಿದ್ದೀರಿ. ಅದೇ ರೀತಿ ನಟ ದರ್ಶನ್, ವಿನಯ್ ಗುರೂಜಿಯನ್ನೂ ಕರೆಸಿ ವಿಚಾರಿಸಿ. ಅವರು ಧರಿಸಿದ ಹುಲಿ ಉಗುರು ಅಸಲಿಯೋ ಅಥವಾ ನಕಲಿಯೋ ಅನ್ನೋದನ್ನು ಪರಿಶೀಲನೆ ಮಾಡೋದು ಅರಣ್ಯಾಧಿಕಾರಿಗಳ ಕಾರ್ಯ ಎಂದು ಹೇಳಿದ್ದಾರೆ.
ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹಿಸುವುದು ತಪ್ಪಾಗುತ್ತದೆ. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10000 ರೂ ದಂಡ ವಿಧಿಸುವ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ