ಚಿಕ್ಕಮಗಳೂರಿನಲ್ಲಿ ಚಳಿಗೆ ನಶೆ ಏರಿಸಿಕೊಳ್ತಿದ್ದವರ ಮೇಲೆ ದಾಖಲಾಯ್ತು ಕೇಸ್​; 10 ನಿಯಮಗಳನ್ನ ಜಾರಿಗೊಳಿಸಲು ಮುಂದಾದ ಎಸ್ಪಿ! ಏನದು?

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 09, 2024 | 9:11 PM

ಭೂ ಲೋಕದ ಸ್ವರ್ಗ, ಕರುನಾಡ ಸ್ವಿಟ್ಜರ್ಲೆಂಡ್‌‌ ಎಂದೇ ಖ್ಯಾತಿ ಪಡೆದಿರುವ ಕಾಫಿನಾಡು‌ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಲ್ಲಿ ಮಧ್ಯ, ಪ್ಲಾಸ್ಟಿಕ್ ಸೇರಿದಂತೆ ಪ್ರವಾಸಿಗರ ಮೋಜು-ಮಸ್ತಿ, ಹುಚ್ಚಾಟಕ್ಕೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಜಿಲ್ಲಾಡಳಿತದ ನಿಷೇಧದ ನಡುವೆಯೂ ಐತಿಹಾಸಿಕ ಪ್ರವಾಸಿ ಸ್ಥಳದಲ್ಲಿ ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ ಇಳಿಸಿದ್ದಾರೆ. ಎಣ್ಣೆ, ಕಾರು ಸಮೇತ ಕರೆತಂದು ಕೇಸ್ ಹಾಕಿದ್ದು, ಆ ಲೇಡಿ ಪೊಲೀಸ್ ಕಾರ್ಯಕ್ಕೆ ಪರಿಸರ ಪ್ರಿಯರು ಸೇರಿದಂತೆ ಸ್ಥಳೀಯರು ಶಬ್ಬಾಸ್‌ಗಿರಿ ಕೊಟ್ಟಿದ್ದಾರೆ. ಇದರ ನಡುವೆ ಪೊಲೀಸ್ ಇಲಾಖೆ 10 ಖಡಕ್ ನಿಯಮಗಳನ್ನ ಜಾರಿಗೊಳಿಸಲು ಮುಂದಾಗಿದೆ. ಹಾಗಾದ್ರೆ ಆ 10 ನಿಯಮಗಳೆನು ಅಂತೀರಾ? ಈ ಸ್ಟೋರಿ ಓದಿ.

ಚಿಕ್ಕಮಗಳೂರಿನಲ್ಲಿ ಚಳಿಗೆ ನಶೆ ಏರಿಸಿಕೊಳ್ತಿದ್ದವರ ಮೇಲೆ ದಾಖಲಾಯ್ತು ಕೇಸ್​; 10 ನಿಯಮಗಳನ್ನ ಜಾರಿಗೊಳಿಸಲು ಮುಂದಾದ ಎಸ್ಪಿ! ಏನದು?
ಚಿಕ್ಕಮಗಳೂರಿನ ಪ್ರವಾಸಿ ಸ್ಥಳಗಳಲ್ಲಿ ಮದ್ಯ ಸೇವಿಸುತ್ತಿದ್ದವರ ಮೇಲೆ ಕೇಸ್​ ದಾಖಲು
Follow us on

ಚಿಕ್ಕಮಗಳೂರು, ಜು.09: ಕಾಫಿನಾಡು ಚಿಕ್ಕಮಗಳೂರಿ(Chikkamagaluru)ನ ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಪ್ರಾಕೃತಿಕವಾದ ಸ್ವರ್ಗ ಲೋಕವೇ ಸೃಷ್ಟಿಯಾಗಿದೆ. ಇಲ್ಲಿನ ಪ್ರಕೃತಿಯ ಸೌಂದರ್ಯ ಸವಿಯೋದಕ್ಕಾಗಿ ಹೊರ ಜಿಲ್ಲೆ, ರಾಜ್ಯಗಳಿಂದಲೂ ಪ್ರವಾಸಿಗರು ತಂಡೋಪತಂಡವಾಗಿ ಬರುತ್ತಾರೆ. ಕುಟುಂಬದ ಜೊತೆ ದೇವಸ್ಥಾನಕ್ಕೆ, ಪ್ರಕೃತಿ ಸೌಂದರ್ಯ ಸವಿಯಲು ಬರುವವರು ಒಂದೆಡೆಯಾದರೆ, ಮೋಜು-ಮಸ್ತಿಗಾಗಿ ಸ್ನೇಹಿತರ ಜೊತೆ ಬರೋರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ನಡು ರಸ್ತೆಯಲ್ಲೇ ವಾಹನ ನಿಲ್ಲಿಸಿಕೊಂಡು ಡ್ಯಾನ್ಸ್, ಮೋಜು ಮಸ್ತಿ ಮಾಡಿ ಇತರೆ ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರು.

ಲೇಡಿ ಪಿಎಸ್‌ಐ ಕಾರ್ಯಕ್ಕೆ ಮೆಚ್ಚುಗೆ

ಇದ್ರಿಂದಾಗಿ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಲ್ಲಿ‌ ಮದ್ಯ, ಪ್ಲಾಸ್ಟಿಕ್ ಸೇರಿದಂತೆ ಮೋಜು ಮಸ್ತಿಗೆ ಜಿಲ್ಲಾಡಳಿತ ನಿಷೇಧ ಹೇರಿ ಆದೇಶ ಹೊರಡಿಸಿತ್ತು. ಜಿಲ್ಲಾಡಳಿತದ ಆದೇಶದ ನಡುವೆಯೂ ಮೂಡಿಗೆರೆ ತಾಲೂಕಿನ ಐತಿಹಾಸಿಕ ಪ್ರವಾಸಿ ತಾಣ ದೇವರಮನೆ ಬೆಟ್ಟದಲ್ಲಿ ಕಾರ್ ನಿಲ್ಲಿಸಿಕೊಂಡು ಚಳಿಗೆ ನಶೆ ಏರಿಸಿಕೊಳ್ತಿದ್ದವರ ಕಿಕ್ ಇಳಿಸಿದ್ದಾರೆ. ಬಣಕಲ್ ಠಾಣೆಯ ಲೇಡಿ ಪಿಎಸ್‌ಐ ರೇಣುಕಾ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ:ಚಿಕ್ಕಮಗಳೂರು ಮುಳ್ಳಯ್ಯನಗಿರಿಯಲ್ಲಿ ಕಂಟ್ರೋಲ್ ಟೂರಿಸಂ, ಗಿರಿಗೆ ಬರಲು ಬುಕ್ ಮಾಡಿಕೊಂಡು ಬನ್ನಿ

10 ಹೊಸ ರೂಲ್ಸ್ ಜಾರಿ ಮಾಡಲು ಮುಂದಾದ ಎಸ್ಪಿ

ಮೂಡಿಗೆರೆ ತಾಲೂಕಿನ ದೇವರಮನೆ ಬೆಟ್ಟದಲ್ಲಿ ನಶೆ ಏರಿಸಿಕೊಳ್ತಿದ್ದವರನ್ನ ಬಣಕಲ್ ಠಾಣೆಯ ಪಿಎಸ್‌ಐ ರೇಣುಕಾ ಅವರು ಕಾರು, ಮದ್ಯದ ಬಾಟಲಿ‌ ಸಹಿತ ಠಾಣೆಗೆ ಕರೆತಂದು ಕೇಸ್ ಹಾಕ್ತಿದ್ದಂತೆ ಚಿಕ್ಕಮಗಳೂರು ಎಸ್ಪಿ‌ ಡಾ. ವಿಕ್ರಮ ಅಮಟೆ 10 ಹೊಸ ರೂಲ್ಸ್ ಜಾರಿ ಮಾಡಲು ಮುಂದಾಗಿದ್ದಾರೆ.

ಆ ಹತ್ತು ರೂಲ್ಸ್​ಗಳು ಯಾವ್ಯಾವ?

  1. ಪ್ರವಾಸಿ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ, ಉಪದ್ರವದಲ್ಲಿ ತೊಡಗುವಂತಿಲ್ಲ.
  2. ಪ್ರವಾಸಿ ಸ್ಥಳಗಳಲ್ಲಿ ಮದ್ಯಪಾನ ಮಾಡಂಗಿಲ್ಲ.
  3. ಬೇಕಾಬಿಟ್ಟಿ ವಾಹನ ನಿಲ್ಲಿಸೋ ಹಾಗಿಲ್ಲ.
  4. ಜವಾಬ್ದಾರಿಯುತವಾಗಿ ವರ್ತಿಸಬೇಕು, ಬೇಜವಾಬ್ದಾರಿ ಸಹಿಸಲ್ಲ.
  5. ಪ್ರವಾಸಿ ತಾಣಗಳಲ್ಲಿ ಮಹಿಳೆಯರು, ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಈವ್ ಟೀಸಿಂಗ್‌ನಲ್ಲಿ ತೊಡಗಿಸಿಕೊಳ್ಳುವಂತಿಲ್ಲ.
  6. ಪ್ಲಾಸ್ಟಿಕ್ ಬಾಟಲ್, ಇತರೆ ಅನುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಂಗಿಲ್ಲ.
  7. ಪ್ರಕೃತಿಯ ಉತ್ತಮ ನಿರ್ವಹಣೆ ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿಯಾಗಿದೆ.
  8. ಶಿಸ್ತು, ಕಾನೂನು ಹಾಗೂ ನೀತಿ ನಿಯಮಗಳನ್ನು ಸದಾ ಅನುಸರಿಸಿ ಗೌರವಿಸಬೇಕು.
  9. ಅರಣ್ಯ ಇಲಾಖೆ, ಜಿಲ್ಲಾಡಳಿತದ ಸೂಚನೆಗಳನ್ನು ತಪ್ಪದೆ ಪಾಲಿಸುವುದರ ಜೊತೆಗೆ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುವಂತಿಲ್ಲ.
  10. ಅಷ್ಟೇ ಅಲ್ಲದೆ ಪ್ರವಾಸಿ ಸ್ಥಳಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಎಸ್ಪಿ ವಿಕ್ರಮ ಅಮಟೆ ಹೊಸ ರೂಲ್ಸ್ ಜಾರಿಗೆ ತರಲು ಮುಂದಾಗಿದ್ದಾರೆ. ಒಂದು ವೇಳೆ ಈ ರೂಲ್ಸ್ ಬ್ರೇಕ್ ಮಾಡಿದ್ದೇ ಆದಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆಯಾಗಿ ಪ್ರವಾಸಿ ತಾಣಗಳಿಗೆ ಬಂದು ಮೋಜು‌ ಮಸ್ತಿ‌ ಮಾಡಿ, ಇತರ ಪ್ರವಾಸಿಗರು, ಸ್ಥಳೀಯರಿಗೆ ತೊಂದರೆ ಉಂಟು‌ ಮಾಡ್ತಿದ್ದವರಿಗೆ ಬ್ರೇಕ್ ಹಾಕಬೇಕೆಂಬ ಕೂಗಿಗೆ ಪೊಲೀಸ್ ಇಲಾಖೆ ಧ್ವನಿಗೂಡಿಸಿದ್ದು, ಬಣಕಲ್ ಠಾಣೆಯ ಪಿಎಸ್‌ಐ ರೇಣುಕಾ ಎಣ್ಣೆ ಹೊಡೆಯುತ್ತಿದ್ದವರ ಕಿಕ್ ಇಳಿಸಿದ ಬಳಿಕ ಎಸ್ಪಿ ಹೊಸ ರೂಲ್ಸ್ ಜಾರಿಗೆ ಮುಂದಾಗಿದ್ದಾರೆ. ಮುಂದಿನ‌ ದಿನಗಳಲ್ಲಿ ಚಿಕ್ಕಮಗಳೂರಿಗೆ ಬರುವ ಪ್ರವಾಸಿಗರು ಹುಚ್ಚಾಟಕ್ಕೆ ಮುಂದಾದ್ರೆ, ಕಾನೂನು‌ಕ್ರಮ ಜರುಗಿಸಲಿದ್ದು, ಇನ್ನಾದ್ರೂ ಕಾಫಿ ನಾಡಿನ ಪ್ರವಾಸಿ ತಾಣಗಳಲ್ಲಿ ಶಾಂತಿ ನೆಲೆಸುತ್ತಾ ಎನ್ನೋದನ್ನ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ