ಚಾರ್ಮಾಡಿ ಘಾಟ್ ನಲ್ಲಿ ಕೃತಕ ಜಲಪಾತ ಮತ್ತು ಇಬ್ಬನಿ ಸೃಷ್ಟಿಸಿರುವ ದೃಶ್ಯವೈಭವವನ್ನು ಒಬ್ಬ ಕವಿಯೇ ಚೆನ್ನಾಗಿ ಬಣ್ಣಿಸಬಲ್ಲ

|

Updated on: Jul 10, 2024 | 11:32 AM

ಕೃತಕ ಜಲಪಾತಗಳಿಂದ ನೀರು ರಸ್ತೆ ಪಕ್ಕದಲ್ಲಿನ ಕಾಲುವೆಗಳಿಗೆ ಬೀಳುತ್ತಿದೆ. ಕಾಲುವೆಗಳು ಮಾನವ ನಿರ್ಮಿತವೋ ಅಥವಾ ರಭಸದಿಂದ ಬೀಳುವ ನೀರು ಸೃಷ್ಟಿ ಮಾಡಿರುವ ತಗ್ಗು ಪ್ರದೇಶಗಳೋ ಅಂತ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ನೀರು ರಸ್ತೆಗೆ ಬರುತ್ತಿಲ್ಲ ಅನ್ನೋದೇ ಸಮಾಧಾನಕರ ಸಂಗತಿ. ನಿಮ್ಮಲ್ಲಿರುವ ಕವಿಯನ್ನು ಜಾಗೃತಗೊಳಿಸಲು ಇಲ್ಲಿಗೊಮ್ಮೆ ಬಂದು ಹೋಗಿ.

ಚಿಕ್ಕಮಗಳೂರು: ಬೆಚ್ಚನೆಯ ಮನೆ ಇರಲು ವೆಚ್ಚಕೆ ಹೊನ್ನಿರಲು ಇಚ್ಛೆಯನ್ನರಿವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಎಂದು ಹೇಳಿದ ಸರ್ವಜ್ಞರು ಮಳೆಗಾಲದಲ್ಲಿ ಚಾರ್ಮಾಡಿ ಘಾಟ್ ಪ್ರದೇಶಕ್ಕೆ ಬಂದಿದ್ದರೆ ಇಲ್ಲೂ ಒಂದು ಸ್ವರ್ಗವಿದೆ ಅನ್ನುತ್ತಿದ್ದರೇನೋ? ಚಿಕ್ಕಮಗಳೂರು ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಚಾರ್ಮಾಡಿ ಗುಡ್ಡಗಾಡು ಪ್ರದೇಶದಲ್ಲಿ ಕೃತಕ ಜಲಪಾತಗಳು ಸೃಷ್ಟಿಯಾಗಿವೆ. ಘಾಟ್ ಪ್ರದೇಶದಲ್ಲಿ ಅವುಗಳಿಂದಾಗಿ ನಿರ್ಮಾಣಗೊಂಡಿರುವ ದೃಶ್ಯವೈಭವನ್ನು ನೋಡಲು ಎರಡು ಕಣ್ಣು ಸಾಲವು ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು ಮಾರಾಯ್ರೇ. ನೂರು ಕಣ್ಣು ಸಾಲದು ನಾ ನಿನ್ನ ನೋಡಲು, ನೂರಾರು ಮಾತು ಸಾಲದು ಅಂದ ಬಣ್ಣಿಸಲು ಅಂತ ರಾಜಾ ನನ್ನ ರಾಜಾ ಚಿತ್ರದಲ್ಲಿ ನಾವೆಯೊಂದರಲ್ಲಿ ಕುಳಿತು ಚಂದ್ರಶೇಖರ್ ಚಿತ್ರದ ನಾಯಕಿ ಆರತಿಯವರನ್ನು ನೋಡುತ್ತ ಹಾಡಿರಬಹುದು. ಅದರೆ ನೀವೀಗ ಚಾರ್ಮಾಡಿ ಘಾಟ್ ಗೆ ಬಂದರೆ ನಿಮ್ಮ ಮನಸ್ಸಿನಲ್ಲಿ ಆ ಹಾಡಿನ ಸಾಲುಗಳು ಮೂಡಿದರೆ ಆಶ್ಚರ್ಯವಿಲ್ಲ. ಹಾಲಿನ ನೊರೆಯಂತೆ ಕಾಣುವ ಹರಿಯುವ ನೀರು ನಯನ ಮನೋಹರ ಮತ್ತು ಅರಸಿಕನನ್ನೂ ಕವಿಯಾಗಿಸುವ ದೃಶ್ಯಕಾವ್ಯ. ಇಲ್ಲಿ ಕಾಣುವ ಸೌಂದರ್ಯಕ್ಕೆ ಅನುರೂಪವೆನಿಸುವ ಬೇರೆ ಹಾಡುಗಳನ್ನೂ ನೀವು ಕಲ್ಪಿಸಿಕೊಳ್ಳಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಜಲಪಾತದ ಬಳಿ ಚೆಲ್ಲಾಟವಾಡುತ್ತಿದ್ದ ಯುವಕರ ಬಟ್ಟೆ ಎತ್ಹಾಕಿಕೊಂಡು ಬಂದ ಪೊಲೀಸರು!

Published On - 11:32 am, Wed, 10 July 24

Follow us on