ಚಿಕ್ಕಮಗಳೂರು ನ.21: ಬಿಜೆಪಿ (BJP) ಜೊತೆಗಿನ ಮೈತ್ರಿ ನಿರ್ಧಾರ ಕೈಗೊಂಡ ಬಳಿಕ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿಯವರ (HD Kumaraswamy) ನಿಲುವುಗಳು ಬದಲಾಗಿವೆ. ಬಲಪಂಥೀಯ ನಿಲುವುಗಳನ್ನು ವಿರೋಧ ಮಾಡುತ್ತಾ ಬಂದಿದ್ದ ಹೆಚ್ಡಿ ಕುಮಾರಸ್ವಾಮಿ ಅವರು ಬಜೆಟ್ ಅಧಿವೇಶನದಲ್ಲಿ ಹಿಂದುತ್ವಪರ ಮಾತನಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಇದೀಗ ಸಮಯ ಬಂದರೇ ದತ್ತಮಾಲೆ (Dattamale) ಹಾಕುತ್ತೇನೆ ಎಂದು ಹೇಳಿದ್ದರು. ಆದರೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿಯವರು ಈ ಹಿಂದೆ 2018ರ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಮೂಡಿಗೆರೆ ಕ್ಷೇತ್ರದಲ್ಲಿ ದತ್ತಮಾಲೆಯನ್ನು ವಿರೋಧಿಸಿ ಹೇಳಿಕೆ ನೀಡಿದ್ದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
2018ರ ಫೆಬ್ರವರಿಯಲ್ಲಿ ಚುನಾವಣಾ ಪ್ರಚಾರದ ಸಂಬಂಧ ಮೂಡಿಗೆರೆ ಪಟ್ಟಣದ ಅಡಂತ್ಯಾಯ ರಂಗ ಮಂದಿರದಲ್ಲಿ ನಡೆದಿದ್ದ ಜೆಡಿಎಸ್ ಸಮಾವೇಶ ಮಾತನಾಡಿದ್ದ ಅವರು “ಇವತ್ತು ಇವರು ಶ್ರೀ ರಾಮನ ಹೆಸರಿನಲ್ಲಿ ಪ್ರತಿ ವರ್ಷ ಮಾಲೆ ಬೇರೆ ಹಾಕುತ್ತಾರೆ. ಮಾಲೆ ಹಾಕಿಕೊಂಡು ತಾಳ ಬಡಿದುಕೊಂಡು ಚಿಕ್ಕಮಗಳೂರಿನ ಬೀದಿಯಲ್ಲಿ ಹೋಗುತ್ತಾರೆ. ಅದನ್ನ ನೀವು ಮೆಚ್ಚಿಕೊಳ್ಳುತ್ತೀರಾ? ಭಿಕ್ಷೆ ಬೇರೆ ಬೇಡುತ್ತಾರೆ. ಅದೆಂತದೋ ದತ್ತಮಾಲೆ ಹಾಕೊಂಡು ಮನೆಮನೆಗೆ ಹೋಗಿ ಭಿಕ್ಷೆ ಬೇರೆ ಬೇಡುತ್ತಾರಂತೆ. ದೇವರೇ ಕಾಪಾಡಬೇಕು ಕೈಜೋಡಿಸಿ ಮನವಿ ಮಾಡುತ್ತೇನೆ ಇದೆಲ್ಲ ಬೇಡ ನಮಗೆ. ಮೊದಲು ನೀವು ಉಳಿದರೇ ತಾನೇ ದೇವರನ್ನ ಉಳಿಸಲು ಸಾಧ್ಯ” ಎಂದು ಹೇಳಿದ್ದರು.
ಇದನ್ನೂ ಓದಿ: ದತ್ತಮಾಲೆ ಹಾಕುವೆ ಎಂದ ಕುಮಾರಸ್ವಾಮಿಯ ನಡೆಯನ್ನು ಸ್ವಾಗತಿಸಿದ ಹಿಂದೂ ಸಂಘಟನೆಗಳು
ಹೆಚ್ಡಿ ಕುಮಾರಸ್ವಾಮಿ ಅವರ ಹೇಳಿಕೆ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಹಿಂದೂ ಸಂಘಟನೆ ಕಾರ್ಯಕರ್ತರು ಹೆಚ್ಡಿ ಕುಮಾರಸ್ವಾಮಿ ವಿರುದ್ಧ ತಿರುಗಿಬಿದ್ದರು. ಇವರ ಹೇಳಿಕೆ ಮೂಡಿಗೆರೆ ಕ್ಷೇತ್ರದ ಅಂದಿನ ಹಾಲಿ ಜೆಡಿಎಸ್ ಶಾಸಕರ ಸೋಲಿಗೆ ಕಾರಣವಾಗಿತ್ತು.
ದತ್ತಮಾಲೆ ಯಾಕೆ ಹಾಕಬಾರದು? ದೇವರ ಕಾರ್ಯಕ್ರಮ ಹಾಕುವ ಸಮಯ ಬಂದರೇ ದತ್ತಮಾಲೆ ಹಾಕುತ್ತೇನೆ. ನಮ್ಮ ಧರ್ಮದ ಧರ್ಮಾಬೀಮಾನಕ್ಕೆ ನಾನು ಭಯ ಪಡುತ್ತೀನಾ? ಎಂದು ಹೆಚ್ಡಿ ಕುಮಾರಸ್ವಾಮಿ ಇತ್ತೀಚಿಗೆ ಹೇಳಿಕೆ ನೀಡಿದ್ದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿರುವ ಬಾಬಾಬುಡನ್ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠವನ್ನು ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ಪ್ರತಿ ವರ್ಷ ಭಜರಂಗದಳ ಮತ್ತು ವಿಹೆಚ್ಪಿ ಕಾರ್ಯಕರ್ತರು ದತ್ತಮಾಲೆ ಧರಿಸುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ