ಚಿಕ್ಕಮಗಳೂರು: ಅಕ್ರಮ ಭೂಮಿ ಮಂಜೂರಾತಿ ಪ್ರಕರಣ: ಅಧಿಕಾರಿಗಳ ವಿರುದ್ಧ ಮೂರು ಹಂತದಲ್ಲಿ ಕ್ರಮ
ಚಿಕ್ಕಮಗಳೂರು ಜಿಲ್ಲೆಯ ಕಡೂರು ಹಾಗೂ ಮೂಡಿಗೆರೆ ತಾಲೂಕುಗಳಲ್ಲಿ ಅಕ್ರಮವಾಗಿ ಭೂಮಿ ಮಂಜೂರಾತಿ ಮಾಡಿದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕಂದಾಯ ಇಲಾಖೆ ಮುಂದಾಗಿದೆ. ಅಲ್ಲದೆ, ಮೂರು ಹಂತಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಹೇಳಿದ್ದಾರೆ.
ಚಿಕ್ಕಮಗಳೂರು, ನ.21: ಜಿಲ್ಲೆಯ (Chikkamagaluru) ಕಡೂರು ಹಾಗೂ ಮೂಡಿಗೆರೆ ತಾಲೂಕುಗಳಲ್ಲಿ ಅಕ್ರಮವಾಗಿ ಭೂಮಿ ಮಂಜೂರಾತಿ ಮಾಡಿದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕಂದಾಯ ಇಲಾಖೆ ಮುಂದಾಗಿದೆ. ಅಲ್ಲದೆ, ಮೂರು ಹಂತಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಹೇಳಿದ್ದಾರೆ.
ನಗರದ ಪ್ರಸ್ ಕ್ಲಬ್ನಲ್ಲಿ ಮಂಗಳವಾರ (ನ.21) ನಡೆದ ತಿಂಗಳ ಅತಿಥಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಕ್ರಮ ಭೂ ಮಂಜೂರಾತಿ ಪ್ರಕರಣಕ್ಕೆ ಸಂಬಂಧಪಟ್ಟ ಕಡತ ನನ್ನ ಬಳಿ ಬಂದಿದೆ. ಶೀಘ್ರವೇ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುತ್ತೇನೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಸಿವಿಲ್ ಸರ್ವೀಸ್ ಆಕ್ಟ್ ಅಡಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಇದರೊಂದಿಗೆ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡುತ್ತೇವೆ. ಬಳಿಕ ಅಕ್ರಮವಾಗಿ ಮಂಜೂರು ಮಾಡಿದ್ದ ಭೂಮಿಯನ್ನು ಯಾವುದೇ ಮುಲಾಜಿಲ್ಲದೆ ವಶಕ್ಕೆ ಪಡೆಯುತ್ತೇವೆ. ಅಕ್ರಮ ಭೂ ಮಂಜೂರಾತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ 10 ಸಾವಿರ ದಾಖಲೆಗಳ ಪರಿಶೀಲನೆ ನಡೆಸುತ್ತೇವೆ ಎಂದರು.
20 ಕೋಟಿ ನೀಡಿ ಭೂಮಿ ಖರೀದಿ
ಅಕ್ರಮ ಭೂ ಮಂಜೂರಾತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಲು ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ತನಿಖೆಗೆ ತಂಡ ರಚನೆ ಮಾಡಿದ್ದೇವೆ. ಜಿಲ್ಲೆಯ ಎಲ್ಲೆಡೆಯೂ ಜಮೀನನ್ನು ಒತ್ತುವರಿ ಮಾಡಲಾಗಿದೆ. ಹೀಗಾಗಿ ಸ್ಮಶಾನ, ಅಂಗನವಾಡಿ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಭೂಮಿ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಸ್ಮಶಾನಕ್ಕಾಗಿ ಜಮೀನು ಖರೀದಿ ಮಾಡಲು 20 ಕೋಟಿ ರೂಪಾಯಿ ಹಣವನ್ನು ನಾನೇ ನೀಡಿದ್ದೇನೆ. ಸರ್ಕಾರದ ಬಳಿಯೇ ಭೂಮಿ ಇಲ್ಲ ಎನ್ನುವುದು ಆತಂಕಕಾರಿ ಸಂಗತಿಯಾಗಿದೆ ಎಂದಿದ್ದಾರೆ.
ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಂಟಿ ಸರ್ವೆ
ಜಿಲ್ಲೆಯಲ್ಲಿ ಅರಣ್ಯ ಭೂಮಿ ಹಾಗೂ ಕಂದಾಯ ಭೂಮಿ ಗುರುತು ಮಾಡಲು ಜಂಟಿ ಸರ್ವೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಸರ್ವೇ ನಂಬರ್ ವಾರು ಮಾಹಿತಿ ಪಟ್ಟಿ ಬಿಡುಗಡೆ ಮಾಡಲಾಗುವುದು. ಯಾವ ಸರ್ವೇ ನಂಬರ್ನಲ್ಲಿ ಅರಣ್ಯ ಪ್ರದೇಶ ವಿಧ ಹಾಗೂ ಕಂದಾಯ ಭೂಮಿ ಇದೆ ಎಂದು ಸರ್ವೇ ಮಾಡಲಾಗುವುದು ಎಂದರು.
ಇದನ್ನೂ ಒದಿ: ಯಾದಗಿರಿ: ಕರ್ತವ್ಯ ಲೋಪ ಹಿನ್ನೆಲೆ ಕಂದಾಯ ಇಲಾಖೆಯ 8 ಜನ ಅಧಿಕಾರಿಗಳು ಅಮಾನತು
ಎಲ್ಲಿ ಗೊಂದಲವಿದೆಯೋ ಅಲ್ಲಿ ಏರಿಯಲ್ ಸರ್ವೇ ಅಗತ್ಯವಿದ್ದಲ್ಲಿ ಲ್ಯಾಂಡ್ ಸ್ಕೇಪ್ ಸರ್ವೆ ನಡೆಸಲಾಗುವುದು. ಆಗ ಅರಣ್ಯ ಹಾಗೂ ಕಂದಾಯ ಭೂಮಿ ಗೊಂದಲ ಬಗೆಹರಿಯಲಿದೆ. ಇನ್ನು ಹತ್ತು ದಿನಗಳ ಒಳಗಾಗಿ ಗ್ರಾಪಂ ಮಟ್ಟದಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಕಾಫಿ ತೋಟ ಗುತ್ತಿಗೆ ನೀಡುವ ಸಂಬಂಧ ಪರಿಶೀಲನೆ
ಅಕ್ರಮವಾಗಿ ಒತ್ತುವರಿ ಮಾಡಿ ಕಾಫಿ ತೋಟ ಮಾಡಿರುವ ಪ್ರದೇಶವನ್ನು ಗುತ್ತಿಗೆ ನೀಡುವ ಸಂಬಂಧ ಪರಿಶೀಲನೆ ನಡೆಸಲಾಗುವುದು ಎಂದು ರಾಜೇಂದ್ರ ಕುಮಾರ್ ಕಟಾರಿಯ ತಿಳಿಸಿದರು. ಸಾಕಷ್ಟು ಪ್ರದೇಶವನ್ನು ಒತ್ತುವರಿ ಮಾಡಿ ಕಾಫಿ ಬೆಳೆಯಲಾಗುತ್ತಿದೆ. ಈ ಭೂಮಿಯನ್ನು ಗುತ್ತಿಗೆ ನೀಡುವಂತೆ ಈ ಹಿಂದೆಯೇ ಹಲವರು ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ. ಹೀಗಾಗಿ ಭೂಮಿ ಗುತ್ತಿಗೆ ನೀಡಲು ಸಾಧ್ಯವಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಆದರೆ ಕಾನೂನಿಗೆ ವಿರುದ್ಧವಾಗಿ ಭೂಮಿ ಒತ್ತುವರಿ ಮಾಡಿದ್ದರೆ ಅಂತಹದ್ದನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಕಂದಾಯ ಭೂಮಿ ಕೊರತೆ
ಜಿಲ್ಲೆಯಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಭೂಮಿಯೇ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಅನಧಿಕೃತ ಸಾಗುವಳಿ ಸಕ್ರಮಗೊಳಿಸುವ ಮುನ್ನ ಸಾರ್ವಜನಿಕ ಬಳಕೆಗೆ ವಶಪಡಿಸಿಕೊಳ್ಳಲು ಅವಕಾಶವಿದೆ. ಹೀಗಾಗಿ ಸಾರ್ವಜನಿಕ ಬಳಕೆಗೆ ಭೂಮಿ ಗುರುತಿಸುವ ಕೆಲಸ ಮಾಡುತ್ತೇವೆ ಎಂದು ರಾಜೇಂದ್ರ ಕುಮಾರ್ ಕಟಾರಿಯಾ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ